How To Avoid Child From Mobile: ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಮೊಬೈಲ್ ಫೋನ್‌ಗಳನ್ನು ಬಳಸುವವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಹಗಲು ರಾತ್ರಿ ಎನ್ನದೇ ಹೆಚ್ಚಿನ ಸಮಯವನ್ನು ಮೊಬೈಲ್ನಲ್ಲೇ ಕಳೆಯುತ್ತಿದ್ದಾರೆ. ಇದು ಮಕ್ಕಳ ಬೆಳವಣಿಗೆ ಮೇಲೆ ತೀವ್ರವಾದ ಪರಿಣಾಮ ಬೀರುವುದರ ಜತೆಗೆ ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಮೊಬೈಲ್ನಿಂದ ಮಕ್ಕಳು ದೂರ ಇರಲು ಈ ಟಿಪ್ಸ್ಗಳನ್ನು ಅನುಸರಿ ನಿಮ್ಮ ಮಕ್ಕಳನ್ನು ಮೊಬೈಲ್ ವ್ಯಸನದಿಂದ ಮುಕ್ತಗೊಳಿಸಿ.
1) ಮಕ್ಕಳ ಮುಂದೆ ಮೊಬೈಲ್ ಬಳಕೆ ಕಡಿಮೆ ಮಾಡಿ: ಪಾಲಕರೇ ಮಕ್ಕಳ ಮೊದಲ ಗುರುಗಳಿದ್ದಂತೆ. ಪೋಷಕರು ಏನು ಮಾಡುತ್ತಾರೋ ಅದನ್ನೇ ಮಕ್ಕಳು ಮಾಡಲು ಪ್ರಯತ್ನಿಸುತ್ತಾರೆ. ಹಾಗಾಗಿ ನಿಮ್ಮ ಮಕ್ಕಳಿಗೆ ಫೋನ್ ಹೆಚ್ಚು ನೋಡಬೇಡಿ ಎಂದು ಹೇಳುವ ಮೊದಲು ನೀವೇ ಅವರಿಗೆ ಮಾದರಿಯಾಗಿರಿ. ಫೋನ್ ಬಳಕೆ ಸಮಯವನ್ನು ಕಡಿಮೆ ಮಾಡಿ ಮತ್ತು ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಿ. ಆಗ ನಿಮ್ಮ ಮಕ್ಕಳು ಕೂಡಾ ಅದೇ ದಾರಿಯಲ್ಲಿ ಸಾಗುತ್ತಾರೆ. ಬಿಡುವಿನ ಸಮಯದಲ್ಲಿ ಫೋನ್ ನೋಡುವ ಬದಲಿಗೆ ಮಕ್ಕಳೊಂದಿಗೆ ಮಾತನಾಡುವುದು ಮತ್ತು ಅವರೊಂದಿಗೆ ಆಟವಾಡುವುದು, ಪುಸ್ತಕಗಳನ್ನು ಓದುವಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ.
2. ಮೊಬೈಲ್ ಬಳಕೆಗೆ ನಿಯಮಗಳು ರೂಪಿಸಿ: ನಿಮ್ಮ ಮಕ್ಕಳು ಫೋನ್ ಅನ್ನು ಹೆಚ್ಚು ವೀಕ್ಷಿಸುತ್ತಿದ್ದರೆ ಅವರನ್ನು ಎಚ್ಚರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ಪ್ರತಿದಿನ ಇಷ್ಟು ಸಮಯ ಮಾತ್ರ ಮೊಬೈಲ್ ಬಳಸಬೇಕು ಎಂದು ಸೌಮ್ಯವಾಗಿ ಅರ್ಥೈಸಿ. ಪ್ರತಿ ದಿನ ಫೋನ್ ಅನ್ನು ಎಷ್ಟು ಸಮಯ ಬಳಸಬೇಕೆಂಬುದನ್ನು ನಿಗದಿ ಪಡಿಸಿ.
3. ಮೊಬೈಲ್ ನಿಷೇಧ ಝೋನ್ಗಳನ್ನು ತಯಾರಿಸಿ: ಮನೆಯಲ್ಲಿ ಊಟದ ಕೋಣೆ ಮತ್ತು ಮಲಗುವ ಕೋಣೆ ಮುಂತಾದ ಸ್ಥಳಗಳಲ್ಲಿ ಫೋನ್ ಬಳಸದಂತೆ ಮಕ್ಕಳಿಗೆ ತಿಳಿಸಿ. ಕರೆ ಹೊರತುಪಡಿಸಿ ಮನೆಯ ನಿರ್ದಿಷ್ಟ ಪ್ರದೇಶಗಳಲ್ಲಿ ಫೋನ್‌ಗಳನ್ನು ಬಳಸಬಾರದು ಎಂದು ಸೂಚಿಸಿ. ಊಟದ ಕೋಣೆಯಲ್ಲಿ ಆಹಾರದ ರುಚಿಯನ್ನು ಆನಂದಿಸಲು ಮತ್ತು ಮಲಗುವ ಕೋಣೆಯಲ್ಲಿ ವಿಶ್ರಾಂತಿಗೆ ಆದ್ಯತೆ ನೀಡಬೇಕು ಎಂದು ಮಕ್ಕಳಿಗೆ ವಿವರಿಸಿ.
4. ಮೊಬೈಲ್ ವ್ಯಸನದಿಂದ ಹೊರತರಲು ಪರ್ಯಾಯ ಮಾರ್ಗ: ಮಕ್ಕಳು ತಮ್ಮ ಫೋನ್‌ಗಳಲ್ಲಿ ಮಗ್ನರಾಗಿದ್ದರೆ, ಅವರನ್ನು ಈ ಸಮಸ್ಯೆಯಿಂದ ಹೊರತರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಿ. ಇದಕ್ಕಾಗಿ ಮನೆಯಲ್ಲೇ ಲೈವ್ ಗೇಮಿಂಗ್ ಸೌಲಭ್ಯ ಕಲ್ಪಿಸಬೇಕು. ಅಂದರೆ ಚೆಸ್, ಕೇರಂ ಬೋರ್ಡ್, ಇತರ ಕ್ರೀಡಾ ಸಾಮಗ್ರಿಗಳು, ಪುಸ್ತಕಗಳು, ಚಿತ್ರಕಲೆ ಕ್ಯಾನ್ವಾಸ್ನ ಕಡೆ ಅವರ ಗಮನ ಸೆಳೆಯುವಂತೆ ಮಾಡಿ. ಇದರಿಂದ ಮಕ್ಕಳು ಫೋನ್ ಬಳಕೆಯಿಂದ ದೂರು ಉಳಿಯುತ್ತಾರೆ.
5. ಒಳಾಂಗಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ: ಮಕ್ಕಳು ಫೋನ್ ಬಳಕೆ ಕಡಿಮೆ ಮಾಡಿ ಸಮಯವನ್ನು ಹೇಗೆ ಕಳೆಯಬೇಕೆಂಬುದರ ಬಗ್ಗೆ ಪೋಷಕರು ಸರಿಯಾದ ಮಾರ್ಗದರ್ಶನ ನೀಡಬೇಕು. ಹೋಮ್‌ವರ್ಕ್ ಮಾಡಲು, ಒಳಾಂಗಣ ಕ್ರೀಡೆಗಳು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಬೇಕು.
6. ಜಂಟಿ ಚಟುವಟಿಕೆಗಳನ್ನು ಮಾಡಿ: ಮಕ್ಕಳನ್ನು ದೀರ್ಘಕಾಲ ಫೋನ್‌ನಲ್ಲಿ ಕಳೆಯದೇ ಇರಲು ಪೋಷಕರು ಮಕ್ಕಳೊಂದಿಗೆ ಕುಳಿತು ಚೆಸ್ನಂತಹ ಆಟಗಳನ್ನು ಆಡಿ. ಇದರಿಂದ ಅವರ ಬುದ್ದಿ ಶಕ್ತಿಯೂ ಹೆಚ್ಚಾಗಲಿದೆ. ಜತೆಗೆ ಮಕ್ಕಳೊಂದಿಗೆ ಸೇರಿ ಎಜ್ಯುಕೇಷನಲ್ ಚಿತ್ರಗಳನ್ನು ನೋಡಿ ಇದರಿಂದ ಮಕ್ಕಳು ಚಿತ್ರ ನೋಡುವುದರ ಜೊತೆಗೆ ಹೊಸ ವಿಷಯದ ಬಗ್ಗೆ ತಿಳಿದುಕೊಳ್ಳುತ್ತಾರೆ.
ಇದನ್ನೂ ಓದಿ: ಸುಗರ್ ಲೇವಲ್ ಸಡನ್ ಆಗಿ 300ಕ್ಕೆ ಏರಿಕೆ ಆದರೆ ಏನು ಮಾಡಬೇಕು: ತಜ್ಞರು ಹೇಳುವುದೇನು? - Sugar Level Above 300