ಲಂಡನ್: ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಇತರರಿಗೆ ಹೋಲಿಸಿದಾಗ ಧಾರ್ಮಿಕ ನಂಬಿಕೆ ಹೊಂದಿರುವ ಜನರು ಕಡಿಮೆ ಅತೃಪ್ತಿ, ಒತ್ತಡ ಅನುಭವಿಸಿದ್ದಾರೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಧರ್ಮವು ಅವರ ಯೋಗಕ್ಷೇಮ ಕಾಪಾಡುವಲ್ಲಿ ಭದ್ರಕೋಟೆಯಾಗಿ ಕಾರ್ಯನಿರ್ವಹಿಸಿದೆ ಎಂದು ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಲಾಕ್‌ಡೌನ್ ಸಮಯ ಸಾರ್ವತ್ರಿಕವಾಗಿ ಜನರಲ್ಲಿ ಅಸಂತೋಷ ಉಂಟುಮಾಡಿತ್ತು. ಆದರೆ, ಈ ಭಾವನೆಯು ಧಾರ್ಮಿಕ ನಂಬಿಕೆ ಹೊಂದಿರುವ ಜನರಲ್ಲಿ ಶೇ.29ರಷ್ಟು ಕಡಿಮೆ ಇತ್ತು ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಆದರೂ, ಧರ್ಮದ ಯೋಗಕ್ಷೇಮ ಪರಿಣಾಮಗಳನ್ನು ಅಧ್ಯಯನ ಮಾಡುವುದು ಕಷ್ಟಕರ ಎಂದು ಕೇಂಬ್ರಿಡ್ಜ್‌ನ ಲ್ಯಾಂಡ್ ಎಕಾನಮಿ ವಿಭಾಗದ ಪ್ರೊ.ಶಾನ್ ಲಾರ್ಕಾಮ್ ತಿಳಿಸಿದ್ದಾರೆ. ಜನರ ಕೌಟುಂಬಿಕ ಹಿನ್ನೆಲೆ, ಅಸ್ತಿತ್ವಗಳು/ಹೋರಾಟ ನಿಭಾಯಿಸಲು ಅವರು ಧಾರ್ಮಿಕತೆಯ ಮೊರೆ ಹೋಗಬಹುದು ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕವೂ ಜಾಗತಿಕವಾಗಿ ಪ್ರತಿಯೊಬ್ಬರ ಮೇಲೂ ಏಕಕಾಲಕ್ಕೆ ಅಗಾಧ ಪರಿಣಾಮ ಬೀರಿತು. ಸಮಾಜದೆಲ್ಲೆಡೆ ಯೋಗಕ್ಷೇಮದ ಮೇಲೆ ನಕಾರಾತ್ಮಕ ಆಘಾತದ ಪರಿಣಾಮ ಉಂಟುಮಾಡಿದೆ. ಈ ಬಿಕ್ಕಟ್ಟನ್ನು ಎದುರಿಸಲು ಧರ್ಮ ಹೇಗೆ ಸಹಕಾರಿಯಾಗಿದೆ ಎಂಬುದನ್ನು ಅಳೆಯಲು ಇದು ವಿಶೇಷ ಅವಕಾಶ ನೀಡಿದೆ.
ಈ ಅಧ್ಯಯನಕ್ಕೆ ತಂಡವು ಯುಕೆಯ 3,884 ಜನರ ಸಮೀಕ್ಷೆ ನಡೆಸಿ ಡೇಟಾ ವಿಶ್ಲೇಷಿಸಿದೆ. ಲಾಕ್‌ಡೌನ್ ಮತ್ತು ಸಾಂಕ್ರಾಮಿಕತೆಗೆ ಮುನ್ನದ ಮೂರು ಅಲೆಗಳೊಂದಿಗೆ ಡೇಟಾವನ್ನು ಹೋಲಿಕೆ ಮಾಡಲಾಗಿದೆ. ಸಂಶೋಧಕರು ಧಾರ್ಮಿಕತೆಯನ್ನು ಡೇಟಾದ ಮೂಲಕ ವಿಶ್ಲೇಷಿಸಿದ್ದಾರೆ. ಈ ವೇಳೆ ವ್ಯಕ್ತಿಯ ಧಾರ್ಮಿಕ ನಂಬಿಕೆಯ ಬದ್ಧತೆಯನ್ನು ಗಮನಿಸಲಾಗಿದೆ.
ಅಧ್ಯಯನ ವರದಿ ಕೇಂಬ್ರಿಡ್ಜ್‌ನ ಫ್ಯಾಕಲ್ಟಿ ಆಫ್ ಎಕನಾಮಿಕ್ಸ್‌ನಿಂದ ವರ್ಕಿಂಗ್ ಪೇಪರ್ನಲ್ಲಿ ಪ್ರಕಟಿಸಲಾಗಿದೆ. ಧಾರ್ಮಿಕತೆ ಹೊಂದಿರುವ ಜನರು ಖಿನ್ನತೆ ಅನುಭವಿಸುವ ಪ್ರಮಾಣವು ಶೇ.20ರಷ್ಟು ಕಡಿಮೆ ಎಂದು ತಿಳಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಕೇಂದ್ರಗಳು ಮುಚ್ಚಿದಾಗ ಕೆಲವು ಧಾರ್ಮಿಕ ಗುಂಪಿನ ಜನರು ಇತರರಿಗಿಂತ ಹೆಚ್ಚು ಬಳಲಿದ್ದಾರೆ ಎಂದೂ ಕೂಡ ಅಧ್ಯಯನ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಜಪಾನ್‌ಗೆ ಕೋವಿಡ್ 10ನೇ ಅಲೆ ಭೀತಿ