ದಕ್ಷಿಣ ಭಾರತದ ಜನಪ್ರಿಯ ತಿಂಡಿ ಎಂದು ಕರೆಯಲ್ಪಡುವ ದೋಸೆಯನ್ನು ದೇಶದಾದ್ಯಂತ ಬಹುತೇಕ ಕಡೆ ತಯಾರಿಸಲಾಗುತ್ತದೆ. 5ನೇ ಶತಮಾನದಿಂದಲೂ ಈ ದೋಸೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಕರ್ನಾಟಕದಲ್ಲಂತೂ ಇದರ ಖ್ಯಾತಿ ತುಸು ಹೆಚ್ಚೇ ಎನ್ನಬಹುದು. ಉಡುಪಿಯ ದೇವಾಲಯದ ಬೀದಿಗಳಲ್ಲಿ ಇದು ಕಾಮನ್ ಎಂಬಂತೆ ಕಂಡು ಬರುತ್ತದೆ. ಸಾಮಾನ್ಯವಾಗಿ ದೋಸೆ, ದೋಸೈ ಅಥವಾ ದೋಸೇ ಎಂದು ಉಚ್ಚರಿಸಲಾಗುತ್ತದೆ. ಈ ಬಗ್ಗೆ ಕ್ರಿ.ಶ 1054ರಲ್ಲಿ ತಮಿಳು ಸಾಹಿತ್ಯದಲ್ಲಿ ಬಳಸಲಾಗಿದೆ. ಚಾಲುಕ್ಯ ರಾಜ ಸೋಮೇಶ್ವರ III ದೋಸೆ ಬಗ್ಗೆ ಉಲ್ಲೇಖಿಸಿದ್ದಾರೆ.
ದೋಸೆ ಬಗ್ಗೆ ಇರುವ ಬೇರೆ ಬೇರೆ ಐತಿಹ್ಯಗಳು; ಆಹಾರ ಇತಿಹಾಸಕಾರ ಪಿ ತಂಕಪ್ಪನ್ ನಾಯರ್ ಅವರು ದೋಸೆಯ ಮೂಲದ ಬಗ್ಗೆ ಉಲ್ಲೇಖಿಸಿದ್ದಾರೆ. ಯುದ್ಧ ಒಂದರಲ್ಲಿ ಕರ್ನಾಟಕ, ತಮಿಳುನಾಡಿನ ಮೇಲೆ ವಿಜಯ ಸಾಧಿಸಿತ್ತಂತೆ. ಅವರ ಪ್ರಕಾರ, ಇದು ಕರ್ನಾಟಕದ ಉಡುಪಿ ಪಟ್ಟಣದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಉಡುಪಿ ಹೋಟೆಲ್ ಎಂಬ ಪದದಿಂದಲೇ ಗುರುತಿಸಲಾಗುತ್ತಿದೆ. ಕ್ರಿಶ 1126ರ ಸುಮಾರಿಗೆ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜ ಸೋಮೇಶ್ವರ III, ತನ್ನ ಪುಸ್ತಕ ಮಾನಸೋಲ್ಲಾಸದಲ್ಲಿ ದೋಸೆ ಬಗ್ಗೆ ವಿವರಿಸಿದ್ದು, ದೋಸೆ ತಯಾರಿಸುವ ವಿಧಾನವನ್ನು ತಮ್ಮ ಮನೋಲ್ಲಾಸದಲ್ಲಿ ಬರೆದಿದ್ದಾರೆ.

ತಮಿಳುನಾಡಿನ ಆಹಾರ ಇತಿಹಾಸಕಾರ ಕೆ.ಟಿ.ಆಚಾಯ ಅವರು ತಮ್ಮ ಪುಸ್ತಕ ದಿ ಸ್ಟೋರಿ ಆಫ್ ಅವರ್ ಫುಡ್‌ನಲ್ಲಿ (2003) ದೋಸೆ 1ನೇ ಶತಮಾನದಿಂದಲೂ ತಮಿಳು ಸಂಸ್ಕೃತಿಯಲ್ಲಿತ್ತು ಎಂದು ಹೇಳುತ್ತಾರೆ. ಇದು ತಮಿಳುನಾಡು, ಪುದುಚೇರಿ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಿರುವ 'ಪ್ರಾಚೀನ ತಮಿಳು ಪ್ರದೇಶದ' ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ. ಸಂಗಮ್ ಸಾಹಿತ್ಯದ ಮೂಲಗಳನ್ನು ಉಲ್ಲೇಖಿಸಿ ಅವರು ಈ ಬಗ್ಗೆ ಬರೆದಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ಉಡುಪಿಯ ಭಟ್ಟರು, ಧಾರ್ಮಿಕ ವಿಧಿ ವಿಧಾನಗಳಿಂದ ತಪ್ಪಿಸಿಕೊಳ್ಳಲು ಮದ್ಯವನ್ನು ಸೇವಿಸಲು ಬಯಸಿದ್ದರಂತೆ, ಆದರೆ ಅದು ಲಭ್ಯವಿಲ್ಲದ ಕಾರಣದಿಂದಾಗಿ ಅಕ್ಕಿಯನ್ನೇ ಬಳಸಿ ಮದ್ಯ ತಯಾರಿಕೆ ಮುಂದಾಗಿದ್ದರಂತೆ, ಆದರೆ ಅವರು ಆ ಪ್ರಯತ್ನದಲ್ಲಿ ವಿಫಲರಾಗಿ ತವಾದಲ್ಲಿ ಹುದುಗು ಬಂದ ಅಕ್ಕಿ ಹಿಟ್ಟನ್ನು ರೌಂಡಾಗಿ ಹರಡಿ, ಅದನ್ನು ಬೇಯಿಸಿದಾಗ ಕ್ರಿಸ್ಪಿಯಾದ ಭಕ್ಷ್ಯ ರೆಡಿ ಆಗಿತ್ತಂತೆ. ಅದು ಮುಂದೆ, ದೋಸೆ ಆಯ್ತು ಎಂಬ ಕಥೆ ಕೂಡಾ ಇದೆ.
ಈಗ ಇದನ್ನು ದೋಸೆ ಎಂದು ಕರೆಯುವ ಕಾರಣವು ತಮಾಷೆ ಆಗಿಯೇ ಇದೆ. ಕನ್ನಡದಲ್ಲಿ ದೋಷ ಎಂಬ ಪದವು ಉಪದ್ರವ, ಕಳಂಕ ಮತ್ತು ಅಪರಾಧ ಎಂಬಂತಹ ಅರ್ಥಗಳನ್ನು ಸೂಚಿಸುತ್ತದೆ. ಭಟ್ಟರು ಮದ್ಯ ಸೇವಿಸಲು ಪ್ರಯತ್ನಿಸಿದಾಗ ಈ ತರಹದ ಖಾದ್ಯ ಹುಟ್ಟಿಕೊಂಡಿದೆ. ಅಂದು ಅವರು ಮಾಡಿದ ಎಡವಟ್ಟು ಈಗ ರುಚಿಕರವಾದ ಮತ್ತು ಗರಿಗರಿಯಾದ ದೋಸೆ ಎಂಬ ಖಾದ್ಯವಾಗಿ ಪ್ರಸಿದ್ಧಿಯಾಗಿದೆ.
ದೋಸೆ ಕೆಲವು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೆಚ್ಚಿನ ಕಾರ್ಬೋಹೈಡ್ರೇಟ್, ಕಡಿಮೆ ಕ್ಯಾಲೋರಿಯನ್ನು ಇದು ಹೊಂದಿದ್ದು, ಜನಪ್ರಿಯ ಆಹಾರ ಭಕ್ಷ್ಯಗಳಲ್ಲಿ ಒಂದಾಗಿದೆ. ದೋಸೆ ಹಿಟ್ಟು ಹುದುಗುವಿಕೆಯ ಪ್ರಕ್ರಿಯೆಯು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ. ಅವು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ಸುಲಭವಾಗಿ ಜೀರ್ಣವಾಗುತ್ತವೆ. ಹೀಗಾಗಿ ದೋಸೆ ತಿಂಡಿಯಾಗಿ ಜನಪ್ರಿಯವಾಗಿದೆ.

ಈ ಸಾಂಪ್ರದಾಯಿಕ ಖಾದ್ಯವನ್ನು ತಿನ್ನಲು ನೂರಾರು ವಿಧಾನಗಳಿವೆ. ಒಳ್ಳೆಯ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಅದನ್ನು ಸೇವಿಸುವುದರೊಂದಿಗೆ ಅದರ ಸ್ವಾದವನ್ನು ಸವಿಯಬಹುದು.
ಬೆಳಗಿನ ಉಪಾಹಾರಕ್ಕಾಗಿ ಜನ ದೋಸೆಯನ್ನೇ ಏಕೆ ಆಯ್ಕೆ ಮಾಡುತ್ತಾರೆ: - ದೋಸೆ ಒಂದು ಬಹುಮುಖ ಭಕ್ಷ್ಯವಾಗಿದೆ. ಇದು ಉಪಾಹಾರವಾಗಿ ಜನಪ್ರಿಯ. ಒಮ್ಮೊಮ್ಮೆ ಇದನ್ನು ರಾತ್ರಿಯ ಊಟವಾಗಿಯೂ ರುಚಿ ನೋಡಬಹುದು. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದರಿಂದ ರಾತ್ರಿ ಊಟಕ್ಕೆ ಬೆಸ್ಟ್.
ಕಾರ್ಬೋಹೈಡ್ರೇಟ್‌ಗಳ ಉತ್ತಮ ಆಕರ: ದೋಸೆ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಅದು ನಮ್ಮ ದೇಹಕ್ಕೆ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿ ಒದಗಿಸುತ್ತದೆ. ತೂಕ ಇಳಿಸಬೇಕು ಎನ್ನುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಕಾರ್ಬೋಹೈಡ್ರೇಟ್‌ಗಳನ್ನು ಆರೋಗ್ಯಕರ ಮೂಲಗಳಿಂದ ಪಡೆಯುವುದು ಉತ್ತಮವಾದ ಮಾರ್ಗ. ಅದು ದೋಸೆಯಲ್ಲಿ ಲಭ್ಯವಿದೆ.
ಪ್ರೋಟೀನ್: ಪ್ರೋಟೀನ್ ನಮ್ಮ ದೇಹಕ್ಕೆ ಅಗತ್ಯವಿರುವ ಮತ್ತೊಂದು ಪೋಷಕಾಂಶ. ಇದು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ಕೂದಲು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಸ್ಯಾಹಾರಿಗಳು ಸಾಮಾನ್ಯವಾಗಿ ಮಾಂಸ ತಿನ್ನುವವರಿಗಿಂತ ಭಿನ್ನವಾಗಿ ಪ್ರೋಟೀನ್‌ನ ಕೆಲವೇ ಕೆಲವು ಮೂಲಗಳನ್ನು ಹೊಂದಿದ್ದಾರೆ. ಹೀಗಾಗಿ ಆ ಕೊರತೆಯನ್ನು ದೋಸೆ ನೀಗಿಸುತ್ತದೆ. ಇದು ಹೆಚ್ಚು ಪ್ರೋಟೀನ್ ಹೊಂದಿಲ್ಲದಿದ್ದರೂ ಮಧ್ಯಮ ಪ್ರಮಾಣದಲ್ಲಿ ಪೂರೈಸುತ್ತದೆ.
ಕಡಿಮೆ ಕ್ಯಾಲೋರಿ: ದೋಸೆ ತುಂಬಾ ಹಗುರವಾಗಿರುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೊರಿಗಳನ್ನು ಸೇರಿಸುವುದಿಲ್ಲ. ಸಾಮಾನ್ಯವಾದ ಒಂದು ದೋಸೆ ಸುಮಾರು 37 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಸ್ಟಫ್ಡ್ ದೋಸೆ ಸೇವಿಸಿದರೆ ಅದರ ಕ್ಯಾಲೋರಿ ತುಂಬಾ ಹೆಚ್ಚಾಗಿರುತ್ತದೆ.

ಟೇಸ್ಟಿ ಮತ್ತು ಆರೋಗ್ಯಕರ: ಡಯಟ್‌ನಲ್ಲಿರುವ ಅನೇಕರು ಸಾಮಾನ್ಯವಾಗಿ ರುಚಿಕರವಾದ ಆಹಾರಗಳಿಂದ ವಂಚಿತರಾಗುತ್ತಾರೆ. ಈ ನಷ್ಟ ಸರಿದೂಗಿಸಿಕೊಳ್ಳಬೇಕು ಎಂದರೆ ದೋಸೆ ಅದಕ್ಕೆ ಪಕ್ಕಾ ಪರಿಹಾರವಾಗಬಲ್ಲದು. ಇದು ಆರೋಗ್ಯಕರ ಮತ್ತು ರುಚಿಕರವಾದ ಆಯ್ಕೆಯಾಗಿದೆ. ದೋಸೆಯನ್ನು ಹೆಚ್ಚು ಪೌಷ್ಟಿಕವಾಗಿಸುವ ಸಲುವಾಗಿ, ಪಾಲಕ್, ಕ್ಯಾರೆಟ್, ಕಡಿಮೆ - ಕೊಬ್ಬಿನ ಪನೀರ್, ತೋಫು, ಓಟ್ಸ್ ಅನ್ನು ಹಿಟ್ಟಿನಲ್ಲಿ ಸೇರಿಸಲು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ನೀವು ಓಟ್ಸ್ ಅಥವಾ ಅಗಸೆ ಬೀಜವನ್ನು ಅಕ್ಕಿ ಮತ್ತು ದಾಲ್ಟೊದೊಂದಿಗೆ ರುಬ್ಬಬಹುದು.
ದೋಸೆಯಲ್ಲಿನ ವಿಧಗಳು:- ಸಾದಾ ದೋಸೆ: ಸಾದಾ ದೋಸೆಯನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅತ್ಯಂತ ಪ್ರಸಿದ್ಧವಾದ ವಿಧಾನಗಳಲ್ಲೊಂದಾಗಿದೆ. ಈ ಗರಿಗರಿಯಾದ ಮೃದುವಾದ ರಚನೆಯ ದೋಸೆಯನ್ನು ನೀವು ಹೇಗೆ ಇಷ್ಟಪಡುತ್ತೀರಿ ಎಂಬುದರ ಪ್ರಕಾರ ದಪ್ಪ ಅಥವಾ ತೆಳುವಾದ ಪ್ಯಾನ್‌ಕೇಕ್ ಆಗಿ ಮಾಡಬಹುದು. ಹೆಚ್ಚಾಗಿ ಈ ದೋಸೆಯು ಗರಿಗರಿಯಾದ ಮತ್ತು ತೆಳ್ಳಗಿರುತ್ತದೆ ಮತ್ತು ಸಾಮಾನ್ಯವಾಗಿ ಸಾಂಬಾರ್, ತೆಂಗಿನಕಾಯಿ ಚಟ್ನಿ, ಹಸಿರು ಚಟ್ನಿ ಮತ್ತು ರುಚಿಕರವಾದ ಕೆಂಪು ಚಟ್ನಿಯೊಂದಿಗೆ ಇದನ್ನು ಬಡಿಸಲಾಗುತ್ತದೆ.
ಪೇಪರ್ ದೋಸೆ: ತೆಂಗಿನಕಾಯಿ ಚಟ್ನಿ ಮತ್ತು ಆಲೂಗಡ್ಡೆ ಮಸಾಲಾದೊಂದಿಗೆ ಈ ಗರಿ ಗರಿಗರಿಯಾದ ಮತ್ತು ಟೇಸ್ಟಿ ಪೇಪರ್ ದೋಸೆಯನ್ನು ನೀಡಲಾಗುತ್ತದೆ. ಪೇಪರ್ ದೋಸೆಯನ್ನು ಹಸಿ ಅಕ್ಕಿ, ಉದ್ದಿನ ಬೇಳೆ, ಅಕ್ಕಿ ಹಿಟ್ಟು ಮತ್ತು ನೀರಿನಿಂದ ನಯವಾದ ಪೇಸ್ಟ್ ಆಗಿ ಪುಡಿಮಾಡಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ.
ಮಸಾಲೆ ದೋಸೆ: ಬಹುತೇಕರ ಅಚ್ಚುಮೆಚ್ಚಿನ ತಿಂಡಿಯೆಂದರೆ ಅದು ಮಸಾಲಾ ದೋಸೆ. ಇದು ರೆಸ್ಟೋರೆಂಟ್‌ಗಳ ಮೆನುವಿನಲ್ಲಿ ಇರಲೇ ಬೇಕು. ಈ ರುಚಿಕರವಾದ ಗರಿಗರಿಯಾದ ದೋಸೆಗೆ ಆಲೂಗಡ್ಡೆ ಮಸಾಲಾವನ್ನು ಸೇರಿಸಲಾಗುತ್ತದೆ. ಈ ದೋಸೆಯನ್ನು ಸಾಂಬಾರ್ ಮತ್ತು ವಿವಿಧ ರೀತಿಯ ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ.
ರವಾ ದೋಸೆ: ಅಕ್ಕಿ ಹಿಟ್ಟು ಮತ್ತು ರವೆ (ಸೂಜಿ)ಯೊಂದಿಗೆ ತಯಾರಿಸಲಾಗುತ್ತದೆ. ರವಾ ದೋಸೆಯು ಮಸಾಲೆ ದೋಸೆ ಅಥವಾ ಸಾದಾ ದೋಸೆಗಿಂತ ಭಿನ್ನವಾಗಿ ತ್ವರಿತವಾಗಿ ತಯಾರಿಸಬಹುದಾದ ದೋಸೆಯಾಗಿದೆ. ಏಕೆಂದರೆ ಇದಕ್ಕೆ ಇತರ ಬಗೆಯ ದೋಸೆ ಅಥವಾ ಸಾದಾ ಅಥವಾ ಮಸಾಲೆ ದೋಸೆಯಂತೆ ಯಾವುದೇ ಹುದುಗುವಿಕೆಯ ಅಗತ್ಯವಿಲ್ಲ.
ನೀರ್ ದೋಸೆ: ನೀರ್ ದೋಸೆಯನ್ನು ಸಂಪೂರ್ಣವಾಗಿ ಅಕ್ಕಿಯಿಂದ ತಯಾರಿಸಲಾಗುತ್ತದೆ ಮತ್ತು ಇತರ ಬಗೆಯ ದೋಸೆಗಳಂತೆ ಯಾವುದೇ ಹುದುಗುವಿಕೆಯ ಅಗತ್ಯವಿರುವುದಿಲ್ಲ. ನೀರ್ ದೋಸೆಗೆ ಅಕ್ಕಿಯನ್ನು 3-5 ಗಂಟೆಗಳ ಕಾಲ ನೆನೆಸಿ ಮತ್ತು ನಂತರ ಅದನ್ನು ರುಬ್ಬುವ ಮೂಲಕ ಹಿಟ್ಟನ್ನು ತಯಾರಿಸಲಾಗುತ್ತದೆ.
ರಾಗಿ ದೋಸೆ: ಎಲ್ಲ ಬಗೆಯ ದೋಸೆಗಳಲ್ಲಿ ರಾಗಿ ದೋಸೆ ನಿಮ್ಮ ಉಪಹಾರಕ್ಕೆ ಆರೋಗ್ಯಕರ ಆಯ್ಕೆಯಾಗಿದೆ. ಮಧುಮೇಹ ಇರುವವರಿಗೂ ಇದು ಒಳ್ಳೆಯದು.
ಓಟ್ಸ್ ದೋಸೆ: ಈ ದೋಸೆಯನ್ನು ಹೆಚ್ಚು ಸಮಯ ಮತ್ತು ಶ್ರಮವಿಲ್ಲದೇ ಮನೆಯಲ್ಲಿಯೇ ಸುಲಭವಾಗಿ ಬೇಯಿಸಬಹುದು. ಓಟ್ಸ್ ಅನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ಮತ್ತು ಸೂಜಿ ಮತ್ತು ಮೊಸರು ಸೇರಿಸಿ ಬ್ಯಾಟರ್ ಮಾಡಿ. ಕತ್ತರಿಸಿದ ಈರುಳ್ಳಿ, ಟೊಮೆಟೊ, ಜೀರಿಗೆ, ಉಪ್ಪು ಸೇರಿಸಿ ಮಿಶ್ರಣ ಮಾಡಿ, ಮತ್ತು ಈಗ ನೀವು ಸ್ವಲ್ಪ ಗರಿಗರಿಯಾದ ಓಟ್ಸ್ ದೋಸೆ ಮಾಡಲು ಸಿದ್ಧರಾಗಿರುವಿರಿ
ಮೈಸೂರು ದೋಸೆ : ಈ ಪ್ರಸಿದ್ಧ ಮೈಸೂರು ಶೈಲಿಯ ದೋಸೆಯನ್ನು ಬಹಳಷ್ಟು ಪ್ರದೇಶಗಳಲ್ಲಿ ತಯಾರಿಸಲಾಗುತ್ತದೆ. ಬೇಯಿಸಿ ಹುರಿದ ಆಲೂಗಡ್ಡೆ ಮತ್ತು ಕೆಂಪು-ಮೆಣಸಿನಕಾಯಿ ಬೆಳ್ಳುಳ್ಳಿ ಚಟ್ನಿಯನ್ನು ಬಳಸಿ ತಯಾರಿಸಲಾಗುತ್ತದೆ. ಈ ಮಸಾಲೆಯುಕ್ತ ಮತ್ತು ತುಟಿ-ಸ್ಮ್ಯಾಕಿಂಗ್ ದೋಸೆಯನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.
ಈರುಳ್ಳಿ ರವಾ ದೋಸೆ: ಇದು ನಿಮ್ಮ ಸಾಮಾನ್ಯ ರವಾ ದೋಸೆಯ ಮೇಲೆ ಈರುಳ್ಳಿ ಕಟ್ ಮಾಡಿ ಹಾಕಲಾಗುತ್ತದೆ. ರವಾ ದೋಸೆ ಹಿಟ್ಟನ್ನು ತಯಾರಿಸುವಾಗ, ಅದಕ್ಕೆ ಸಾಕಷ್ಟು ಕತ್ತರಿಸಿದ ಈರುಳ್ಳಿ ಸೇರಿಸಬೇಕಷ್ಟೇ
ಇದನ್ನು ಓದಿ: ಭಾರತದ 12.5 ಮಿಲಿಯನ್ ಮಕ್ಕಳಲ್ಲಿ, ಜಾಗತಿಕವಾಗಿ 8ರಲ್ಲಿ ಒಬ್ಬರಿಗೆ ಸ್ಥೂಲಕಾಯ ಸಮಸ್ಯೆ: ವರದಿ