ಟೆಲ್ ಅವೀವ್ : ಗಾಜಾದಲ್ಲಿ ಹಮಾಸ್ ವಶದಲ್ಲಿದ್ದ 136 ಒತ್ತೆಯಾಳುಗಳ ಪೈಕಿ 31 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ದೃಢಪಡಿಸಿದೆ. ಒತ್ತೆಯಾಳುಗಳ ಕುಟುಂಬಗಳಿಗೆ ಅವರ ಸಾವಿನ ಬಗ್ಗೆ ಸೇನೆ ಮಾಹಿತಿ ನೀಡಿದೆ ಎಂದು ಐಡಿಎಫ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಕದನ ವಿರಾಮ ಆರಂಭಿಸಲು ಎರಡೂ ಪಕ್ಷಗಳೊಂದಿಗೆ ಸತತ ಚರ್ಚೆ ನಡೆಸುತ್ತಿರುವ ಅಮೆರಿಕ, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಅಂತಾರಾಷ್ಟ್ರೀಯ ಮಧ್ಯಸ್ಥಗಾರರಿಗೆ ಇಸ್ರೇಲ್ ಸೇನೆ, ಮಿಲಿಟರಿ ಗುಪ್ತಚರ ಮತ್ತು ಗುಪ್ತಚರ ಸಂಸ್ಥೆಗಳು ಈ ವಿಷಯವನ್ನು ತಿಳಿಸಿವೆ.
ಅಮೆರಿಕ, ಕತಾರ್ ಮತ್ತು ಈಜಿಪ್ಟ್ನ ಪ್ರಯತ್ನದಿಂದಾಗಿ ಇಸ್ರೇಲ್ ಮತ್ತು ಹಮಾಸ್ ನವೆಂಬರ್ 24 ರಿಂದ ಡಿಸೆಂಬರ್ 1 ರವರೆಗೆ ಒಂದು ವಾರದ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು. ಒಂದು ವಾರದ ಸಂಕ್ಷಿಪ್ತ ಕದನ ವಿರಾಮದ ಸಮಯದಲ್ಲಿ, ಹಮಾಸ್ ವಶದಲ್ಲಿದ್ದ 253 ಒತ್ತೆಯಾಳುಗಳ ಪೈಕಿ 105 ಜನರನ್ನು ಬಿಡುಗಡೆ ಮಾಡಲಾಗಿತ್ತು ಮತ್ತು ಇಸ್ರೇಲ್ ಜೈಲುಗಳಲ್ಲಿದ್ದ 324 ಪ್ಯಾಲೆಸ್ಟೈನ್ ಕೈದಿಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು.
ಎರಡನೇ ಕದನ ವಿರಾಮದ ಚರ್ಚೆಗಳು ಮುಂದುವರಿದ ಹಂತದಲ್ಲಿವೆ ಮತ್ತು ಇನ್ನು ಕೆಲವೇ ದಿನಗಳಲ್ಲಿ ಗೊಂದಲಕ್ಕೆ ಅಂತ್ಯ ಹಾಡುವ ನಿರೀಕ್ಷೆಯಿದೆ ಎಂದು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಅಲ್ - ಥಾನಿ ಹೇಳಿದ್ದಾರೆ. ಹಮಾಸ್ ವಶದಲ್ಲಿರುವ 35 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆಗೆ ಪ್ರತಿಯಾಗಿ ಒಂದು ತಿಂಗಳ ಕಾಲ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ. ಒಪ್ಪಂದದ ಭಾಗವಾಗಿ ಇಸ್ರೇಲ್ ತನ್ನ ಜೈಲುಗಳಲ್ಲಿರುವ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೈನಿಯರನ್ನು ಬಿಡುಗಡೆ ಮಾಡಲಿದೆ. ಆದರೆ, ಶಾಶ್ವತ ಯುದ್ಧ ನಿಲ್ಲಿಸುವ ಹಮಾಸ್ನ ಷರತ್ತು ಒಪ್ಪಲು ಇಸ್ರೇಲ್ ನಿರಾಕರಿಸಿದೆ ಎಂದು ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಗಾರರು ಹೇಳಿದ್ದಾರೆ.
ಕದನ ವಿರಾಮ ಒಪ್ಪಂದಕ್ಕೆ ಹಮಾಸ್ನ ಪ್ರತಿಕ್ರಿಯೆ ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸ್ಸಾದ್ಗೆ ತಲುಪಿದೆ ಮತ್ತು ಅದರ ವಿವರಗಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.
ಮಧ್ಯಸ್ಥಿಕೆ ಮಾತುಕತೆಗಳು ತ್ವರಿತ ಗತಿಯಲ್ಲಿ ಸಾಗಿರುವುದರಿಂದ ಕದನ ವಿರಾಮ (ಕನಿಷ್ಠ ಒಂದು ತಿಂಗಳು) ತಲುಪುವ ಸಾಧ್ಯತೆಗಳು ಕಾಣಿಸುತ್ತಿವೆ. ಕದನ ವಿರಾಮ ಸನ್ನಿಹಿತವಾಗಿದೆ ಎಂದು ಮಧ್ಯಸ್ಥಿಕೆ ಮಾತುಕತೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕತಾರ್ ಪ್ರಧಾನಿ ಹೇಳಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಬಂದೂಕುಧಾರಿಗಳು ಗಡಿಯಾಚೆಯಿಂದ ಆರಂಭಿಸಿದ ದಾಳಿಯ ನಂತರ ಸಂಘರ್ಷ ಏರ್ಪಟ್ಟಿದೆ. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಸುಮಾರು 1,300 ಜನರು ಕೊಲ್ಲಲ್ಪಟ್ಟರು ಮತ್ತು ಸುಮಾರು 250 ಜನರನ್ನು ಹಮಾಸ್ ಒತ್ತೆಯಾಳುಗಳಾಗಿ ತೆಗೆದುಕೊಂಡು ಹೋಗಿದೆ.
ಇದನ್ನೂ ಓದಿ : ಇರಾನ್ಗೆ ಹೋಗಲು ಭಾರತೀಯರಿಗೆ ಇನ್ನು ಮುಂದೆ ವೀಸಾ ಬೇಕಿಲ್ಲ