ಲಾಸ್ ಏಂಜಲೀಸ್( ಅಮೆರಿಕ): ಸಂಶೋಧಕರು 275 ಮಿಲಿಯನ್‌ಗಿಂತಲೂ ಹೆಚ್ಚು ಆನುವಂಶಿಕ ರೂಪಾಂತರಗಳನ್ನು ಕಂಡುಹಿಡಿದಿದ್ದಾರೆ ಎಂದು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ NIH ಹೇಳಿದೆ. NIH ನ 'ಆಲ್ ಆಫ್ ಅಸ್ ರಿಸರ್ಚ್ ಪ್ರೋಗ್ರಾಂ'ನಲ್ಲಿ ಭಾಗವಹಿಸಿದ ಸುಮಾರು 250,000 ಹಂಚಿಕೊಂಡಿರುವ ಡೇಟಾದಿಂದ ಹೊಸ ಆನುವಂಶಿಕ ರೂಪಾಂತರಗಳನ್ನು ಗುರುತಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಅರ್ಧದಷ್ಟು ಜೀನೋಮಿಕ್ ದತ್ತಾಂಶವು ಯುರೋಪಿಯನ್ ಅಲ್ಲದ ಆನುವಂಶಿಕ ವಂಶಸ್ಥರಿಂದ ಬಂದಿವೆ ಎಂಬ ವಿಚಾರವನ್ನು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನೂ ಅನ್ವೇಷಿಸಲಾಗದ ಈ ರೂಪಾಂತರಗಳಿಂದ ಆರೋಗ್ಯ ಮತ್ತು ರೋಗದ ಮೇಲೆ ಆನುವಂಶಿಕ ಪ್ರಭಾವಗಳು ಹೇಗೆ ಬೀರುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಹೊಸ ಮಾರ್ಗಗಳನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹಿಂದೆ ಸಂಶೋಧನೆಗಳಿಂದ ಹೊರಗುಳಿದಿರುವ ಸಮುದಾಯಗಳಿಗೆ ಆನುವಂಶಿಕ ರೂಪಾಂತರಗಳು ಹೆಚ್ಚು ಅನುಕೂಲ ಆಗಲಿದೆ ಎಂದು ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಹೆಲ್ತ್ ಹೇಳಿದೆ.
ಹೊಸದಾಗಿ ಗುರುತಿಸಲಾದ ಸುಮಾರು ನಾಲ್ಕು ಮಿಲಿಯನ್ ರೂಪಾಂತರಗಳು ರೋಗದ ಅಪಾಯಕ್ಕೆ ಸಂಬಂಧಿಸಿರುವ ಪ್ರದೇಶಗಳಲ್ಲಿವೆ ಎಂಬುದನ್ನು ಸಹ ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಮಾತನಾಡಿರುವ ಆಲ್ ಆಫ್ ಅಸ್ ರಿಸರ್ಚ್ ಪ್ರೋಗ್ರಾಂ'ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಲೇಖಕ ಜೋಶ್ ಡೆನ್ನಿ , ‘‘ವೈದ್ಯನಾಗಿ ಜೀನೋಮಿಕ್ ಸಂಶೋಧನೆಯಲ್ಲಿನ ವೈವಿಧ್ಯತೆಯ ಕೊರತೆ ಇದೆ. ಇದು ಆರೋಗ್ಯದ ಅಸಮಾನತೆಗಳನ್ನು ಹೆಚ್ಚಿಸುವಲ್ಲಿ ಮತ್ತು ರೋಗಿಗಳ ಆರೈಕೆಯನ್ನು ಸೀಮಿತಗೊಳಿಸುವಲ್ಲಿ ಭಾರಿ ಪರಿಣಾಮಗಳನ್ನು ಬೀರುತ್ತದೆ. ಇದನ್ನು ನಾವು ಸ್ವತಃ ಕಂಡುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನಮ್ಮೆಲ್ಲರ ಡೇಟಾಸೆಟ್ ಈಗಾಗಲೇ ಸಂಶೋಧಕರಿಗೆ ಆರೋಗ್ಯದ ಬಗ್ಗೆ ತಿಳಿದಿರುವುದನ್ನು ವಿಸ್ತರಿಸುವ ಸಂಶೋಧನೆಗಳಿಗೆ ನೆರವಾಗಲಿದೆ. ನಮ್ಮ ಸಂಶೋಧನೆಯಲ್ಲಿ ಭಾಗವಹಿಸುವವರ ಡಿಎನ್‌ಎ ಮತ್ತು ಇತರ ಆರೋಗ್ಯ ಮಾಹಿತಿಯ ಕೊಡುಗೆಗಳಿಲ್ಲದೇ ಇದು ಸಾಧ್ಯವಾಗದಿರಬಹುದು. ಅವರ ಭಾಗವಹಿಸುವಿಕೆಯು ಭವಿಷ್ಯಕ್ಕಾಗಿ ಒಂದು ಮಾರ್ಗದರ್ಶನ ಹಾಗೂ ಹೊಸ ಅಧ್ಯಯನ ಮತ್ತು ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ವೈಜ್ಞಾನಿಕ ಆವಿಷ್ಕಾರವು ಎಲ್ಲರಿಗೂ ವಿಶಾಲ ದೃಷ್ಟಿಕೋನದ ಪ್ರಯೋಜನಗಳನ್ನು ನೀಡಲಿದೆ ಎಂದು ಡೆನ್ನಿ ಹೇಳಿದ್ದಾರೆ.
'ಆಲ್ ಆಫ್ ಅಸ್ ರಿಸರ್ಚ್ ಪ್ರೋಗ್ರಾಂ' ಧ್ಯೇಯವು ಆರೋಗ್ಯದ ಸುಧಾರಣೆಗೆ ಸಂಶೋಧನೆ ಮತ್ತು ವೈದ್ಯಕೀಯ ಪ್ರಗತಿಯನ್ನು ವೇಗಗೊಳಿಸುವುದೇ ಆಗಿದೆ. ಇದು ಎನ್‌ಐಎಚ್ ಗುರಿಯೂ ಹೌದು, ಎಲ್ಲರಿಗೂ ವೈಯಕ್ತಿಕ ರೋಗಗಳ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಆರೈಕೆಯನ್ನು ಸಕ್ರಿಯಗೊಳಿಸುವುದೇ ಮೊದಲ ಆದ್ಯತೆ ಆಗಿದೆ.
ಆರೋಗ್ಯದ ಮೇಲೆ ಪ್ರಭಾವ ಬೀರುವ ಜೈವಿಕ, ಪರಿಸರ ಮತ್ತು ನಡವಳಿಕೆಯ ಅಂಶಗಳ ಬಗ್ಗೆ ಉತ್ತಮ ಒಳನೋಟಗಳನ್ನು ಪಡೆಯಲು ಈ ಸಂಶೋಧನೆ ಸಹಾಯ ಮಾಡುತ್ತದೆ. ಇಂತಹ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಸಂಶೋಧಕರಿಗೆ ಈ ರೀತಿಯ ಅತ್ಯಂತ ವೈವಿಧ್ಯಮಯ ಬಯೋಮೆಡಿಕಲ್ ಡೇಟಾ ಸಂಪನ್ಮೂಲವನ್ನು ಪಡೆದುಕೊಳ್ಳಲು ಮತ್ತು ಸಂರಚಿಸುವ ಕಾರ್ಯಕ್ರಮ ಅಮೆರಿಕದಾದ್ಯಂತ ನಡೆಯುತ್ತಿದೆ. ಇದರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರ ಪಾಲುದಾರಿಕೆ ಇದೆ.
ಇದನ್ನು ಓದಿ: ಡಯಟ್ನಲ್ಲಿ ಅತಿ ಹೆಚ್ಚು ಪ್ರೋಟೀನ್ ಸೇವಿಸುವುದು ಕೂಡ ಅಪಾಯ: ಅಧ್ಯಯನದಲ್ಲಿ ಬಹಿರಂಗ