World Thrombosis Day: ಥ್ರಂಬೋಸಿಸ್ ಎನ್ನುವುದು ಹೃದಯರಕ್ತನಾಳಕ್ಕೆ ಸಂಬಂಧಿಸಿದ ಅಸ್ವಸ್ಥತೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಅಭಿದಮನಿಯ ಥ್ರಂಬೋಎಂಬೊಲಿಸಮ್ ಇವುಗಳಲ್ಲಿ ಪ್ರಮುಖವು. ಈ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 13ನ್ನು ವಿಶ್ವ ಥ್ರಂಬೋಸಿಸ್ ದಿನವಾಗಿ ಆಚರಿಸಲಾಗುತ್ತಿದೆ.
ಗುರಿ:
- ಥ್ರಂಬೋಸಿಸ್ ಹರಡುವಿಕೆ, ಅಪಾಯಗಳ ಬಗ್ಗೆ ಅರಿವು.
- ರೋಗನಿರ್ಣಯ ಮಾಡದ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡುವುದು.
- ರೋಗದ ತಡೆಗಟ್ಟುವಿಕೆ ಪ್ರಮಾಣ ಹೆಚ್ಚಿಸುವುದು.
- ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವುದು.
- ಥ್ರಂಬೋಸಿಸ್ ಹೊರೆ ಕಡಿಮೆ ಮಾಡಲು ಸಂಶೋಧನೆಗೆ ಬೆಂಬಲ.
ರಕ್ತ ಹೆಪ್ಪುಗಟ್ಟುವಿಕೆ ಅಪಾಯವನ್ನು ಕಡಿಮೆ ಮಾಡುವ ಮತ್ತು ರಕ್ತ ಪರಿಚಲನೆ ಸುಧಾರಿಸಲು ವ್ಯಾಯಾಮ ಮಾಡುವಂತೆ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಕಡಿಮೆ ಚಲನಶೀಲತೆಯು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಿಸುತ್ತದೆ ಮತ್ತು ಇದು ರೋಗ ಮತ್ತು ಸಾವಿಗೂ ಗಮನಾರ್ಹ ಕಾರಣವಾಗಿದೆ.
ಇತಿಹಾಸ: 19ನೇ ಶತಮಾನದಲ್ಲಿ ಜರ್ಮನ್ ವೈದ್ಯ ಡಾ.ರುಡಾಲ್ಫ್ ವಿರ್ಚೋವ್ ಜನ್ಮದಿನದ ಗೌರವಾರ್ಥವಾಗಿ ವಿಶ್ವ ಥ್ರಂಬೋಸಿಸ್ ದಿನವನ್ನು 2014ರಲ್ಲಿ ಪ್ರಾರಂಭಿಸಲಾಯಿತು. ವಿರ್ಚೋವ್ ಅವರು ಥ್ರಂಬೋಸಿಸ್ನ ಕಾರ್ಯವಿಧಾನಗಳನ್ನು ಮೊದಲು ಗುರುತಿಸಿ ವಿವರಿಸಿದವರು. ರಕ್ತ ಹೆಪ್ಪುಗಟ್ಟುವಿಕೆಯ ಕುರಿತಾದ ಅವರ ಸಂಶೋದನೆಯು ನಾಳೀಯ ಔಷಧ ಕ್ಷೇತ್ರಕ್ಕೆ ಅಡಿಪಾಯ ಹಾಕಿದೆ. ಸಾವು ಮತ್ತು ಅಂಗವೈಕಲ್ಯಕ್ಕೆ ಇದು ಪ್ರಮುಖ ಕಾರಣವಾಗಿರುವುದರಿಂದ ಥ್ರಂಬೋಸಿಸ್ನಿಂದ ಉಂಟಾಗುವ ಸಾರ್ವಜನಿಕ ಆರೋಗ್ಯ ಸವಾಲನ್ನು ಪರಿಹರಿಸಲು ಈ ಉಪಕ್ರಮ ನೆರವಾಗಿದೆ.
ಇಂಟರ್ನ್ಯಾಷನಲ್ ಸೊಸೈಟಿ ಆನ್ ಥ್ರಂಬೋಸಿಸ್ ಮತ್ತು ಹೆಮೋಸ್ಟಾಸಿಸ್ (ISTH): 1969ರಲ್ಲಿ ಸ್ಥಾಪನೆಯಾದ ISTH ವಿಶ್ವಾದ್ಯಂತ ಪ್ರಮುಖ ವೈದ್ಯಕೀಯ ಮತ್ತು ವೈಜ್ಞಾನಿಕ ವೃತ್ತಿಪರ ಸೊಸೈಟಿಯಾಗಿದೆ. ಇದನ್ನು ಥ್ರಂಬೋಸಿಸ್ ಮತ್ತು ಹೆಮೋಸ್ಟಾಸಿಸ್‌ಗೆ ಸಂಬಂಧಿಸಿದ ಪರಿಸ್ಥಿತಿಗಳ ತಿಳುವಳಿಕೆ, ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆ ಮುಂದುವರಿಸಲು ಸಮರ್ಪಿಸಲಾಗಿದೆ. ISTH ಎಂಬುದು ಅಂತಾರಾಷ್ಟ್ರೀಯ ವೈದ್ಯಕೀಯ-ವೈಜ್ಞಾನಿಕ ವೃತ್ತಿಪರ ಸಂಸ್ಥೆಯಾಗಿದ್ದು, 124ಕ್ಕೂ ಹೆಚ್ಚು ದೇಶಗಳಲ್ಲಿ ರೋಗಿಗಳ ಜೀವನವನ್ನು ಸುಧಾರಿಸಲು 7,000ಕ್ಕೂ ಹೆಚ್ಚು ವೈದ್ಯರು, ಸಂಶೋಧಕರು ಮತ್ತು ಶಿಕ್ಷಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ರಕ್ತ ಹೆಪ್ಪುಗಟ್ಟುವಿಕೆ ತಡೆಯುವ ಕ್ರಮಗಳು:
- ಆರೋಗ್ಯಕರ ದೇಹ ತೂಕ ಕಾಪಾಡಿಕೊಳ್ಳುವುದು.
- ವ್ಯಾಯಾಮ, ಯೋಗ ಮಾಡುವುದು.
- ಧೂಮಪಾನ ತ್ಯಜಿಸುವುದು.
- ಪ್ರಯಾಣದ ಸಮಯದಲ್ಲಿ ವಿರಾಮ ತೆಗೆದುಕೊಳ್ಳುವುದು.
- ಸೋಡಿಯಂ ಸೇವನೆಗೆ ಮಿತಿ.
ರಕ್ತ ಹೆಪ್ಪುಗಟ್ಟುವಿಕೆ ಅಪಾಯ ಕಡಿಮೆ ಮಾಡುವ ವ್ಯಾಯಾಮಗಳು:
- ವಾಕಿಂಗ್
- ಕಾಲುಗಳ ವ್ಯಾಯಾಮ
- ಬಾಗುವುದು
- ಈಜು
ಇದನ್ನೂ ಓದಿ: ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನ: ಏನು ಈ ದಿನದ ವೈಶಿಷ್ಟ್ಯ? ಇಂಥಹದ್ದೊಂದು ದಿನ ಇರುವುದು ಏಕೆ?