ಬೆಂಗಳೂರು: ಇಂದಿನ ದಿನದಲ್ಲಿ ವಯಸ್ಕರು ಅಧಿಕ ರಕ್ತದೊತ್ತಡ ಪರೀಕ್ಷೆಗೆ ಒಳಗಾಗುವುದು ಅವಶ್ಯವಾಗಿದೆ. ಆಹಾರ ಶೈಲಿ. ಒತ್ತಡದ ಜೀವನದಿಂದ ಇಂದು ಯುವ ಜನತೆ ಕೂಡ ಬಿಪಿ ಹೊಂದುವಂತೆ ಆಗಿದೆ. ಈ ಹಿನ್ನೆಲೆ ವಯಸ್ಕರು ಬಿಪಿ ಪರೀಕ್ಷೆಗೆ ಒಳಗಾಗುವುದು ಅನಿವಾರ್ಯವಾಗಿದ್ದು, ಯಾವಾಗ ಮತ್ತು ಎಷ್ಟು ಬಾರಿ ಈ ರೀತಿ ಪರೀಕ್ಷೆಗೆ ಒಳಗೊಳ್ಳಬೇಕು ಎಂಬುದನ್ನು ತಿಳಿಯಬೇಕಿದೆ.
ವೈದ್ಯರು ಹೇಳುವಂತೆ, 18 ರಿಂದ 40 ವರ್ಷದ ಒಳಗಿನ ಮಂದಿ ಪ್ರತಿ ಮೂರು ವರ್ಷಕ್ಕೆ ಒಮ್ಮೆ ಈ ಪರೀಕ್ಷೆಗೆ ಒಳಗಾಗುವ ಮೂಲಕ ಇದರೊಂದಿಗೆ ಇರುವ ಕಾಯಿಲೆ ಮತ್ತು ಇತರ ಸಮಸ್ಯೆಗಳ ರೋಗ ನಿರ್ಣಯ ಮಾಡಿ ಶೀಘ್ರದಲ್ಲೇ ಚಿಕಿತ್ಸೆ ಆರಂಭಿಸಬಹುದಾಗಿದೆ ಎಂದಿದ್ದಾರೆ.
ಬೆಂಗಳೂರಿನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರ (ಐಸಿಎಂಆರ್- ಎನ್ಸಿಡಿಐಆರ್) ಪ್ರಕಾರ, ಶೇ 30ರಷ್ಟು ಮಂದಿ ತಮ್ಮ ಬಿಪಿಯನ್ನೇ ಪರೀಕ್ಷಿಸುವುದಿಲ್ಲ. 40 ವರ್ಷ ದಾಟಿದವರು ಪ್ರತಿ ವರ್ಷ ಅಧಿಕ ರಕ್ತದೊತ್ತಡದ ಪರೀಕ್ಷೆಗೆ ಒಳಗಾಗುವುದು ಅಗತ್ಯವಾಗಿದೆ. 18 ರಿಂದ 40 ವರ್ಷದೊಳಗಿನವರು ಪ್ರತಿ ಮೂರರಿಂದ ಐದು ವರ್ಷಕ್ಕೆ ಒಮ್ಮೆ ಪರೀಕ್ಷೆ ಒಳಗಾಗುವುದರಿಂದ ಅಪಾಯವನ್ನು ತಡೆಗಟ್ಟಬಹುದಾಗಿದೆ ಎಂದು ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಮುಖ್ಯ ಕನ್ಸಲ್ಟಂಟ್ ಡಾ ತುಷಾರ್ ತಯಾಲ್ ತಿಳಿಸಿದ್ದಾರೆ.
ಈಗಾಗಲೇ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಡಿಜಿಟಲ್ ಬಿಪಿ ಮಾನಿಟರ್ನಲ್ಲಿ ತಿಂಗಳಿಗೆ ಒಮ್ಮೆಯಾದರೂ ಪರೀಕ್ಷೆಗೆ ಒಳಗೊಳ್ಳಬೇಕು ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ನ ನಿರ್ದೇಶಕರಾದ ಡಾ ಅಜಯ್ ಅಗರ್ವಾಲ್ ತಿಳಿಸಿದ್ದಾರೆ. ಯಾವುದೇ ಅಪಾಯ ಹೊಂದಿಲ್ಲದ ರೋಗಿಗಳಲ್ಲಿ ಅಧಿಕ ರಕ್ತದೊತ್ತಡವು 140/90 mm Hg ಗಿಂತ ಕಡಿಮೆ ಇರಬೇಕು. ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆ ಹೊಂದಿರುವವರು ಮೂತ್ರಪಿಂಡ, ಹೃದಯ ಮತ್ತು ಕಣ್ಣಿನಂತಹ ಅಂಗಾಂಗ ಹಾನಿ ಅಪಾಯ ಕಡಿಮೆ ಮಾಡಲು 130/80 ಕ್ಕಿಂತ ಕಡಿಮೆ ಬಿಪಿ ಹೊಂದಿರಬೇಕು.
ಭಾರತದಲ್ಲಿ ಸುಮಾರು ಶೇ 34ರಷ್ಟು ಮಂದಿ ಪೂರ್ವ ಅಧಿಕ ರಕ್ತದೊತ್ತಡ ಹಂತದಲ್ಲಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಇದು ಸಾಮಾನ್ಯ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದ ಮಧ್ಯದ ಸ್ಥಿತಿಯಾಗಿದೆ. ಇದು ಕೂಡ ಹೃದಯರಕ್ತನಾಳದಂತಹ ಸಮಸ್ಯೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗಿದೆ ಬಿಪಿ; ಹೃದಯಾಘಾತಕ್ಕೂ ಕಾರಣವಾಗುತ್ತದೆ ಈ ಅಧಿಕ ರಕ್ತದೊತ್ತಡ