ಬೆಂಗಳೂರು: 39 ವರ್ಷದ ಅನಿವಾಸಿ ಭಾರತೀಯ ಮಹಿಳೆ (ಎನ್‌ಆರ್‌ಐ)ಯ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಪುನಃಸ್ಥಾಪಿಸಿದೆ.
ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ್ತಿ ಡಾ.ರುಬಿನಾ ಶಾನವಾಜ್ ನೇತೃತ್ವದ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.
ವೈದ್ಯರ ಮಾತು: ಡಾ. ರುಬಿನಾ ಮಾತನಾಡಿ, ''ಎರಡು ಮಕ್ಕಳನ್ನು ಹೊಂದಿರುವ ಮಹಿಳೆಯ ಗರ್ಭಕೋಶ ಜನನಾಂಗದ ಮೂಲಕ ಹೊರಗೆ ಚಾಚಿಕೊಂಡಿತ್ತು. ಸಾಮಾನ್ಯವಾಗಿ ಋತುಬಂಧ ನಿಂತ ಬಳಿಕ ಈ ಸಮಸ್ಯೆ ಕೆಲವರಲ್ಲಿ ಕಾಣಿಸುತ್ತದೆ. ಆದರೆ, ಇವರಿಗೆ ಋತುಬಂಧ ನಿಲ್ಲುವ ಮೊದಲೇ ಗರ್ಭಕೋಶ ಜನನಾಂಗದ ಮೂಲಕ ಚಾಚಿಕೊಂಡಿದೆ. ಈ ಸಮಸ್ಯೆಯಿಂದಾಗಿ ಅವರು ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆಯಿಂದ ತೊಡೆಗಳ ಅಸ್ವಸ್ಥತೆ, ಮೂತ್ರ ವಿಸರ್ಜನೆ ಮಾಡುವುದೂ ಕಷ್ಟವಾಗಿತ್ತು'' ಎಂದರು.
ರೋಬೋಟಿಕ್ ಸಹಾಯದಿಂದ ಶಸ್ತ್ರಚಿಕಿತ್ಸೆ: ''ಕೆಲವರು ಇದಕ್ಕೆ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಆದರೆ, ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಳಗೆ ಜಾರಿದ ಗರ್ಭಕೋಶವನ್ನು ರೋಬೋಟಿಕ್ ಸಹಾಯದ ಮೂಲಕ ಮೇಲೆತ್ತುವ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅಂತೆಯೇ ಇವರಿಗೂ ಸಹ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶವನ್ನು ತೆಗೆಸುವಂತೆಯೇ ಸಲಹೆ ನೀಡಲಾಗಿತ್ತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಇವರಿಗೆ ರೋಬೋಟ್- ಅಸಿಸ್ಟೆಡ್ ಸ್ಯಾಕ್ರೋ- ಹಿಸ್ಟರೊಪೆಕ್ಸಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು. ಈ ಅಪರೂಪದ ಶಸ್ತ್ರಚಿಕಿತ್ಸೆಯ ಮೂಲಕ ಕೆಳಗೆ ಜಾರಿದ್ದ ಗರ್ಭಕೋಶವನ್ನು ಅದೇ ಸ್ಥಳದಲ್ಲಿ ಕೂರಿಸಲಾಯಿತು. ಇದೀಗ ಚೇತರಿಸಿಕೊಂಡಿದ್ದಾರೆ'' ಎಂದು ಡಾ.ರುಬಿನಾ ಶಾನವಾಜ್ ಮಾಹಿತಿ ನೀಡಿದರು.
ಇತ್ತೀಚೀನ ಪ್ರಕರಣ- ಗರ್ಭಕೋಶದ ಸುತ್ತ ಬೆಳೆದಿದ್ದ 4.5 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು: ಇತ್ತೀಚೆಗೆ, ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆಯನ್ನು ಹೊರತೆಗೆಯುವಲ್ಲಿ ದೊಡ್ಡಬಳ್ಳಾಪುರದ ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿತ್ತು. 35 ವರ್ಷದ ಮಹಿಳೆಯ ಗರ್ಭಕೋಶದ ಸುತ್ತ 4.5 ಕೆಜಿಯ ಗಡ್ಡೆ ಬೆಳೆದಿತ್ತು.
ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ(35) ಎಂಬವರು ಇತ್ತೀಚೆಗೆ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವು ಮತ್ತು ಸುಸ್ತು ಎಂದು ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 4.5 ಕೆಜಿ ಗಡ್ಡೆ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರಸೂತಿ ತಜ್ಞ ಡಾ.ಅರ್ಚನಾ ಕೆ.ಎಲ್. ನೇತೃತ್ವದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿತ್ತು. ಡಾ.ಅರ್ಚನಾ ಕೆ.ಎಲ್., ಡಾ.ಗಿರೀಶ್, ಡಾ.ಪ್ರೇಮಲತಾ, ನರ್ಸ್ ಗಾಯತ್ರಿ, ನಂದಿನಿ, ಭವ್ಯ, ರಾಜು ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.