ನವದೆಹಲಿ: ಕೋವಿಡ್-19 ಲಸಿಕೆ ಪಡೆದ ನಂತರವೂ ಪದೇ ಪದೆ ಕೋವಿಡ್ ಸೋಂಕಿಗೆ ಒಳಗಾದವರ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೋವಿಡ್ 19 ಲಸಿಕೆಗಳನ್ನು ಪಡೆದ ಮತ್ತು ಪುನರಾವರ್ತಿತ ಸೋಂಕುಗಳನ್ನು ಅನುಭವಿಸಿದ ಜನರ ಪ್ರತಿರಕ್ಷಣಾ ಕೋಶಗಳು ಭವಿಷ್ಯದ ಸಾರ್ಸ್-ಕೋವ್-2 ಸೋಂಕುಗಳ ವಿರುದ್ಧ ಹೋರಾಡಲು ಬಲಿಷ್ಠ ರೋಗನಿರೋಧಕ ಶಕ್ತಿಯನ್ನು (Immunity Wall) ನಿರ್ಮಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಲಸಿಕೆಗಳನ್ನು ಪಡೆದ ನಂತರವೂ ಪದೇ ಪದೆ ಸಾರ್ಸ್-ಕೋವ್-2 ಸೋಂಕು ತಗಲುವುದನ್ನು ಪ್ರಗತಿಯ ಸೋಂಕು ಅಥವಾ Breakthrough Infections ಎಂದು ಕರೆಯಲಾಗುತ್ತದೆ.
ಡೆಲ್ಟಾ ಮತ್ತು ಒಮೈಕ್ರಾನ್ ರೂಪಾಂತರಗಳ ಸೋಂಕು ಅನುಭವಿಸಿದ ಜನರ ದೇಹದಲ್ಲಿ ಸಾರ್ಸ್-ಕೋವ್-2 ಅನ್ನು ಗುರುತಿಸುವ ಮತ್ತು ತಡೆಗಟ್ಟುವ ಉತ್ತಮವಾದ ಟಿ-ಕೋಶಗಳು ಬೆಳವಣಿಗೆಯಾಗಿವೆ ಎಂಬುದು ರಕ್ತದ ಮಾದರಿಗಳ ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ. ಯುಎಸ್ ಕ್ಯಾಲಿಫೋರ್ನಿಯಾದ ಲಾ ಜೊಲ್ಲಾ ಇನ್ ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿ (ಎಲ್ಜೆಐ) ವಿಜ್ಞಾನಿಗಳ ತಂಡವು ಈ ಅಧ್ಯಯನ ನಡೆಸಿದೆ.
"ವೈರಸ್ ವಿಕಸನಗೊಳ್ಳುವುದು ನಿಜ. ಆದರೆ ಅದಕ್ಕೆ ತಕ್ಕಂತೆ ಪ್ರತಿರಕ್ಷಣಾ ವ್ಯವಸ್ಥೆ ಕೂಡ ವೃದ್ಧಿಯಾಗುತ್ತದೆ. ಅಂದರೆ ಸೋಂಕು ತಗುಲಿದಾಗ ಟಿ-ಕೋಶಗಳು ನಿಷ್ಕ್ರಿಯವಾಗಿರುವುದಿಲ್ಲ. ಬದಲಾಗಿ ಅವು ರೂಪಾಂತರಗೊಳ್ಳುವ ವೈರಸ್ನ ಅಂಶಗಳನ್ನು ಗುರುತಿಸಲು ಕಲಿಯುತ್ತವೆ" ಎಂದು ಎಲ್ಜೆಐ ಪ್ರಾಧ್ಯಾಪಕ ಅಲೆಸ್ಸಾಂಡ್ರೊ ಸೆಟ್ ಹೇಳಿದರು.
"ಪ್ರಗತಿಯ ಸೋಂಕು ತಗಲುವುದರಿಂದ ಜೀವಕೋಶಗಳು ಸಾರ್ಸ್-ಕೋವ್-2 ನಲ್ಲಿ ಅನೇಕ ವೈಶಿಷ್ಟ್ಯಗಳನ್ನು ಅಥವಾ ಪ್ರತಿಜನಕಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದರ ಪರಿಣಾಮವಾಗಿ ಸ್ವಯಂಚಾಲಿತವಾಗಿ ಕೆಲಸ ಮಾಡುವ ಟಿ-ಕೋಶಗಳು ಸಾರ್ಸ್-ಕೋವ್-2 ನ ಒಂದು ಭಾಗವು ರೂಪಾಂತರಗೊಂಡಿದ್ದರೂ ಸಹ ಅದನ್ನು ಗುರುತಿಸಬಹುದು ಹಾಗೂ ಅದನ್ನು ತಡೆಗಟ್ಟಬಹುದು." ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಸೆಲ್ ರಿಪೋರ್ಟ್ಸ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಲಕ್ಷಣರಹಿತ ಸೋಂಕುಗಳು ಸಹ ಟಿ-ಸೆಲ್ ಪ್ರತಿಕ್ರಿಯೆಗಳನ್ನು ಹೆಚ್ಚಿಸುತ್ತವೆ ಎಂದು ತೋರಿಸಿದೆ. ಆದಾಗ್ಯೂ ಇದರ ಪರಿಣಾಮ ಗಮನಾರ್ಹವಾಗಿಲ್ಲ. ಇದಲ್ಲದೆ ಪ್ರಗತಿಯ ಸೋಂಕುಗಳು, ಬಿ-ಕೋಶಗಳು ಸಾರ್ಸ್-ಕೋವ್-2 ವಿರುದ್ಧ ಕ್ರಾಸ್-ರಿಯಾಕ್ಟಿವ್ ಪ್ರತಿಕಾಯಗಳನ್ನು ಉತ್ಪಾದಿಸಲು ಕಾರಣವಾಗಿವೆ. ಈ ಪ್ರತಿಕಾಯಗಳಲ್ಲಿ ಹೆಚ್ಚಿನವು ಹೊಸ ವೈರಲ್ ರೂಪಾಂತರಗಳು ಮತ್ತು ಮೂಲ ಲಸಿಕೆ ಪ್ರತಿಜನಕಗಳನ್ನು ಗುರಿಯಾಗಿಸಿಕೊಂಡಿವೆ.
ಕೋವಿಡ್ ಲಸಿಕೆಗಳನ್ನು ತೋಳಿನ ಮೇಲ್ಭಾಗದಲ್ಲಿ ನೀಡಲಾಗುತ್ತದೆ. ಅಂದರೆ ವೈರಸ್ ವಿರುದ್ಧ ಹೋರಾಡುವ ಪ್ರತಿರಕ್ಷಣಾ ಕೋಶಗಳು ಮೇಲ್ಭಾಗದ ಉಸಿರಾಟದ ವ್ಯವಸ್ಥೆಯಿಂದ ದೂರದಲ್ಲಿಯೇ ಬೆಳೆಯುತ್ತವೆ. ಆದರೆ, ಸಾರ್ಸ್-ಕೋವ್-2 ಮೊದಲು ಮೇಲ್ಭಾಗದ ಶ್ವಾಸನಾಳಕ್ಕೆ ಸೋಂಕು ತಗುಲಿಸುತ್ತದೆ. ಅಂದರೆ ಸೋಂಕಿನ ಸ್ಥಳಕ್ಕೆ ಸರಿಯಾದ ಪ್ರತಿರಕ್ಷಣಾ ಕೋಶಗಳನ್ನು ಪಡೆಯುವಲ್ಲಿ ವಿಳಂಬವಾಗಬಹುದು. ಆದರೆ ಇದನ್ನು ಪ್ರಗತಿಯ ಸೋಂಕುಗಳು ತಡೆಗಟ್ಟಬಹುದು ಎಂದು ಸಂಶೋಧಕರು ವಿವರಿಸಿದರು.
ಇದನ್ನೂ ಓದಿ: ವರ್ಷಕ್ಕೆ ಶೇ 5ರಷ್ಟು ಪ್ಲಾಸ್ಟಿಕ್ ಮಾಲಿನ್ಯ ತಗ್ಗಿಸಿದರೆ ಸ್ವಚ್ಛವಾಗಲಿವೆ ಸಮುದ್ರಗಳು: ವರದಿ - REDUCING PLASTIC POLLUTION