ನವದೆಹಲಿ: ಕೆಲಸದ ಸ್ಥಳದ ಒತ್ತಡವು ಇಂದು ಕಟುವಾಸ್ತವ ಆಗಿದ್ದು, ಈ ಕುರಿತು ವೈಯಕ್ತಿಕ ಮತ್ತು ಸಂಸ್ಥೆಗಳ ಮ್ಯಾನೇಜ್ಮೆಂಟ್ ಮಟ್ಟದಲ್ಲೂ ಪರಿಹಾರದ ಅಗತ್ಯತೆ ಇದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಕೆಲಸದ ಒತ್ತಡದ ಹಿನ್ನೆಲೆ ವ್ಯಕ್ತಿಯೋರ್ವ ಹೃದಯಾಘಾತಕ್ಕೆ ಒಳಗಾದರೆ, ಮತ್ತೋರ್ವ ಆತ್ಮಹತ್ಯೆಗೆ ಶರಣಾಗಿದ್ದರು. ಈ ನಿಟ್ಟಿನಲ್ಲಿ ಕೆಲಸದ ಸ್ಥಳದ ಒತ್ತಡ ಕುರಿತು ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ.
ಈ ಕುರಿತು ಮಾತನಾಡಿರುವ ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ ರಾಜೀವ್ ಮೆಹ್ತಾ, ಅಧಿಕ ಕೆಲಸ, ಕೆಲಸದ ಸ್ಥಳದಲ್ಲಿನ ಆಂತರಿಕ ಸಂಬಂಧ, ಡೆಡ್ಲೈನ್, ದೀರ್ಘ ಕೆಲಸ ಮತ್ತು ಪ್ರಯಾಣದ ಸಮಯ ಈ ಎಲ್ಲವೂ ಕೂಡ ಕೆಲಸದ ಒತ್ತಡಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ.
ಕೆಲಸದ ಒತ್ತಡದಿಂದ ಏನೆಲ್ಲಾ ಸಮಸ್ಯೆ; ಈ ಕೆಲಸದ ಒತ್ತಡವು ಕೋಪ ಅಥವಾ ಖಿನ್ನತೆ, ಧೂಮಪಾನ ಮತ್ತು ಆಲ್ಕೋಹಾಲ್ ಚಟಕ್ಕೆ ಕಾರಣವಾಗುತ್ತದೆ. ಮನೆಯಲ್ಲಿನ ಆಂತರಿಕ ಸಂಬಂಧಗಳು ಹಳಿ ತಪ್ಪಬಹುದು. ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಬೆನ್ನು ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪರಿಹಾರ ಏನು; ವೈದ್ಯರಾದ ರಾಜೀವ್ ಹೇಳುವಂತೆ, ಈ ಒತ್ತಡವನ್ನು ಹೊಡೆದೊಡಿಸುವ ಪ್ರಮುಖ ಹೆಜ್ಜೆ ಎಂದರೆ, ಉದ್ಯೋಗ ಸ್ಥಳದಲ್ಲಿ ದೃಢವಾಗಿದ್ದು, ಕೆಲವು ಗಡಿಗಳನ್ನು ರೂಪಿಸಿಕೊಳ್ಳುವುದು ಅವಶ್ಯ. ಹೌದು ಎಂದು ಹೇಳುವಷ್ಟೇ ದೃಢವಾಗಿ ಇಲ್ಲ ಎಂಬುದನ್ನು ಹೇಳುವುದು ಪ್ರಮುಖವಾಗುತ್ತದೆ.
ಕೆಲಸದ ಸಂದರ್ಭದಲ್ಲಿ ಪ್ರತಿ ಗಂಟೆಗೊಮ್ಮೆ 15-20 ನಿಮಿಷ ವಿರಾಮ ಪಡೆಯಿರಿ. ಈ ಸಮಯದಲ್ಲಿ ನಿಮ್ಮ ಡೆಸ್ಕ್ ಮತ್ತು ಕಚೇರಿಯ ಜನರಿಂದ ದೂರದಲ್ಲಿ ವಾಕ್ನಂತ ಅಭ್ಯಾಸ ರೂಢಿಸಿಕೊಳ್ಳುವುದು ಕೂಡ ಅವಶ್ಯವಾಗುತ್ತದೆ ಎನ್ನುತ್ತಾರೆ ಮನೋವೈಜ್ಞಾನಿಕ ಸಮಾಲೋಚಕಿ ದಿವ್ಯಾ ಮೊಹಿಂದ್ರೊ.
ಅಷ್ಟೇ ಅಲ್ಲದೇ, ಕಚೇರಿಯ ಮ್ಯಾನೇಜ್ಮೆಂಟ್ ಮತ್ತು ಸಹ ಕೆಲಸಗಾರರು ಕೂಡ ಉದ್ಯೋಗಿಯನ್ನು ಒತ್ತಡ ಮುಕ್ತವಾಗಿರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ಉದ್ಯೋಗಿಗಳಿಗೆ ಅಧಿಕ ಕೆಲಸ, ಹೊರೆಯನ್ನು ನೀಡುವುದರ ಬದಲಾಗಿ ಅವರ ಮಿತಿ ಅರಿಯುವುದು ಅವಶ್ಯ. ಜೊತೆಗೆ ಅವರ ಜೊತೆ ಸಹಾನುಭೂತಿ ಹೊಂದಬೇಕಿದೆ ಎಂದಿದ್ದಾರೆ ಡಾ ರಾಜೀವ್.
ಎಲ್ಲಾ ವೃತ್ತಿಪರರು ತಮ್ಮ ಕೆಲಸದ ಜವಾಬ್ದಾರಿಗಳನ್ನು ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಮತ್ತು ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಅವರು ಕೂಡ ಜವಾಬ್ದಾರಿಯುತವಾಗಿರಲು ಸಹಾಯ ಮಾಡುತ್ತದೆ. ಇದರಿಂದಾಗಿ ಉದ್ಯೋಗ ಸ್ಥಳ ಮತ್ತು ಜೀವನವನ್ನು ಸುಲಭವಾಗಿ ನಿಭಾಯಿಸಬಹುದು ಎನ್ನುತ್ತಾರೆ ದಿವ್ಯಾ.
ವೃತ್ತಿ- ಜೀವನದ ಸಮಾತೋಲನ ಸಾಧಿಸಲು ಯೋಗ, ವ್ಯಾಯಾಮ, ಸಮತೋಲನದ ಆಹಾರ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವಿಕೆ, ಸರಿಯಾದ ನಿದ್ರೆ, ಹೈಡ್ರೇಷನ್ ಮತ್ತು ನಿಯಮಿತ ವಿರಾಮ ಮತ್ತು ರಜೆ ಪಡೆಯುವುದು ಅವಶ್ಯಕ. ಜೊತೆಗೆ ಸರಿಯಾದ ಸಮಯದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರ ಸಹಾಯ ಪಡೆಯುವುದು ಅವಶ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಭೌತಿಕ ಬಳಕೆದಾರರಲ್ಲಿ ಬೇಸರ, ಒತ್ತಡಕ್ಕೆ ಕಾರಣವಾಗುವ ಸೋಷಿಯಲ್ ಮೀಡಿಯಾ