ಜೀನಿವಾ: ಯುದ್ಧ ಭೂಮಿ ಗಾಜಾದಲ್ಲಿರುವ ಪ್ಯಾಲೇಸ್ತೇನಿಯನ್ ನಿರಾಶ್ರಿತರಿಗೆ ಹಣದ ನೆರವು ಒದಗಿಸುವ ವಿಶ್ವಸಂಸ್ಥೆಯ ಪರಿಹಾರ ನಿಧಿ ಮತ್ತು ಕಾರ್ಯಾಚರಣೆ ಸಂಘಟನೆಗೆ ನಿಧಿಯನ್ನು ನಿಲ್ಲಿಸಿರುವುದು ದುಷ್ಪರಿಣಾಮವನ್ನು ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ.
ಈ ಕುರಿತು ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಗಾಜಾದಲ್ಲಿ 2.2 ಮಿಲಿಯನ್ ಜನರಿಗೆ ತುರ್ತಾಗಿ ಅಗತ್ಯವಿರುವ ಸಹಾಯವನ್ನು ಒದಗಿಸುವ ಸಾಮರ್ಥ್ಯವನ್ನು ಬೇರೆ ಯಾವುದೇ ಘಟಕ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಯುಎನ್ಆರ್ಡಬ್ಲ್ಯೂಎ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯತೆ ನೆರವು ಒದಗಿಸುತ್ತದೆ. ಇದಕ್ಕೆ ಹಲವು ದೇಶಗಳು ಹಣದ ನೆರವನ್ನು ನಿಲ್ಲಿಸಿರುವುದು ಗಾಜಾ ಸಂತ್ರಸ್ತರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಟೆಡ್ರೋಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಗಾಜಾದ ಸ್ಥಿತಿ ಕುರಿತು ಮಾತನಾಡಿರುವ ಅವರು, ಅಲ್ಲಿನ ಜನರಿಗೆ ಆರೋಗ್ಯ ವ್ಯವಸ್ಥೆಯ ಬೆಂಬಲವನ್ನು ನೀಡುವುದು ಸವಾಲಿನ ವಿಚಾರವಾಗಿದೆ. ತೀವ್ರವಾದ ಹೋರಾಟದಿಂದಾಗಿ 1,00,000 ಕ್ಕಿಂತ ಹೆಚ್ಚು ಜನರಿಗೆ ಚಿಕಿತ್ಸೆ ದೊರೆಯದಂತೆ ನಿರ್ಬಂಧಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರೀ ಬಾಂಬ್ ದಾಳಿ ಮತ್ತು ಇಂಧನ ಪೂರೈಕೆ ಮತ್ತು ಕೊರತೆಯಿಂದಾಗಿ ಗಾಜಾದ ಬಹುತೇಕ ಆಸ್ಪತ್ರೆಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ. ಸದ್ಯ ಗಾಜಾದ ಕೇಂದ್ರದಲ್ಲಿರುವ ನಸ್ಸರ್ ಆಸ್ಪತ್ರೆಯೊಂದು ಕನಿಷ್ಠ ಕಾರ್ಯಾಚರಣೆ ನಡೆಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಗಾಜಾದಲ್ಲಿ ಮುಂದುವರೆದ ಪ್ರತೀಕಾರದ ದಾಳಿಗಳಿಂದ ಭಾರೀ ಬಿಕ್ಕಟ್ಟು ಎದುರಾಗಿದೆ. ಹಣದ ಕಡಿತದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದ್ದು, ಮಾನವೀಯ ನೆರವು ಒತ್ತೆಯಾಳುಗಳ ಬಿಡುಗಡೆ, ಆರೋಗ್ಯ ಸೌಲಭ್ಯಗಳ ರಕ್ಷಣೆ ಮತ್ತು ಕದನ ವಿರಾಮದಂತಹ ತುರ್ತು ಸಹಾಯದ ನೆರವು ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.
ಯುದ್ಧ ಮುಂದುವರೆಸುವುದಾಗಿ ಹೇಳಿರುವ ನೇತನ್ಯಾಹು; ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಮುಂದುವರೆಯಲಿದ್ದು, ಗಾಜಾದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು ಇರಲಿವೆ ಎಂದು ಪ್ರಧಾನಿ ಬೆಂಜಮಿನ್ ನೇತನ್ಯಾಹು ತಿಳಿಸಿದ್ದಾರೆ. ಬುಧವಾರ ರಾತ್ರಿ ಈ ಕುರಿತು ಮಾತನಾಡಿರುವ ಅವರು ಇಸ್ರೇಲ್ ಯುದ್ಧ ನಿಲ್ಲಿಸಲಿದೆ ಎಂಬ ಊಹಾಪೋಹಾಗಳಿಗೆ ತೆರೆ ಎಳೆದಿದ್ದಾರೆ.
ಇಸ್ರೇಲ್ ಯುದ್ಧ ನಿಲ್ಲಿಸಲಿದೆ ಎಂಬ ಊಹಾಪೋಹಾಗಳು ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ, ಅದು ಸುಳ್ಳು, ಇಸ್ರೇಲ್ ಹಮಾಸ್ ಅನ್ನು ತೊಡೆದುಹಾಕುವ ಯೋಜನೆ ಹೊಂದಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ನಾಸಿರ್ ಆಸ್ಪತ್ರೆ ಮೇಲಿನ ಇಸ್ರೇಲ್ ದಾಳಿಯಲ್ಲಿ 150 ಪ್ಯಾಲೆಸ್ಟೈನಿಯರ ಸಾವು: ಆರೋಪ