ನವದೆಹಲಿ: ಕಳೆದ ವರ್ಷ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥನ್ ಉದರ ಕ್ಯಾನ್ಸರ್ಗೆ ತುತ್ತಾಗಿದ್ದು, ಪುರುಷರಲ್ಲಿ ಕಾಣಿಸಿಕೊಳ್ಳುವ ಐದನೇ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಇದರ ಲಕ್ಷಣಗಳು ಅನೇಕ ವೇಳೆ ಅಸ್ಪಷ್ಟ. ಕೆಲವು ಸಮಯದಲ್ಲಿ ತಪ್ಪು ಗ್ರಹಿಕೆಗೂ ಕಾರಣವಾಗುತ್ತದೆ ಎನ್ನುತ್ತಾರೆ ವೈದ್ಯರು.
ಇತ್ತೀಚೆಗೆ ತರ್ಮಕ್ ಮೀಡಿಯಾ ಹೌಸ್ನಲ್ಲಿ ಸಂದರ್ಶನದಲ್ಲಿ ಮಾತನಾಡಿದ ಸೋಮನಾಥನ್, ಕಳೆದ ವರ್ಷ ಆಗಸ್ಟ್ನಲ್ಲಿ ಚಂದ್ರಯಾನ-3 ಮಿಷನ್ ವೇಳೆ ಉಂಟಾದ ಕೆಲವು ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದರು. ಸೆಪ್ಟೆಂಬರ್ನಲ್ಲಿ ಆದಿತ್ಯ-ಎಲ್ 1 ಉಡಾವಣೆ ವೇಳೆ ತಮಗೆ ಹೊಟ್ಟೆ ಕ್ಯಾನ್ಸರ್ ಇರುವುದು ದೃಢಪಟ್ಟಿತು ಎಂದು ತಿಳಿಸಿದ್ದಾರೆ.
ಚಂದ್ರಯಾನ- 3 ಯೋಜನೆ ಉಡಾವಣೆ ವೇಳೆ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಯಿತು. ಆದರೆ, ಆ ಸಮಯದಲ್ಲಿ ಈ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ನನಗೆ ಸರಿಯಾಗಿ ಅರ್ಥೈಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಇದೀಗ ಕ್ಯಾನ್ಸರ್ ಸ್ಪಷ್ಟವಾಗಿದ್ದು, ಪರಿಹಾರಕ್ಕೆ ಚಿಕಿತ್ಸೆ ಆರಂಭಿಸಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಚಿಕಿತ್ಸೆಗಾಗಿ ಸರ್ಜರಿಗೆ ಒಳಗಾಗಿದ್ದು, ಕೀಮೋಥೆರಪಿ ನಡೆಸಲಾಗಿದೆ. ಇದೀಗ ಸಂಪೂರ್ಣವಾಗಿ ಗುಣಮುಖವಾಗಿದ್ದು, ಕೆಲಸಕ್ಕೆ ಮರಳಿದ್ದೇನೆ ಎಂದಿದ್ದಾರೆ.
ಹೊಟ್ಟೆ ಕ್ಯಾನ್ಸರ್ ಲಕ್ಷಣಗಳು: ಹೊಟ್ಟೆ ಕ್ಯಾನ್ಸರ್ ಸಾಮಾನ್ಯ ಲಕ್ಷಣ ಎಂದರೆ ಹೊಟ್ಟೆಯಲ್ಲಿ ಅಸಾಹನೀಯ ನೋವು ಅಥವಾ ಕಿರಿಕಿರಿ, ದಿಢೀರ್ ತೂಕ ನಷ್ಟ, ಹಸಿವು ನಷ್ಟ, ನುಂಗಲು ಕಷ್ಟಪಡುವುದು, ತಲೆಸುತ್ತುವಿಕೆ ಹಾಗು ವಾಂತಿ.
ಈ ಲಕ್ಷಣಗಳು ಅಸ್ಪಷ್ಟವಾಗಿದ್ದು, ಕೆಲವು ವೇಳೆ ದಿಕ್ಕು ತಪ್ಪಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಆಮ್ಲತೆ ಮತ್ತು ಹೊಟ್ಟೆ ನೋವು ಸಾಮಾನ್ಯವಾಗಿರುತ್ತದೆ. ಆದರೆ, ಈ ಲಕ್ಷಣಗಳು ಗೊತ್ತಿಲ್ಲದಂತೆ ಕ್ಯಾನ್ಸರ್ ಆಗಿ ಬೆಳೆಯುತ್ತಾ ಸಾಗುತ್ತದೆ. ಕೆಲವು ಸಂದರ್ಭದಲ್ಲಿ ರಕ್ತಹೀನತೆ, ತೂಕ ನಷ್ಟ ಮತ್ತು ಹಸಿವು ನಷ್ಟದ ಲಕ್ಷಣವನ್ನು ತೋರುತ್ತದೆಯಾದರೂ ಇವುಗಳನ್ನು ನಿರ್ಲಕ್ಷ್ಯಿಸಲಾಗುವುದು ಎಂದು ಗುರುಗಾವ್ನ ಸಿಕೆ ಬಿರ್ಲಾ ಆಸ್ಪತ್ರೆಯ ಸರ್ಜಿಕಲ್ ಅಂಕೋಲಾಜಿಯ ನಿರ್ದೇಶಕ ಡಾ.ವಿನಯ್ ಸಾಮ್ಯುಯೆಲ್ ಗಾಯಕ್ವಾಡ್ ಹೇಳಿದರು.
ಕ್ಯಾನ್ಸರ್ ರೋಗ ಲಕ್ಷಣವನ್ನು ಅರಿತು ಇದರ ಪತ್ತೆಯಲ್ಲಿ ಮುನ್ನಡೆಯುವುದು ಅವಶ್ಯಕ. ದುರದೃಷ್ಟವಾಶತ್ ಹೊಟ್ಟೆ ಕ್ಯಾನ್ಸರ್ ಅಂತಿಮ ಹಂತದಲ್ಲಿ ಪತ್ತೆಯಾಗುತ್ತದೆ. ಇದು ಸಾವಿನ ದರಕ್ಕೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗಮನಾರ್ಹ ಲಕ್ಷಣ ತೋರುವುದಿಲ್ಲ. ಹೆಚ್ಚಿನ ಅಪಾಯ ಹೊಂದಿರುವವರಲ್ಲಿ ನಿಯಮಿತ ತಪಾಸಣೆಗೆ ಅಗತ್ಯವನ್ನು ವೈದ್ಯರು ತಿಳಿಸಿದ್ದಾರೆ.
ನಿರ್ಲಕ್ಷ್ಯ ಬೇಡ: ಹೊಟ್ಟೆಯು ಆಹಾರವನ್ನು ಸಂಗ್ರಹಿಸುವ ಮತ್ತು ಕರುಳಿನಲ್ಲಿ ಅದರ ಜೀರ್ಣಕ್ರಿಯೆಗೆ ಸಹಾಯ ಮಾಡುವ ಅಂಗ. ಇದು ಹೆಚ್ಚು ವಿಸ್ತಾರವಾಗುವ ಮತ್ತು ಆಹಾರ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಹಿನ್ನೆಲೆಯಲ್ಲಿ ಕ್ಯಾನ್ಸರ್ ದೊಡ್ಡದಿದ್ದರೂ ಅದರ ಲಕ್ಷಣಗಳು ರೋಗಿಗಳಿಗೆ ಅರಿವಾಗುವುದಿಲ್ಲ. ಅಂತಿಮ ಹಂತದಲ್ಲೇ ಈ ಬಗ್ಗೆ ತಿಳಿಯುವಂತಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕುಟುಂಬದ ಇತಿಹಾಸ, ಹೆಲಿಕೊಬಕ್ಟರ್ ಪೈಲೊರಿ ಸೋಂಕು ಅಥವಾ ಧೂಮಪಾನದ ಇತಿಹಾಸವೂ ಈ ಹೊಟ್ಟೆ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಆಹಾರ ಪದ್ದತಿ, ಮಸಾಲೆ ಮತ್ತು ಶೇಖರಣೆಯುಕ್ತ ಆಹಾರ ಸೇವನೆ, ಆಲ್ಕೋಹಾಲ್ ಸೇವನೆ ಇದರ ಅಪಾಯ ಹೆಚ್ಚಿಸುತ್ತದೆ.
ವ್ಯಕ್ತಿಯಲ್ಲಿ 50 ವರ್ಷದ ಬಳಿಕ ಇದು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೋಲಿಕೆ ಮಾಡಿದಾಗ ಇದು ಪುರುಷರಲ್ಲಿ ಹೆಚ್ಚಿದೆ. ಪುರುಷರಲ್ಲಿ ಧೂಮಪಾನ ಮತ್ತು ಮಧ್ಯಸೇವನೆಯಂತಹ ಜೀವನಶೈಲಿ ಅಂಶಗಳು ಹೆಚ್ಚಿನ ಅಪಾಯ ತರುತ್ತದೆ ಎಂದು ಫರಿದಾಬಾದ್ನ ಅಮೃತ ಆಸ್ಪತ್ರೆಯ ಗ್ಯಾಸ್ಟ್ರೋಇಂಟೆಸ್ಟಿನಲ್ ಸರ್ಜರಿ ಮುಖ್ಯಸ್ಥ ಡಾ.ಪುನೀತ್ ಧಾರ್ ತಿಳಿಸಿದ್ದಾರೆ.
ಸಮತೋಲಿತ ಆಹಾರ, ತಾಜಾ ಮತ್ತು ಸಮೃದ್ಧ ಗುಣಗಳ ಹಣ್ಣು ಮತ್ತು ತರಕಾರಿ ಸೇವನೆ, ಸಂಸ್ಕರಿತ ಆಹಾರಗಳನ್ನು ಸೀಮಿತಗೊಳಿಸುವುದು, ಧೂಮಪಾನ, ಆಲ್ಕೋಹಾಲ್ನಿಂದ ದೂರವಿರುವುದು, ಸರಿಯಾದ ಚಿಕಿತ್ಸೆ, ನಿಯಮಿತ ತಪಾಸಣೆಗಳ ಮೂಲಕ ಈ ಹೊಟ್ಟೆ ಕ್ಯಾನ್ಸರ್ನಿಂದ ದೂರ ಇರಬಹುದಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿದೆ ಉದರ ಕ್ಯಾನ್ಸರ್: ಲಕ್ಷಣ, ಪರಿಹಾರದ ಸಂಪೂರ್ಣ ಮಾಹಿತಿ