ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವ ರೋಗಿಗಳು ತಮ್ಮ ಆರೋಗ್ಯ ದೃಷ್ಟಿಯಿಂದ ಕೆಲ ಆಹಾರಗಳಿಂದ ದೂರವಿರಬೇಕು. ಬಿಪಿ ಹೊಂದಿರುವವರು ಸೇವಿಸುವ ಆಹಾರದ ಬಗ್ಗೆ ಎಚ್ಚರದಿಂದಿರಬೇಕು ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಇತರ ಆರೋಗ್ಯ ಸಮಸ್ಯೆಗಳಿಂದ ಕೂಡಿರುತ್ತಾರೆ. ನಿಮಗೆ ತಿಳಿಯದೆ ನೀವು ನಿಯಮಿತವಾಗಿ ಸೇವಿಸುವ ಕೆಲವು ಆಹಾರ ಪದಾರ್ಥಗಳು ಕೂಡ ನಿಮ್ಮ ಬಿಪಿಯನ್ನು ಹೆಚ್ಚಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಯಾವ ಆಹಾರ ಸೇವಿಸಬೇಕು, ಯಾವುದರಿಂದ ದೂರವಿರಬೇಕು ಎಂಬುದಕ್ಕೆ ಇಲ್ಲಿ ಉತ್ತರವಿದೆ.
ಈ ಕೆಳಗಿನ ಆಹಾರದಿಂದ ದೂರವಿರಿ: ರೆಡಿ-ಟು-ಈಟ್ ಸೂಪ್‌ಗಳು: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ರೆಡಿ ಟು ಈಟ್ ಸೂಪ್ ಗಳನ್ನು ಖರೀದಿಸಿ ಮನೆಯಲ್ಲೇ ಸೇವಿಸುತ್ತಾರೆ. ಆದರೆ.. ಅಧಿಕ ರಕ್ತದೊತ್ತಡ ಇರುವವರು ಇವುಗಳನ್ನು ಕುಡಿಯದೇ ಇರಲು ಸೂಚಿಸಲಾಗಿದೆ. ಏಕೆಂದರೆ ಇವು ಹೆಚ್ಚಿನ ಉಪ್ಪಿನಂಶವನ್ನು ಹೊಂದಿರುತ್ತವೆ. ಉದಾಹರಣೆಗೆ, ಅರ್ಧ ಕಪ್ ರೆಡಿಮೇಡ್ ಚಿಕನ್ ನೂಡಲ್ ಸೂಪ್ 890 ಮಿಗ್ರಾಂ ಸೋಡಿಯಂ ಅನ್ನು ಹೊಂದಿರುತ್ತದೆ. ಇದು ಬಿಪಿ ರೋಗಿಗಳಿಗೆ ಒಳ್ಳೆಯದಲ್ಲ.
ಚೀಸ್: ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ತಮ್ಮ ಆಹಾರದಲ್ಲಿ ಚೀಸ್ಅನ್ನು ಸೇರಿಸಬಾರದು. ಏಕೆಂದರೆ ಇದರಲ್ಲಿ ಉಪ್ಪು ಕೂಡ ಅಧಿಕವಾಗಿರುತ್ತದೆ.
ತಂಪು ಪಾನೀಯಗಳು: ಹೈ ಬಿಪಿ ಇರುವವರು ಹೆಚ್ಚಿನ ಸಕ್ಕರೆ ಅಂಶವಿರುವ ತಂಪು ಪಾನೀಯಗಳನ್ನು ಕೂಡ ತ್ಯಜಿಸಬೇಕು. ಇವು ರಕ್ತದೊತ್ತಡದ ಜೊತೆಗೆ ತೂಕವನ್ನು ಹೆಚ್ಚಿಸುತ್ತವೆ. ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ಪ್ರಕಟಿಸಿದ ವರದಿಯ ಪ್ರಕಾರ, ಸಕ್ಕರೆಯ ತಂಪು ಪಾನೀಯಗಳ ಸೇವನೆಯಿಂದ ಬಿಪಿ ಹೆಚ್ಚಾಗುವ ಸಾಧ್ಯತೆ ಶೇಕಡಾ 20 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ವೈನ್: ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ಪ್ರತಿದಿನ ಕೇವಲ ಒಂದು ಅಥವಾ ಎರಡು ಲೋಟ ರೆಡ್ ವೈನ್ಗಿಂತ ಅಧಿಕ ಸೇವಿಸುತ್ತಿದ್ದರೆ ಅದು ಕೂಡ ಮಾರಕವಾಗಿದೆ. ವೈನ್ ಹೆಚ್ಚು ಕುಡಿಯುವುದರಿಂದ ರಕ್ತದೊತ್ತಡದ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.
ಫ್ರೆಂಚ್ ಫ್ರೈಸ್: ಫ್ರೆಂಚ್ ಫ್ರೈಗಳು ಅನೇಕ ಜನರು ತಿನ್ನಲು ಇಷ್ಟಪಡುವ ಜಂಕ್ ಫುಡ್‌ಗಳಲ್ಲಿ ಒಂದಾಗಿವೆ. ಆದರೆ ಹೈ ಬಿಪಿಯಿಂದ ಬಳಲುತ್ತಿರುವವರು ಇವುಗಳನ್ನು ತಿನ್ನಲೇಬಾರದು. ಇವುಗಳಲ್ಲಿ ಉಪ್ಪು ಅಧಿಕವಾಗಿರುತ್ತದೆ.
ಇದರ ಜೊತೆಗ ಹೈದರಾಬಾದಿನ ಪೌಷ್ಟಿಕ ತಜ್ಞೆ ಡಾ. ಅಂಜಲಿ ದೇವಿ ಅವರು ಅಧಿಕ ರಕ್ತದೊತ್ತಡ ಹೊಂದಿರುವವರು ಮಟನ್, ಚಿಕನ್ ಮತ್ತು ಕರಿದ ಮಾಂಸವನ್ನು ತ್ಯಜಿಸಬೇಕು ಎಂದು ಸಲಹೆ ನೀಡುತ್ತಾರೆ. ಇವು ಹೆಚ್ಚು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅತಿಯಾಗಿ ಸೇವಿಸುವುದರಿಂದ ಕೊಬ್ಬು ಶೇಖರಣೆಯಾಗುತ್ತದೆ. ಇದು ಬಿಪಿ ರೋಗಿಗಳಿಗೆ ಒಳ್ಳೆಯದಲ್ಲ ಎಂದು ಸಲಹೆ ನೀಡಿದ್ದಾರೆ. ಅಧಿಕ ರಕ್ತದೊತ್ತಡ ಇರುವವರು ಪಿಜ್ಜಾ ಕೂಡ ತಿನ್ನಬಾರದು, ಇದರಲ್ಲಿ ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಹಾಗೇ ತುಂಬಾ ಇಷ್ಟ ಪಡುವ ಪಾಪ್ ಕಾರ್ನ್ನಲ್ಲಿ ಉಪ್ಪು ಕೂಡ ಅಧಿಕವಾಗಿರುತ್ತದೆ. ಆದ್ದರಿಂದಲೇ ಅಧಿಕ ರಕ್ತದೊತ್ತಡ ರೋಗಿಗಳು ಹೊರಗೆ ಸಿಗುವ ಪಾಪ್ ಕಾರ್ನ್ ತಿನ್ನಬಾರದು. ನಾವು ಪ್ರತಿದಿನ ಕುಡಿಯುವ ಖನಿಜಯುಕ್ತ ನೀರಿನಲ್ಲಿ ಸೋಡಿಯಂ ಕೂಡ ಇರುತ್ತದೆ. ಸುಮಾರು ಒಂದು ಲೀಟರ್ ನೀರಿನಲ್ಲಿ 200 ಮಿಲಿ ಗ್ರಾಂಗಿಂತ ಹೆಚ್ಚು ಸೋಡಿಯಂ ಇರುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡ ಹೊಂದಿರುವ ಜನರು ಖನಿಜಯುಕ್ತ ನೀರನ್ನು ತಪ್ಪಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.