ಮಾಂಟ್ಗೊಮೆರಿ (ಅಮೆರಿಕ): ಅಲಬಾಮಾದಲ್ಲಿ ಎರಡನೇ ಕೈದಿಯನ್ನು ಸಾರಜನಕ ಅನಿಲವನ್ನು ಬಳಸಿ ಮರಣದಂಡನೆ ನೀಡುವ ಪ್ರಯತ್ನಗಳು ನಡೆದಿವೆ ಎಂದು ವರದಿಯಾಗಿದೆ. ಅಲಬಾಮಾದಲ್ಲಿ ನೈಟ್ರೋಜನ್ ಬಳಕೆ ಮಾಡಿ ಮೊದಲ ವಿವಾದಾತ್ಮಕ ಮರಣ ದಂಡನೆ ನೀಡಲಾಗಿತ್ತು. ಆ ನಂತರ ಮತ್ತೊಂದು ಮರಣ ದಂಡನೆ ಪ್ರಕರಣದಲ್ಲೂ ನೈಟ್ರೋಜನ್ ಬಳಕೆ ಮಾಡುವ ಪ್ರಯತ್ನ ನಡೆದಿದೆ.
ಅಲಬಾಮಾ ಅಟಾರ್ನಿ ಜನರಲ್ ಸ್ಟೀವ್ ಮಾರ್ಷಲ್ ಅವರ ಕಚೇರಿಯು ಅಲನ್ ಯುಜೀನ್ ಮಿಲ್ಲರ್‌ಗೆ ಮರಣದಂಡನೆ ದಿನಾಂಕವನ್ನು ನಿಗದಿಪಡಿಸುವಂತೆ ಅಲಬಾಮಾ ಸುಪ್ರೀಂ ಕೋರ್ಟ್‌ಗೆ ಬುಧವಾರ ಕೇಳಿಕೊಂಡಿದೆ. ಅಪರಾಧಿ ಮಿಲ್ಲರ್‌ಗೆ ನೈಟ್ರೋಜನ್ ಹೈಪೋಕ್ಸಿಯಾ ಬಳಕೆ ಮಾಡಿಕೊಂಡು ಮರಣದಂಡನೆ ವಿಧಿಸಲಾಗುವುದು ಎಂದು ಅಲಬಾಮಾ ಆಡಳಿತ ಹೇಳಿದೆ. ಅಪರಾಧಿ ಮಿಲ್ಲರ್(59) 1999ರಲ್ಲಿ ಬರ್ಮಿಂಗ್ಹ್ಯಾಮ್ ನಗರದಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಆದರೆ, ಅಲಬಾಮಾ ಆಡಳಿತದ ನಿರ್ಧಾರವನ್ನು ಡಿಫೆನ್ಸ್ ವಕೀಲರು ವಿರೋಧಿಸಿದ್ದಾರೆ. ಮೊದಲ ಮರಣದಂಡನೆ ವೇಳೆ, ಅಪರಾಧಿ ಕೆನ್ನೆತ್ ಸ್ಮಿತ್ ನೈಟ್ರೋಜನ್ ಹೈಪೋಕ್ಸಿಯಾ ಬಳಸಿದಾಗ ಕೆಲ ನಿಮಿಷಗಳ ಕಾಲ ಒದ್ದಾಡಿ ಪ್ರಾಣಬಿಟ್ಟರು. ಇದು ಅಮಾನವೀಯವಾಗಿತ್ತು ಎಂದು ವಾದ ಮುಂದಿಟ್ಟಿದ್ದಾರೆ. ಆದರೆ ಮಾರ್ಷಾಲ್ ನೈಟ್ರೋಜನ್ ಹೈಪೋಕ್ಸಿಯಾ ನೀಡಿ ಮರಣದಂಡನೆ ನೀಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲ ಬಗೆಯ ಪರೀಕ್ಷೆಗಳು, ಪ್ರಯೋಗಗಳ ನಂತರವೇ ಮರಣದಂಡನೆಗೆ ನೈಟ್ರೋಜನ್ ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ಆದರೆ ನೈಟ್ರೋಜನ್ ಬಳಕೆಯನ್ನು ನಿರ್ಬಂಧಿಸುವಂತೆ ಮತ್ತೊಬ್ಬ ಮರಣದಂಡನೆ ಶಿಕ್ಷೆಗೆ ಒಳಗಾದ ಕೈದಿ ಕೋರ್ಟ್ ಮೆಟ್ಟಿಲೇರಿದ್ದಾನೆ. ಸ್ಮಿತ್ ಮರಣದಂಡನೆಯೊಂದು ಮಾನವ ಪ್ರಯೋಗವಾಗಿದೆ. ಈ ಮರಣ ದಂಡನೆ ವೇಳೆ ಅಪರಾಧಿ ಕೆನ್ನೆತ್ ಸ್ಮಿತ್ ತ್ವರಿತವಾಗಿ ಉಸಿರುಕಟ್ಟಿಲ್ಲ ಹಾಗೂ ಇದು ನೋವು ರಹಿತವಾಗಿಲ್ಲ ಎಂದು ಸಾಬೀತಾಗಿದೆ ಎಂದು ಕೋರ್ಟ್ನಲ್ಲಿ ವಾದ ಮಾಡಲಾಗಿದೆ.
ಇನ್ನು ಈ ಮೊದಲು ಮಿಲ್ಲರ್ನನ್ನು ಸೆಪ್ಟೆಂಬರ್ 2022 ರಂದು ಮಾರಕ ಚುಚ್ಚುಮದ್ದಿನ ಮೂಲಕ ಗಲ್ಲಿಗೇರಿಸಲು ಅಲಬಾಮಾ ಆಡಳಿತ ಪ್ರಯತ್ನ ಮಾಡಿತ್ತು. ಆದರೆ ಕೈದಿಯ ರಕ್ತನಾಳದ ಇಂಟ್ರಾವೆನಸ್ ಲೈನ್ ಸಂಪರ್ಕಿಸಲು ಸಾಧ್ಯವಾಗದಿದ್ದರಿಂದ ಮರಣದಂಡನೆಯನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಕೈದಿ ಮಿಲ್ಲರ್, 2022 ರ ಮಾರಣಾಂತಿಕ ಚುಚ್ಚುಮದ್ದಿನ ಯತ್ನದ ಸಮಯದಲ್ಲಿ ಸೆರೆಮನೆಯ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ನನಗೆ ಸೂಜಿ ಚುಚ್ಚಿದ್ದರು, ರಕ್ತನಾಳವನ್ನು ಹುಡುಕಲು ಪ್ರಯತ್ನಿಸಿದರು. ಆದರೆ, ಅಗತ್ಯ ರಕ್ತನಾಳ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ತಾವು ಸಾಕಷ್ಟು ನೋವು ಅನುಭವಿಸಿದ್ದಾಗಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾರಣಾಂತಿಕ ಚುಚ್ಚುಮದ್ದು ನೀಡುವುದಕ್ಕೆ ಪರ್ಯಾಯ ವಿಧಾನವನ್ನು ಅಲ್ಲಿನ ರಾಜ್ಯ ಶಾಸಕಾಂಗವು ಅನುಮೋದಿಸಿತ್ತು. ಆ ನಂತರ ಅಲಬಾಮಾ ಆಡಳಿತವು ಆಗಸ್ಟ್ನಲ್ಲಿ ನೈಟ್ರೋಜನ್ ಹೈಪೋಕ್ಸಿಯಾ ವಿಧಾನಕ್ಕಾಗಿ ಮೊದಲ ಬಾರಿಗೆ ಮರಣದಂಡನೆ ಪ್ರೋಟೋಕಾಲ್ಗಳನ್ನು ಅಂತಿಮಗೊಳಿಸಿತ್ತು. ಅದರಂತೆ ಕೆನ್ನೆತ್ ಸ್ಮಿತ್ಗೆ ಈ ವಿಧಾನದ ಮೂಲಕ ಮೊದಲ ಮರಣದಂಡನೆ ವಿಧಿಸಲಾಗಿತ್ತು.
ಇದನ್ನು ಓದಿ: ಇದೇ ಮೊದಲು! ಕೊಲೆ ಅಪರಾಧಿಗೆ ನೈಟ್ರೋಜನ್ ಹೈಪೋಕ್ಸಿಯಾ ಮೂಲಕ ಮರಣದಂಡನೆ