ನವದೆಹಲಿ: ಡೆಂಗ್ಯೂ ಸಾಮಾನ್ಯ ಜ್ವರದ ಲಕ್ಷಣಗಳನ್ನು ಉಂಟುಮಾಡುತ್ತದೆ. ಸೊಳ್ಳೆಗಳಿಂದ ಹರಡುವ ಈ ವೈರಲ್ ಸೋಂಕು ನರವ್ಯವಸ್ಥೆಯ ಮೇಲೆ ಆಳ ಪರಿಣಾಮ ಬೀರುತ್ತದೆ. ಹೀಗಾಗಿ, ಈ ವಿಚಾರವನ್ನು ನಿರ್ಲಕ್ಷ್ಯಿಸುವಂತಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಾನ್ಸೂನ್ ಆರಂಭವಾದಾಗಿನಿಂದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಲೇ ಇವೆ. ಪ್ರಾಥಮಿಕವಾಗಿ ಜ್ವರದ ಲಕ್ಷಣ ಹೊಂದಿದ್ದರೂ ಇದು ನರಸಮಸ್ಯೆಗೆ ಕಾರಣವಾಗುತ್ತದೆ ಎಂದು ಗುರುಗ್ರಾಮ್ನ ಫೋರ್ಟಿಸ್ ಆಸ್ಪತ್ರೆ ನರರೋಗ ತಜ್ಞ ಡಾ.ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.
ನರ ಸಮಸ್ಯೆ ಕಡಿಮೆಯಾದರೂ ಇದು ಎನ್ಸೆಫಾಲಿಟಿಸ್, ಮೆನಿಂಜೈಟಿಸ್ ಮತ್ತು ಮೈಲಿಟಿಸ್ ಸಮಸ್ಯೆಗಳನ್ನು ಕಾಣಬಹುದು. ಮಿದುಳಿನ ತಡೆಗೋಡೆ ದಾಟುವ ವೈರಸ್ನಿಂದ ಉಂಟಾಗುತ್ತದೆ. ಮೆದುಳು ಮತ್ತು ಬೆನ್ನುಹುರಿಯ ಉರಿಯೂತ ಮತ್ತು ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ತೀವ್ರವಾದ ಡೆಂಗ್ಯೂ ಲಕ್ಷಣ ಹೊಂದಿರುವ ರೋಗಿಗಳಲ್ಲಿ ತಲೆನೋವು, ಬದಲಾದ ಮಾನಸಿಕ ಸ್ಥಿತಿ, ರೋಗಗ್ರಸ್ತವಾಗುವಿಕೆಗಳು ಮತ್ತು ಕೋಮಾ ಪರಿಸ್ಥಿತಿಗಳನ್ನು ಕಾಣಬಹುದು. ವೈರಸ್‌ನ ನ್ಯೂರೋಟ್ರೋಪಿಕ್ ಸ್ವಭಾವವೆಂದರೆ, ಅದು ನೇರವಾಗಿ ನರಕೋಶಗಳಿಗೆ ಸೋಂಕು ತಗುಲಿಸುತ್ತದೆ. ಹಾಗೆಯೇ ಉರಿಯೂತ ಉಂಟುಮಾಡುತ್ತದೆ. ಪ್ರತಿರಕ್ಷಣಾ ಪ್ರತಿಕ್ರಿಯೆ ನರ ವ್ಯವಸ್ಥೆಯ ಮೇಲೆ ಹಾನಿ ಮಾಡುತ್ತದೆ.
ಡೆಂಗ್ಯೂ ರೋಗ ಸೋಂಕಿತ ಈಡಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. 100ಕ್ಕೂ ಹೆಚ್ಚು ದೇಶದಲ್ಲಿ ಇದು ಸಾಂಕ್ರಾಮಿಕವಾಗಿದ್ದು, ಜಾಗತಿಕವಾಗಿ ಸುಮಾರು 400 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ.
ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಿಂದಾಗಿ ಡೆಂಗ್ಯೂ ಜ್ವರ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಾನ್ಸೂನ್ ಸಮಯದಲ್ಲಿ, ನಿಂತ ನೀರು ಮತ್ತು ಹೆಚ್ಚಿನ ಆರ್ದ್ರತೆಯು ಏಡಿಸ್ ಸೊಳ್ಳೆಗಳು ಅಭಿವೃದ್ಧಿ ಹೊಂದಲು ಸೂಕ್ತ ವಾತಾವರಣ ನಿರ್ಮಾಣವಾಗುತ್ತದೆ.
ಡೆಂಗ್ಯೂ ನರಮಂಡಲ ಸೇರಿದಂತೆ ದೇಹದ ಅನೇಕ ಭಾಗಗಳ ಮೇಲೆ ಪರಿಣಾಮ ಬೀರಬಹುದು. ನರಮಂಡಲದ ಮೇಲೆ ಪರಿಣಾಮ ಬೀರಿದಾಗ ಮೆದುಳಿನ ಜ್ವರ ಬರುತ್ತದೆ. ಇದರಿಂದ ಸ್ಮರಣೆ ಮತ್ತು ಮಾತಿನ ಮೇಲೆ ಪರಿಣಾಮ ಉಂಟಾಗುತ್ತದೆ. ಪಾರ್ಶ್ವವಾಯು ಅಥವಾ ಫಿಟ್ಸ್ ಕೂಡಾ ಸಂಭವಿಸಬಹುದು. ಕಡಿಮೆ ಪ್ಲೇಟ್‌ಲೆಟ್‌ಗಳ ಸಂಖ್ಯೆಯಿಂದಾಗಿ ಮೆದುಳಿನಲ್ಲಿ ರಕ್ತಸ್ರಾವ ಆಗಬಹುದು ಎಂದು ಬೆಂಗಳೂರಿನ ಆಸ್ಟರ್ ಆರ್.ವಿ.ಆಸ್ಪತ್ರೆಯ ವೈದ್ಯ ಶ್ರೀಕಂಠ ಸ್ವಾಮಿ ವಿವರಿಸಿದರು.
ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಾದಾಗ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದು ಮೆದುಳಿನಲ್ಲಿಯೂ ಸಂಭವಿಸಬಹುದು. ಪ್ಲೇಟ್‌ಲೆಟ್‌ಗಳು ಕಡಿಮೆಯಾದಾಗ ಮತ್ತು ರೋಗಿಯು ಡೆಂಗ್ಯೂ ಪಾಸಿಟಿವ್ ಎಂದು ದೃಢಪಟ್ಟಾಗ ನರಮಂಡಲದ ಮೇಲೆ ಸಮಸ್ಯೆಗಳು ಶುರುವಾಗುತ್ತವೆ. ಸೊಳ್ಳೆ ನಿಯಂತ್ರಣ ಮತ್ತು ಸಾರ್ವಜನಿಕ ಜಾಗೃತಿ ಮೂಲಕ ಈ ರೋಗ ತಡೆಗಟ್ಟಬಹುದು ಎಂದು ಅವರು ಹೇಳಿದರು.(ಐಎಎನ್ಎಸ್)
ಇದನ್ನೂ ಓದಿ: ಡೆಂಗ್ಯೂ ಜ್ವರ: ರೋಗ ಲಕ್ಷಣಗಳೇನು? ಮುನ್ನೆಚ್ಚರಿಕೆ ಹೇಗೆ? ಚಿಕಿತ್ಸಾ ವಿಧಾನಗಳ ಸಂಪೂರ್ಣ ಮಾಹಿತಿ