ಲಕ್ನೋ: ಮೊಬೈಲ್ನಲ್ಲಿ ಕಾರ್ಟೂನ್ ನೋಡುತ್ತಿದ್ದಾಗ ಐದು ವರ್ಷದ ಬಾಲಕಿ ಹೃದಯಾಘಾತಕ್ಕೊಳಗಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯ ಹತೈಖೇಡದಲ್ಲಿ ನಡೆದಿದೆ.
ತಾಯಿ ಪಕ್ಕ ಮಲಗಿಕೊಂಡು ಮೊಬೈಲ್ ನೋಡುತ್ತಿದ್ದ ಬಾಲಕಿ ಕೈಯಿಂದ ಮೊಬೈಲ್ ಜಾರಿದ್ದು, ಪ್ರಜ್ಞೆ ತಪ್ಪಿದ್ದಾಳೆ. ಎಚ್ಚರಿಸಲು ಮಾಡಿದ ಪ್ರಯತ್ನ ಕೈಗೂಡಲಿಲ್ಲ. ತಕ್ಷಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಆದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಹಸನ್ಪುರ್ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಧ್ರುವೇಂದ್ರ ಕುಮಾರ್ ಮಾತನಾಡಿ, "ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ" ಎಂದು ಖಚಿತಪಡಿಸಿದ್ದಾರೆ.
ಅಮ್ರೋಹ ಮುಖ್ಯ ವೈದ್ಯಕೀಯ ಅಧಿಕಾರಿ ಸತ್ಯಪಾಲ್ ಸಿಂಗ್ ಪ್ರತಿಕ್ರಿಯಿಸಿ, "ಈ ಕುರಿತು ಹೆಚ್ಚಿನ ವೈದ್ಯಕೀಯ ತನಿಖೆಗೆ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವಂತೆ ಮನವಿ ಪೋಷಕರಿಗೆ ಮಾಡಿದೆವು. ಸಾವಿಗೆ ಹೃದಯಾಘಾತ ಅಥವಾ ಇತರೆ ರೋಗ ಕಾರಣವೇ ಎಂಬ ಕುರಿತು ತನಿಖೆ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಅವರ ಕುಟುಂಬಸ್ಥರು ಇದಕ್ಕೆ ಒಪ್ಪಲಿಲ್ಲ. ಅಮ್ರೋಹ ಮತ್ತು ಬಿಜ್ನೊರ್ ಪ್ರದೇಶದಲ್ಲಿ ಇದೇ ರೀತಿ ಹೃದಯಾಘಾತದಿಂದ 12ಕ್ಕೂ ಹೆಚ್ಚು ಮಕ್ಕಳು ಮತ್ತು ಯುವ ಜನತೆ ಸಾವನ್ನಪ್ಪಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
2023ರ ಡಿಸೆಂಬರ್ 31ರಂದು ಅಮ್ರೋಹದ ಹಸನ್ಪುರ್ನ 16 ವರ್ಷದ ಬಾಲಕ ಕ್ರಿಕೆಟ್ ಆಡುವಾಗ ತಲೆ ಸುತ್ತಿ ಬಿದ್ದಿದ್ದ. ಬಳಿಕ ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಆತ ಸಾವನ್ನಪ್ಪಿದ್ದಾನೆ. ಇದಕ್ಕೂ ಕೆಲವು ದಿನದ ಹಿಂದೆ ಅಂದರೆ ಡಿಸೆಂಬರ್ 9ರಂದು ಬಿಜ್ನೋರ್ನ 12 ವರ್ಷದ ಬಾಲಕಿ ಶಾಲಾ ಕೊಠಡಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಳು.
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ಸಂಭವಿಸುತ್ತವೆ. ಚಳಿಯಿಂದ ದೇಹದಲ್ಲಿ ಆಮ್ಲಜನಕದ ಮಟ್ಟ ಮತ್ತು ರಕ್ತದೊತ್ತಡ ಕ್ಷೀಣಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ಹಿರಿಯ ಫಿಸಿಷಿಯನ್ ರಾಹುಲ್ ಬಿಷ್ಣೋಯಿ ತಿಳಿಸಿದರು. ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚುವ ಕುರಿತು ಅನೇಕ ಅಧ್ಯಯನಗಳು ಕೂಡಾ ತಿಳಿಸಿದೆ. ಮೈ ಕೊರೆಯುವ ಚಳಿಯಿಂದ ಹೃದಯ ರಕ್ತನಾಳ ಸಂಕುಚಿತವಾಗುತ್ತದೆ. ಇದು ರಕ್ತದೊತ್ತಡ ಹೆಚ್ಚಿಸಿ ಹೃದಯಾಘಾತವನ್ನು ಪ್ರೇರೇಪಿಸುತ್ತದೆ. ವಿಶೇಷವಾಗಿ ಈಗಾಗಲೇ ಹೃದಯ ರಕ್ತನಾಳ ಸಮಸ್ಯೆ ಹೊಂದಿರುವವರಲ್ಲಿ ಇದು ಜಾಸ್ತಿ ಎಂದು ತಜ್ಞರು ಹೇಳಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಐದು ವರ್ಷದೊಳಗಿನ ಶೇ. 60 ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶ ಕೊರತೆ; ಶೇ. 40 ಮಕ್ಕಳಲ್ಲಿ ರಕ್ತಹೀನತೆ