ಬೀಜಿಂಗ್ (ಚೀನಾ): ಚೀನಾದ ಝುಹೈ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 62 ವರ್ಷದ ವ್ಯಕ್ತಿಯೊಬ್ಬರು ಜನರ ಗುಂಪಿನ ಮೇಲೆ ಕಾರು ಹರಿಸಿದ್ದು, ಘಟನೆಯಲ್ಲಿ 35 ಮಂದಿ ಸಾವನ್ನಪ್ಪಿದ್ದು, 43 ಮಂದಿ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.
ಝುಹೈ ನಗರದಲ್ಲಿ ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಮಧ್ಯೆಯೇ ಕಾರು ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 62 ವರ್ಷದ ಚಾಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.
ಸೋಮವಾರ ಸಂಜೆ 7:48 ರ ಸುಮಾರಿಗೆ ಬೀಜಿಂಗ್‌ನಿಂದ ದಕ್ಷಿಣಕ್ಕೆ 2,200 ಕಿಮೀ ದೂರದಲ್ಲಿರುವ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ ನಾಗರಿಕರು ವ್ಯಾಯಾಮ ಮಾಡುತ್ತಿದ್ದಾಗ, ಆರೋಪಿ ಕಾರು ಚಾಲಕ ಜನರ ಮೇಲೆ ಕಾರನ್ನು ಗುದ್ದಿಕೊಂಡು ಹೋಗಿದ್ದಾನೆ. ಇದು ಅಪಘಾತವೋ ಅಥವಾ ದಾಳಿಯೋ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಪರಾಧಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್; ಕಾರು ಅಪಘಾತದ ಭೀಕರ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಸ್ತೆಯ ಮೇಲೆ ಜನರು ರಕ್ತಸಿಕ್ತವಾಗಿ ಬಿದ್ದು ಸಹಾಯಕ್ಕಾಗಿ ಮೊರೆ ಇಡುತ್ತಿರುವ ದೃಶ್ಯಗಳು ಕಾಣಬಹುದು.
ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗ ಕುಸಿತಕ್ಕೆ ಒಂದು ವರ್ಷ: ದೇಶ ಕಂಡ ಅತ್ಯುತ್ತಮ ರಕ್ಷಣಾ ಕಾರ್ಯಾಚರಣೆ ಹೇಗಿತ್ತು ಗೊತ್ತಾ?