ನವದೆಹಲಿ: ಕೀಲು ನೋವು, ಬಿಗಿಯಾಗುವಿಕೆ, ಸಣ್ಣ ಪ್ರಮಾಣದ ನೋವು, ಊತಗಳೆಲ್ಲವೂ ಅಸ್ಥಿ ಸಂಧಿವಾತದ ಸಾಮಾನ್ಯ ಲಕ್ಷಣಗಳಾಗಿವೆ. ಇವುಗಳನ್ನು ನಿರ್ಲಕ್ಷಿಸಿದಲ್ಲಿ ಮುಂದೊಮ್ಮೆ ಇವುಗಳು ವ್ಯಕ್ತಿಯ ಚಲನಶೀಲತೆಗೆ (ನಡೆದಾಡುವಿಕೆ) ಅಡ್ಡಿಪಡಿಸುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೆ ಜನರು ಅಸ್ಥಿ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ದೇಹದ ತೂಕದ ಹೊರೆ ಬೀಳುವ ಕೀಲು, ಕೈ, ಸೊಂಟ, ಮೊಣಕಾಲು, ಬೆನ್ನಿನ ಹುರಿಯಲ್ಲಿ ನೋವು ಹೆಚ್ಚು. ವಯಸ್ಸಾದಂತೆ ಕೀಲಿನಲ್ಲಿರುವ ಕಾರ್ಟಿಲೇಜ್ ಕ್ಷೀಣಿಸುವುದರಿಂದ ನಡೆದಾಡುವಿಕೆ ಮತ್ತು ದೈನಂದಿನ ದಿನಚರಿ ನಿರ್ವಹಣೆಗೆ ಕಷ್ಟವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೀಲು ನೋವಿನ ಪ್ರಕರಣಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಬಹುತೇಕರು ಈ ಪರಿಸ್ಥಿತಿಯನ್ನು ವಯಸ್ಸಿನ ಭಾಗ ಎಂದೇ ಪರಿಗಣಿಸಿ ಸುಮ್ಮನಾಗುತ್ತಾರೆ. ಆದರೆ ಇದು ಭವಿಷ್ಯದಲ್ಲಿ ಸಮಸ್ಯೆಗಳ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನವದೆಹಲಿಯ ಮಣಿಪಾಲ್ ಆಸ್ಪತ್ರೆಯ ಜಾಯಿಂಟ್ ರಿಪ್ಲೆಸ್ಮೆಂಟ್ ಸರ್ಜನ್ ಡಾ.ರಾಜೀವ್ ವರ್ಮಾ ವಿವರಿಸಿದರು.
ಅಸ್ಥಸಂಧಿವಾತ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿರುತ್ತದೆ. ವಯಸ್ಸಿನ ಭಾಗವೆಂದು ಇದನ್ನು ಬಹುತೇಕರು ಅಲಕ್ಷಿಸುತ್ತಾರೆ. ಆದರೆ, ಆರಂಭಿಕ ಪತ್ತೆ ಕೆಲಸ ಮತ್ತು ಮಧ್ಯಸ್ಥಿಕೆಯಿಂದ ಇಂಥ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ಆರಂಭಿಕ ಹಂತದಲ್ಲಿ ಕೀಲು ನೋವು, ಬಿಗಿತನದಂಥ ಪರಿಸ್ಥಿತಿ ಮುಂಜಾನೆ ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಯ ಬಳಿಕ ಕಾಡುತ್ತದೆ. ಈ ರೀತಿಯ ನೋವು ರೋಗಿಗಳಲ್ಲಿ ವಿಶ್ರಾಂತಿ ಮತ್ತು ಸರಳ ಮನೆ ಚಟುವಟಿಕೆಯಲ್ಲೂ ತೊಂದರೆ ಉಂಟು ಮಾಡಿದಾಗ ಮುಂದಿನ ಹಂತ ತಲುಪುತ್ತದೆ.
ಭಾರತದಲ್ಲಿ ಈ ರೋಗ ಸವಾಲಾಗಿಯೂ ಇದೆ. ಕೀಲು ನೋವಿನ ಅಂತಿಮ ಹಂತದಲ್ಲಿ ರೋಗಿಗಳು ವೈದ್ಯರ ಬಳಿ ಆಗಮಿಸುವುದು ಇದಕ್ಕೆ ಕಾರಣ. ಅಸ್ಥಿಸಂಧಿವಾತ ಎಂಬುದು ಹಂತ ಹಂತವಾಗಿ ಅಭಿವೃದ್ಧಿ ಹೊಂದುವ ಪರಿಸ್ಥಿತಿ. ಅಂತಿಮ ಹಂತದಲ್ಲಿ ಕೀಲಿನ ಹಾನಿಯನ್ನು ಸರಿಪಡಿಸಲಾಗದು. ಇದಕ್ಕೆ ಕೀಲಿನ ಬದಲೀಕರಣವಲ್ಲದೇ (Knee Replacement) ಬೇರೇನೂ ಮಾರ್ಗವಿಲ್ಲ ಎನ್ನುತ್ತಾರೆ ಡಾ.ವರ್ಮಾ.
ಅಸ್ಥಿಸಂಧಿವಾತದ ಪ್ರಾಥಮಿಕ ಚಿಕಿತ್ಸೆಯಲ್ಲಿ ಇದರ ಲಕ್ಷಣಗಳನ್ನು ನಿಯಂತ್ರಿಸಿ, ಕೀಲು ಕಾರ್ಯಾಚರಣೆಯನ್ನು ವೃದ್ಧಿಸಬಹುದು. ಇದರಲ್ಲಿ ಎನ್ಎಸ್ಎಐಡಿ ಮತ್ತು ನೋವು ನಿವಾರಕ, ದೈಹಿಕ ಚಿಕಿತ್ಸೆಯ ಮೂಲಕ ಕೀಲಿನ ಶಕ್ತಿಯನ್ನು ಬಲಗೊಳಿಸುವುದು ಹಾಗು ಚಲನೆಯನ್ನು ಹೆಚ್ಚಿಸಬಹುದು. ತೂಕ ನಿರ್ವಹಣೆ ತಂತ್ರ, ನೋವಿನ ಇಂಜೆಕ್ಷನ್, ಕೀಲು ಬದಲಿ ಶಸ್ತ್ರಚಿಕಿತ್ಸೆಯನ್ನು ತೀವ್ರತರದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ ಎಂದು ವೈಶಾಲಿಯ ಮಾಕ್ಸ್ ಆಸ್ಪತ್ರೆಯ ಅಸ್ಥಿಸಂಧಿವಾತ ಮತ್ತು ಕೀಲ ಬದಲಿ ವಿಭಾಗದ ಅಸೋಸಿಯೇಟ್ ಡೈರೆಕ್ಟರ್ ಡಾ.ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಪುರುಷರಿಗೆ ಹೋಲಿಸಿದಾಗ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಅದರಲ್ಲೂ ಮೆನೋಪಾಸ್ ಬಳಿಕ ಇದು ಮತ್ತಷ್ಟು ಕಾಡುತ್ತದೆ. ಅಸ್ಥಿಸಂಧಿವಾತ ತಡೆಯುವುದು ಅಥವಾ ಮುಂದೂಡಲು ಇರುವ ಪರಿಹಾರ ಮಾರ್ಗವೆಂದರೆ, ಪೋಷಕಾಂಶಗಳಿಂದ ಕೂಡಿತ ಸಮತೋಲಿತ ಆಹಾರ ಸೇವನೆ, ಆರೋಗ್ಯಯುತ ತೂಕ ನಿರ್ವಹಣೆ, ನಿಯಮಿತ ವ್ಯಾಯಮಗಳಿಂದ ಸ್ನಾಯು ಬಲಗೊಳಿಸುವಿಕೆ ಹಾಗೂ ಕೀಲಿನ ಸರಾಗತೆ ಹೆಚ್ಚಿಸುವುದು, ಕೀಲಿನ ಗಾಯವನ್ನು ತಪ್ಪಿಸುವುದು ಹಾಗು ಪ್ರತಿನಿತ್ಯದ ಟಾಸ್ಕ್ಗಳ ಉತ್ತಮ ನಿರ್ವಹಣೆ ಮಾಡುವುದಾಗಿದೆ ಎನ್ನುತ್ತಾರೆ ವೈದ್ಯರು. (ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಮೊಣಕಾಲು ನೋವು ಸಂಧಿವಾತವನ್ನು ಸೂಚಿಸುತ್ತದೆಯೇ?