ಹೈದರಾಬಾದ್: ಮನುಷ್ಯರಲ್ಲಿ ಟೈಫಾಯ್ಡ್ ಜ್ವರಕ್ಕೆ ಕಾರಣವಾಗುವ ಸಾಲ್ಮೊನೆಲ್ಲಾ ಟೈಫಿ ಮತ್ತು ಜೀರ್ಣ ಕ್ರಿಯೆ ಮತ್ತು ಮೂತ್ರನಾಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಇತರೆ ಬ್ಯಾಕ್ಟಿರೀಯಾವನ್ನು ಕೊಲ್ಲುವಲ್ಲಿ ಟೊಮೆಟೊ ಸಹಕಾರಿಯಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಮೈಕ್ರೊಬಯೋಲಾಜಿ ಸ್ಪೆಕ್ಟ್ರಂನಲ್ಲಿ ಈ ಲೇಖನವನ್ನು ಪ್ರಕಟಿಸಲಾಗಿದೆ.
ನಮ್ಮ ಅಧ್ಯಯನದ ಗುರಿಯು ಸಾಲ್ಮೊನೆಲ್ ಟೈಪಿ ಸೇರಿದಂತೆ ರೋಗಕಾರಕಗಳನ್ನು ಕೊಲ್ಲುವಲ್ಲಿ ಟೊಮೆಟೊ ಮತ್ತು ಟೊಮೆಟೊ ಜ್ಯೂಸ್ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದಾಗಿತ್ತು ಎಂದು ಕೊರ್ನೆಲ್ ಯುನಿವರ್ಸಟಿಯ ಪ್ರೊಫೆಸರ್ ಮತ್ತು ಅಧ್ಯಯನದ ಪ್ರಮುಖ ತನಿಖಾಧಿಕಾರಿ ಜಿಯೋಂಗ್ಮಿನ್ ಸಾಂಗ್ ತಿಳಿಸಿದ್ದಾರೆ.
ಮೊದಲಿಗೆ ಪ್ರಯೋಗಾಲಯದಲ್ಲಿ ನಡೆಸಲಾದ ಪ್ರಯೋಗದಲ್ಲಿ ಟೊಮೆಟೊ ಜ್ಯೂಸ್ ಸಾಲ್ಮೊನೆಲ್ಲಾ ಟೈಫಿಯನ್ನು ಕೊಲ್ಲಲಿದೆಯಾ ಎಂದು ಪರೀಕ್ಷಿಸಲಾಯಿತು. ಇದು ಸಾಧ್ಯವಾದಾಗ ಟೊಮೆಟೊದಲ್ಲಿರುವ ಜೀನೋಮ್ ಮೂಲಕ ಅದು ಹೊಂದಿರುವ ಆ್ಯಂಟಿ ಮೈಕ್ರೊಬಿಯಲ್ ಪೆಪ್ಟೈಡ್ ಅನ್ನು ಪತ್ತೆ ಮಾಡಲಾಯಿತು. ಆಂಟಿ ಮೈಕ್ರೊಬಿಯಲ್ ಪೆಪ್ಟೈಡ್ ಎಂಬುದು ತುಂಬಾ ಸಣ್ಣ ಪ್ರೊಟಿನ್ ಆಗಿದ್ದು, ಇದು ಬ್ಯಾಕ್ಟೀರಿಯಾಗಳನ್ನು ನಿಷ್ಕ್ರಿಯ ಮಾಡುವ ಗುಣವನ್ನು ಹೊಂದಿದೆ.
ಸಂಶೋಧಕರು ಸಾಲ್ಮೊನೆಲ್ಲಾ ಟೈಫಿ ವಿರುದ್ಧ ಹೋರಾಡುವ ನಾಲ್ಕು ಆ್ಯಂಟಿಮೈಕ್ರೊಬಿಯಲ್ ಪೆಪ್ಟೈಡ್ ಅನ್ನು ಆಯ್ಕೆ ಮಾಡಿದರು. ಇದು ಸಾಲ್ಮೊನೆಲ್ಲಾ ಟೈಫಿ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಎರಡು ಆ್ಯಂಟಿ ಮೈಕ್ರೊಬಿಯಲ್ ಪೆಪ್ಟೈಡ್ ಪತ್ತೆ ಮಾಡಲು ಸಹಾಯ ಮಾಡಿತು.
ಸಂಶೋಧಕರು ಸಾಲ್ಮೊನೆಲ್ಲಾ ಟೈಫಿ ರೂಪಾಂತರಗಳ ಮೇಲೆ ಹೆಚ್ಚಿನ ಪರೀಕ್ಷೆಯನ್ನು ನಡೆಸಿದರು. ಕಾರಣ, ಇದು ಅನೇಕ ರೋಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.
ಇದೇ ವೇಳೆ ಅವರು ಕಂಪ್ಯೂಟರ್ ಅಧ್ಯಯನವನ್ನು ನಡೆಸಿದರು. ಈ ಮೂಲಕ ಆ್ಯಂಟಿ ಮೈಕ್ರೊಬಿಯಲ್ ಪೆಪ್ಟೈಡ್ ಹೇಗೆ ಸಾಲ್ಮೊನೆಲ್ಲಾ ಟೈಫಿ ಮತ್ತು ಎಂಟರಿಕ್ ರೋಗಕಾರಕವನ್ನು ಕೊಲ್ಲುತ್ತದೆ ಎಂದು ಗಮನಿಸಿದರು. ಈ ವೇಳೆ ಟೊಮೆಟೊ ಜ್ಯೂಸ್ ಎಷ್ಟು ಪರಿಣಾಮಕಾರಿಯಾಗಿ ಜನರ ಜೀರ್ಣಕ್ರಿಯೆ ಮತ್ತು ಮೂತ್ರನಾಳದ ಆರೋಗ್ಯಕ್ಕೆ ಹಾನಿ ಮಾಡುವ ರೋಗಕಾರಕದ ವಿರುದ್ಧ ಕೆಲಸ ಮಾಡಲಿದೆ ಎಂಬುದನ್ನು ಕಂಡುಕೊಂಡರು.
ಟೊಮೆಟೊ ಜ್ಯೂಸ್ ಸಾಲ್ಮೊನೆಲ್ಲಾ ಟೈಫಿಯನ್ನು ಪರಿಣಾಮಕಾರಿಯಾಗಿ ಹೊರ ಹಾಕುವಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿರುವುದು ಕಂಡು ಬಂದಿದೆ. ನಮ್ಮ ಸಂಶೋಧನೆಯಲ್ಲಿ ಟೊಮೆಟೊ ಮತ್ತು ಟೊಮೆಟೊ ಜ್ಯೂಸ್ ಸಾಲ್ಮೊನೆಲ್ಲಾಯಂತಹ ಎಂಟರಿಕ್ ಬ್ಯಾಕ್ಟೀರಿಯಾ ತೆಗೆದು ಹಾಕುತ್ತದೆ ಎಂಬುದನ್ನು ಸಂಶೋಧನೆ ತೋರಿಸಿದೆ.
ಈ ಸಂಶೋಧನೆಯ ಫಲಿತಾಂಶವು ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದ ವಯಸ್ಸಿನವರಲ್ಲಿ ಟೊಮೆಟೊ ಸೇರಿದಂತೆ ಇತರೆ ಹಣ್ಣು ಮತ್ತು ತರಕಾರಿಗಳನ್ನು ತಿನ್ನಲು ಅಥವಾ ಕುಡಿಯುವುದರ ಪ್ರಯೋಜನ ತಿಳಿಸಲಿದೆ. ಕಾರಣ ಇವುಗಳ ಸೇವನೆಯಿಂದ ನೈಸರ್ಗಿಕವಾಗಿ ಆ್ಯಂಟಿ ಬ್ಯಾಕ್ಟೀರಿಯಾ ಪ್ರಯೋಜನವನ್ನು ಪಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನು ಬೆಳೆಯಲು ಮುಂದಾದ ಸಿಎಂಎಫ್ಆರ್ಐ