ನವದೆಹಲಿ: ಉತ್ತರ ಭಾರತದಲ್ಲಿ ಬೀಸುವ ಗಾಳಿಯಲ್ಲಿರುವ ಹಾನಿಕಾರಕ ಕಣಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಈ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಮಹತ್ವದ ಅಂಶಗಳ ಕುರಿತು ಜೋಧಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ವಿವರಿಸಿದೆ. ಈ ವರದಿಯನ್ನು ನೇಚರ್ ಕಮ್ಯುನಿಕೇಷನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಸಾಮಾನ್ಯವಾಗಿ ಗಾಳಿಯಲ್ಲಿರುವ ಪಿಎಂ (ಪಾರ್ಟಿಕ್ಯುಲೇಟೆಡ್ ಮ್ಯಾಟರ್) ಅನ್ನು ಕಡಿಮೆ ಮಾಡುವುದರಿಂದ ಆರೋಗ್ಯ ಮೇಲಿನ ಪರಿಣಾಮವನ್ನು ತಗ್ಗಿಸಬಹುದು. ಆದರೆ, ಇದಕ್ಕಿಂತ ಹೆಚ್ಚಾಗಿ ಪಳೆಯುಳಿಕೆ ಮತ್ತು ಟ್ರಾಫಿಕ್ ಸೇರಿದಂತೆ ದಹನದ ಹೊಗೆಯಲ್ಲಿನ ಪಿಎಂ ಕಡಿಮೆ ಮಾಡುವುದರಿಂದ ಉತ್ತರ ಭಾರತದ ಜನರ ಆರೋಗ್ಯ ಸುಧಾರಿಸಬಹುದು ಎಂದು ಅಧ್ಯಯನದ ಲೇಖಕರು ಮತ್ತು ಐಐಟಿ ಜೋಧ್ಪುರದ ಸಹಾಯಕ ಪ್ರಾಧ್ಯಾಪಕ ಡಾ.ದೀಪಿಕಾ ಭಟ್ಟು ತಿಳಿಸಿದ್ದಾರೆ.
ರಾಷ್ಟ್ರೀಯ ಶುದ್ದ ಗಾಳಿ ಕಾರ್ಯಕ್ರಮ (ಎನ್ಸಿಎಪಿ)ಯಲ್ಲಿ ದತ್ತಾಂಶ ಆಧಾರಿತ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವಲ್ಲಿ ಭಾರತೀಯ ನಿರೂಪಕರು ಮೂರು ಪ್ರಮುಖ ನಿರ್ಣಾಯಕ ಪ್ರಶ್ನೆಗಳನ್ನು ತಿಳಿಸಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಹೇಳಿದೆ.
ದೆಹಲಿಯ ಒಳಗೆ ಮತ್ತು ಹೊರಗೆ ಐದು ಇಂಡೋ-ಗಂಗಾ ಬಯಲು ಪ್ರದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಈ ಪ್ರದೇಶಗಳಲ್ಲಿ ಪಿಎಂ ಮಟ್ಟ ಏಕರೂಪವಾಗಿ ಕಂಡರೂ ಸ್ಥಳೀಯ ಹೊರಸೂಸುವಿಕೆ ಮೂಲಗಳು ಮತ್ತು ರಚನೆಯ ಪ್ರಕ್ರಿಯೆಗಳು ಪಿಎಂನ ರಾಸಾಯನಿಕ ಸಂಯೋಜನೆ ಗಣನೀಯವಾಗಿ ಬದಲಾಗಿದೆ.
ದೆಹಲಿಯೊಳಗಿನ ಗಾಳಿಯಲ್ಲಿ ಪಿಎಂ ಮಾಲಿನ್ಯದಲ್ಲಿ ಅಮೋನಿಯಂ ಕ್ಲೋರೈಡ್ ಮತ್ತು ಟ್ರಾಫಿಕ್ ಹೊಗೆ, ಮನೆಯಲ್ಲಿನ ತಾಪಮಾನ ಮತ್ತು ವಾತಾವರಣದಲ್ಲಿ ಉತ್ಪತ್ತಿಯಾಗುವ ಪಳೆಯುಳಿಕೆ ಇಂಧನಗಳ ಉತ್ಕರ್ಷಣ ಉತ್ಪನ್ನಗಳು ಪ್ರಾಬಲ್ಯ ಹೊಂದಿವೆ. ದೆಹಲಿಯ ಹೊರಗೆ, ಅಮೋನಿಯಂ ಸಲ್ಫೇಟ್ ಮತ್ತು ಅಮೋನಿಯಂ ನೈಟ್ರೇಟ್, ಜೀವರಾಶಿ ಸುಡುವ ಹೊಗೆಗಳು ಕಂಡುಬಂದಿವೆ.
ಇವುಗಳ ಹೊರತಾಗಿ ಟ್ರಾಫಿಕ್ ಮಾಲಿನ್ಯ, ಪಳೆಯುಳಿಕೆ ಇಂಧನ, ಅಪೂರ್ಣ ದಹನದ ಏರೋಸಾಲ್ಗಳು ಪಿಎಂ ಆಕ್ಸಿಡೇಟಿವ್ಗೆ ಪ್ರಮುಖ ಕಾರಣಗಳು ಎಂದು ಅಧ್ಯಯನ ಒತ್ತಿ ಹೇಳಿದೆ. ಪಿಎಂಗಳು ಆರೋಗ್ಯ ಸಂಬಂಧಿ ಸವಾಲುಗಳನ್ನು ಉಂಟು ಮಾಡುತ್ತವೆ.
ಶುದ್ದ ಶಕ್ತಿಯ ಮೂಲಗಳು ಮತ್ತು ಕಡಿಮೆ ಹೊರಸೂಸುವಿಕೆಗೆ ಸುಸ್ಥಿರ ಪ್ರಯತ್ನಗಳು ಅಗತ್ಯ. ಇದರ ಜೊತೆಗೆ ಹಳೆಯ ಮತ್ತು ಓವರ್ ಲೋಡ್, ಅಸಮರ್ಥ ವಾಹನಗಳನ್ನು ತೆಗೆದು ಹಾಕುವ ಪ್ರಯತ್ನ ನಡೆಸಬೇಕಿದೆ. ಭಾರತದ ವಾಯು ಮಾಲಿನ್ಯದ ಬಿಕ್ಕಟ್ಟನ್ನು ಪರಿಹರಿಸಲು ಸ್ಥಳೀಯ ಸಮುದಾಯಗಳು ಮತ್ತು ಮಧ್ಯಸ್ಥಗಾರರ ನಡುವೆ ಸಹಯೋಗದ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ದೆಹಲಿಯಂತಹ ಜನನಿಬಿಡ ನಗರ ಪ್ರದೇಶಗಳಲ್ಲಿ ಸಾಮಾಜಿಕ ಬದಲಾವಣೆಗಳ ಅಗತ್ಯವಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಇದನ್ನೂ ಓದಿ: ದೆಹಲಿ ವಾಯುಗುಣಮಟ್ಟ ಕಳಪೆ: ಕೃಷಿ ತ್ಯಾಜ್ಯ ಸುಡುವಿಕೆ ಮಾತ್ರ ಕಾರಣವಲ್ಲ- ಸಿಎಸ್ಇ ವರದಿ