Rose Tea Health Benefits: ಉದ್ಯೋಗ, ವ್ಯಾಪಾರ, ಶಿಕ್ಷಣ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿದ್ದರೂ ಸ್ವಲ್ಪ ಒತ್ತಡವಂತೂ ಇದ್ದೇ ಇರುತ್ತದೆ. ಒತ್ತಡದಿಂದ ಸಂಪೂರ್ಣ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಇದು ಉಲ್ಬಣಿಸಿದರೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಒತ್ತಡವನ್ನು ಕಡಿಮೆ ಮಾಡಲು ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಗುಲಾಬಿ ದಳಗಳ ಚಹಾ ಕುಡಿಯುವುದರಿಂದ ಇದಕ್ಕೆ ಪರಿಹಾರವಿದೆ ಎನ್ನುತ್ತಾರೆ ತಜ್ಞರು.
ಗುಲಾಬಿ ದಳಗಳು ವಿಟಮಿನ್‌ಗಳಿಂದ ಸಮೃದ್ಧವಾಗಿವೆ. ವಿಟಮಿನ್ ಸಿ, ಫಿನಾಲಿಕ್ ಸಂಯುಕ್ತಗಳು, ಕ್ಯಾರೊಟಿನಾಯ್ಡ್‌ಗಳು, ಟೋಕೋಫೆರಾಲ್, ಬಯೋಫ್ಲವೊನಾಯ್ಡ್‌ಗಳು, ಟ್ಯಾನಿನ್‌ಗಳು ಹಾಗೂ ಪೆಕ್ಟಿನ್ ಇದರಲ್ಲಿದ್ದು, ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ತಜ್ಞರ ತಂಡ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. (ವರದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.)
ರೋಸ್ ಟೀ ತಯಾರಿಸಲು ಬೇಕಾಗುವ ಪದಾರ್ಥಗಳು:
- 3 ಕಪ್- ಹಾಲು
- 3 ಟೀಸ್ಪೂನ್ - ಟೀ ಪುಡಿ
- 3 ಟೀಸ್ಪೂನ್- ಸಕ್ಕರೆ
- 3 - ಏಲಕ್ಕಿ
- ಒಂದು ಮರಾಟಿಮೊಗ್ಗು
- 10- ಗೋಡಂಬಿ
- 10- ಬಾದಾಮಿ
- 2 ಟೀಸ್ಪೂನ್ ಗುಲಾಬಿ ದಳದ ಪೇಸ್ಟ್ ನೀರಿನಲ್ಲಿ ನೆನೆಸಿ
- 2 ಕಪ್ ನೀರು
ರೋಸ್ ಟೀ ತಯಾರಿಸುವ ವಿಧಾನ:
- ಮೊದಲು ಮಿಕ್ಸಿಂಗ್ ಜಾರ್ಗೆ ನೀರಿನಲ್ಲಿ ನೆನೆಸಿದ ಗೋಡಂಬಿ ಹಾಗೂ ಬಾದಾಮಿ ಸೇರಿಸಿ, ಮೃದುವಾದ ಪೇಸ್ಟ್ ಮಾಡಿ. (ಇದು ಚಹಾಕ್ಕೆ ಕಾಲು ಕಪ್ ತೆಗೆದುಕೊಳ್ಳಬೇಕು.)
- ಈಗ ಒಲೆ ಆನ್ ಮಾಡಿ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಬಿಸಿ ಮಾಡಿ.
- ಟೀ ಪುಡಿ, ಗುಲಾಬಿ ದಳದ ಪೇಸ್ಟ್, ಮರಾಟಿಮೊಗ್ಗು, ಏಲಕ್ಕಿ ಸೇರಿಸಿ ಚೆನ್ನಾಗಿ ಕುದಿಸಿ.
- ಈ ಕಷಾಯವನ್ನು ಸೋಸಿಕೊಂಡು ಬಟ್ಟಲಿನಲ್ಲಿ ತೆಗೆದುಕೊಳ್ಳಿ.
- ಈಗ ಇನ್ನೊಂದು ಪಾತ್ರೆಯಲ್ಲಿ ಹಾಲು ಹಾಗೂ ಸಕ್ಕರೆ ಹಾಕಿ ಕುದಿಸಿಕೊಳ್ಳಬೇಕಾಗುತ್ತದೆ.
- ಹಾಲು ಕುದಿಯುತ್ತಿರುವಾಗ ಅದಕ್ಕೆ ಕಾಲು ಕಪ್ ಬಾದಾಮಿ ಹಾಗೂ ಗೋಡಂಬಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಹಾಲು ಬೇಸಿಯಾದ ನಂತರ, ಅದಕ್ಕೆ ಹಿಂದೆ ತಯಾರಿಸಿದ ಕಷಾಯವನ್ನು ಸೇರಿಸಿ, ಮಿಶ್ರಣ ಮಾಡಿ.
- ಐದು ನಿಮಿಷ ಕುದಿಸಿದ ನಂತರ, ಇದನ್ನು ಗ್ಲಾಸ್ಗೆ ತೆಗೆದುಕೊಳ್ಳಬೇಕಾಗುತ್ತದೆ.
- ಘಮಘಮಿಸುವ ಗುಲಾಬಿ ಚಹಾ ಇಷ್ಟವಾಗದರೆ ನೀವು ಇದನ್ನು ಟ್ರೈ ಮಾಡಿ ನೋಡಿ.
ಗುಲಾಬಿ ಚಹಾದಿಂದ ದೊರೆಯುವ ಪ್ರಯೋಜನಗಳೇನು?:
- ಗುಲಾಬಿ ದಳಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
- ಇವುಗಳಲ್ಲಿರುವ ವಿಟಮಿನ್ ಎ ಮತ್ತು ಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ.
- ಇವುಗಳಲ್ಲಿರುವ ಫ್ಲೇವನಾಯ್ಡ್‌ಗಳು ನರಮಂಡಲದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
- ಪ್ರತಿದಿನ ಒಂದು ಅಥವಾ ಎರಡು ಕಪ್ ಗುಲಾಬಿ ಚಹಾವನ್ನು ಕುಡಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಗುಲಾಬಿ ಚಹಾ ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲೂ ಸಹ ಸಹಾಯ ಮಾಡುತ್ತದೆ. ಅಲ್ಲದೆ ಹಾರ್ಮೋನ್ ಸಮತೋಲನವನ್ನು ಕಾಪಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
- ರೋಸ್ ಟೀ ಕಡಿಮೆ ಕ್ಯಾಲೋರಿ ಹೊಂದಿದೆ. ಇದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
- ರೋಸ್ ಟೀಯಲ್ಲಿರುವ ವಿಟಮಿನ್ ಹಾಗೂ ನಾರಿನಂಶವು ದೀರ್ಘಕಾಲದವರೆಗೆ ಹಸಿವಾಗದಂತೆ ಹಾಗೂ ಹೊಟ್ಟೆ ತುಂಬಿದಂತಾಗುತ್ತದೆ. ಜಂಕ್‌ಫುಡ್‌ಗಳು ಮತ್ತು ಎಣ್ಣೆಯುಕ್ತ ಆಹಾರಗಳನ್ನು ತಿನ್ನುವ ಬಯಕೆಯನ್ನು ಸಹ ಕಡಿಮೆ ಮಾಡುತ್ತದೆ. ಇವುಗಳಿಂದ ದೂರವಿದ್ದರೆ ತೂಕ ಇಳಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು: https://pmc.ncbi.nlm.nih.gov/articles/PMC10758878/
ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.