ಬೀದಿ ಬದಿ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಹಮತದ ಅಭಿಮತ. ಅವುಗಳನ್ನು ತಿನ್ನಬಾರದು ಎಂದು ಹಲವು ಸಲಹೆ ನೀಡುತ್ತಾರೆ. ಹಾಗಂತ, ರಸ್ತೆ ಬದಿ ಇರುವ ಎಲ್ಲ ಆಹಾರ ಪದಾರ್ಥಗಳು ಕೆಟ್ಟದ್ದೇ, ಇದರಲ್ಲಿ ಒಳ್ಳೆಯ ಆಹಾರಗಳು ಇಲ್ಲವೇ ಎಂಬುದು ಪ್ರಶ್ನೆ. ಕೆಲ ನಿಪುಣರ ಪ್ರಕಾರ, ಬೀದಿ ಬದಿ ಸಿಗುವ ಆಹಾರಗಳಲ್ಲಿ ಒಳ್ಳೆಯವೂ ಇವೆ. ಮಳೆ ಜಿನುಗುತ್ತಿದ್ದಾಗ ಗರಿಗರಿ ಕುರುಕಲು ತಿಂಡಿ ನಾಲಿಗೆಗೆ ರುಚಿ ನೀಡುತ್ತವೆ ಎನ್ನುತ್ತಾರೆ ಅವರು.
ಹವಾಮಾನ ಬದಲಾದಂತೆ ತಿನಿಸುಗಳು ಕೂಡ ಬದಲಾಗುತ್ತವೆ. ಅದರಲ್ಲೂ ಮಳೆಗಾಲದಲ್ಲಿ ನಾಲಿಗೆಯ ಜೊತೆಗೆ ಮನಸು ಕೂಡ ಬಿಸಿ, ಖಾರವಾದುದನ್ನು ತಿನ್ನಲು ಬಯಸುತ್ತದೆ. ಹೀಗಾಗಿ, ಪ್ರತಿ ಬಾರಿ ಮಳೆ ಬಂದಾಗ ಏನನ್ನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ, ಮನೆಯಲ್ಲಿ ತಿನಿಸು ತಯಾರಿಸಲು ಉದಾಸೀನ. ಈ ವೇಳೆ ಹೊರಗೆ ಸಿಗುವ ಆಹಾರ ತಿನ್ನಲು ಮನಸು ಸೂಚಿಸುತ್ತದೆ.
ಆದರೆ, ಬೀದಿ ಬದಿ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಯವೂ ನಮ್ಮಲ್ಲಿದೆ. ವಾಸ್ತವವಾಗಿ, ಎಲ್ಲ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವಾಗಿಲ್ಲ. ತುಸು ಯೋಚಿಸಿದರೆ, ಬೀದಿಗಳಲ್ಲಿ ಅನೇಕ ಆರೋಗ್ಯಕರ ತಿನಿಸುಗಳನ್ನು ಕಾಣಬಹುದು. ಅಂತಹ ಆಹಾರಗಳು ಯಾವುವು, ಅವುಗಳನ್ನು ತಿನ್ನಬಹುದೇ ಎಂಬುದರ ವಿವರ ನೋಡೋಣ.
ಮೆಕ್ಕೆಜೋಳ: ಮಳೆಗಾಲದ ತಿನಿಸಿನಲ್ಲಿ ಮೆಕ್ಕೆಜೋಳ ಕೂಡ ಒಂದು. ಇದನ್ನು ಕುದಿಸಿ ಅಥವಾ ಬೇಯಿಸಿ ತಿನ್ನಬಹುದು. ಜೋಳಕ್ಕೆ ಸ್ವಲ್ಪ ಉಪ್ಪು ಅಥವಾ ನಿಂಬೆ ರಸ ಹಚ್ಚಿ ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮಳೆಯಲ್ಲಿ ಇದನ್ನು ತಿಂದರೆ, ವಾವ್ ಅನ್ನಿಸುವುದಲ್ಲದೇ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.
ಭೇಲ್ ಪುರಿ: ಖಾರ ಮತ್ತು ಹುಳಿ ಇರುವ ಕುರುಕಲು ತಿಂಡಿಯಾದ ಭೇಲ್ಪುರಿ ಅನೇಕರ ಇಷ್ಟದ ತಿಂಡಿ. ಮಳೆಗಾಲದಲ್ಲಿ ನಮ್ಮ ನಾಲಿಗೆಯನ್ನು ತೃಪ್ತಿಪಡಿಸುವ ಆಹಾರಗಳಲ್ಲಿ ಇದು ಮೊದಲಿದೆ. ಕಡ್ಲೆಪುರಿ(ಮಂಡಕ್ಕಿ), ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಮಸಾಲೆಯಿಂದ ಮಾಡಿದ ಭೇಲ್ ಪುರಿ ತಿಂದಲ್ಲಿ ಅದರ ಸ್ವಾದವೇ ಬೇರೆ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಯಲ್ಲ.
ಕಬಾಬ್: ಮಳೆಗಾಲದಲ್ಲಿ ಕಬಾಬ್ ರುಚಿಕರ ಖಾದ್ಯ. ಇದು ಅನೇಕೆ ಮೆಚ್ಚಿನ ತಿಂಡಿ. ಅಣಬೆಗಳು, ಚಿಕನ್ ಮತ್ತು ಮೊಸರಿಂದ ಮಾಡಿದ ಮಸಲಾಯಿಂದ ತಯಾರಿಸಿದ ಕಬಾಬ್ ತಿನ್ನುವುದು ಆರೋಗ್ಯಕರವಾಗಿದೆ. ಮಿತವಾಗಿ ತಿನ್ನುವುದು ಉತ್ತಮ.
ಶೇಂಗಾ ಚಾಟ್: ಕುದಿಸಿದ ಶೇಂಗಾ, ಹಸಿ ಮೆಣಸಿನಕಾಯಿ, ಕೊತ್ತಂಬರಿ, ನಿಂಬೆರಸ ಮತ್ತು ಮಸಾಲೆ ಬೆರೆತ ಚಾಟ್ ಜಿನುಗುತ್ತಿರುವ ಮಳೆಯಲ್ಲಿ ತಿನ್ನಲು ಅದೆಷ್ಟು ರುಚಿಕರ. ಇದನ್ನು ಮನೆಯಲ್ಲಿ ಮಾತ್ರವಲ್ಲ, ಬೀದಿ ಬದಿ ಸಿಗುವ ಅಂಗಡಿಯಲ್ಲಿ ತಿಂದರೂ ಸಮಸ್ಯೆ ಏನಿಲ್ಲ.
ಸೂಪ್ಸ್: ಸೂಪ್‌ಗಳು ಆರೋಗ್ಯಕರ ಆಹಾರದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತವೆ. ನೀವು ಸಸ್ಯಾಹಾರಿಯಾಗಿರಿ ಅಥವಾ ಮಾಂಸಾಹಾರಿಯಾಗಿರಿ ಸೂಪ್ ಸರ್ವಹಾರಿ ಪದಾರ್ಥ. ಇವುಗಳು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಅವಲಕ್ಕಿ: ಕರಿದ ಅವಲಕ್ಕಿಗೆ ಹಸಿಮೆಣಸಿನಕಾಯಿ, ಕೊತ್ತಂಬರಿ, ಅರಿಶಿಣ, ಈರುಳ್ಳಿ, ನಿಂಬೆರಸ, ತುಪ್ಪ ಹಾಕಿ ಮಿಶ್ರಣ ಮಾಡಿದ ತಿಂಡಿಯನ್ನು ಹೊರಗಿನಿಂದ ತಂದು ತಿನ್ನಬಹುದು. ಇವುಗಳ ಜೊತೆಗೆ ಇಡ್ಲಿ ಮತ್ತು ದೋಸೆಯನ್ನೂ ನೀವು ಆಯ್ಕೆ ಮಾಡಿಕೊಂಡರೂ ಉತ್ತಮ.
ಗಮನಿಸಿ: ಇಲ್ಲಿ ನೀಡಲಾಗಿರುವ ಎಲ್ಲ ಮಾಹಿತಿಯು ನಿಮ್ಮ ಅವಗಾಹನೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯ ಆಧಾರದ ಮೇಲೆ ಈ ಸಲಹೆಗಳನ್ನು ಒದಗಿಸಲಾಗುತ್ತದೆ. ಆದರೆ, ಇವನ್ನು ಅನುಸರಿಸುವ ಮೊದಲು ಆಪ್ತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.