ನವದೆಹಲಿ: 2050ರ ಹೊತ್ತಿಗೆ ಮೂರನೇ ಒಂದು ಭಾಗದಷ್ಟು ಜಾಗತಿಕ ನದಿ ಜಲಾಯನಯನ ಪ್ರದೇಶದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಇದಕ್ಕೆ ಕಾರಣ ನೈಟ್ರೊಜನ್ (ಸಾರಜನಕ) ಮಾಲಿನ್ಯ ಆಗಿರಲಿದೆ ಎಂದು ನೆದರ್ಲ್ಯಾಂಡ್ ಸಂಶೋಧಕರ ತಂಡ ತಿಳಿಸಿದೆ. ಇದಕ್ಕಾಗಿ ತಂಡವು ಜಗತ್ತಿನೆಲ್ಲೆಡೆಯ 10 ಸಾವಿರ ಉಪ ಜಲಾನಯನ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದೆ. ಈ ವೇಳೆ ಕೃಷಿ ಮತ್ತು ನಗರ ವಿಸ್ತರಣೆಯು ನದಿ ನೀರಿನಲ್ಲಿನ ನೈಟ್ರೋಜನ್ ಹೆಚ್ಚಳಕ್ಕೆ ಕಾರಣವಾಗಿದೆ ಅನ್ನೋದು ಪತ್ತೆಯಾಗಿದೆ.
ಜಗತ್ತಿನ ಜನಸಂಖ್ಯೆಯ ಶೇ 80ರಷ್ಟು ಮಂದಿಯು ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಾನವ ತ್ಯಾಜ್ಯಗಳಿಂದ ನೆಟ್ರೋಜನ್ ಮಾಲಿನ್ಯಕ್ಕೆ ಶೇ 84ರಷ್ಟು ಕೊಡುಗೆಯನ್ನು ಅವರು ನೀಡುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಸಂಶೋಧಕರು ತಿಳಿಸುವಂತೆ, ಸಾರಜನಕಯುಕ್ತ ರಸಗೊಬ್ಬರ ಕೃಷಿ ನೀರು ಮತ್ತು ನಗರದಲ್ಲಿ ಹರಿಯುವ ಕೊಳಚೆ ನೀರು ಈ ಉಪಜಲಾನಯ ಪ್ರದೇಶದ ನೀರನ್ನು ಕಲುಷಿತ ಮಾಡಿದೆ. ಆದಾಗ್ಯೂ ನೈಟ್ರೋಜನ್ ಎಂಬುದು ಗಿಡ ಮತ್ತು ಪ್ರಾಣಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಈ ಮಟ್ಟ ಮೀರಿದಾಗ ನೀರಿನಲ್ಲಿ ಆಲ್ಗೆಗಳು ಬೆಳೆದು ಅವು ಪರಿಸರಕ್ಕೆ ಹಾನಿ ಮಾಡುತ್ತದೆ. ಇದು ಶುದ್ಧ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ.
2050ರ ಹೊತ್ತಿಗೆ ಉತ್ತರ ಅಮೆರಿಕ, ಯುರೋಪ್, ಭಾರತ, ಚೀನಾ, ಕೇಂದ್ರ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ನೈಟ್ರೋಜನ್ ಮಾಲಿನ್ಯದಿಂದಾಗಿ ನೀರಿನ ಕೊರತೆ ಕಾಣಬಹುದು. ಈ ನೀರಿನ ಕೊರತೆ ಕಾಡದಂತೆ ಮಾಡಲು ಇರುವ ಮಾರ್ಗ ಎಂದರೆ ನೈಟ್ರೋಜನ್ ಕಡಿಮೆ ಮಾಡುವುದಾಗಿದೆ. ರಸಗೊಬ್ಬರವನ್ನು ಬದಲಾಯಿಸಿ ಸಸ್ಯಾಹಾರದ ಆಹಾರ ಪದ್ಧತಿಗೆ ಬದಲಾಗುವ ಮೂಲಕ ನೈಟ್ರೋಜನ್ ಮಾಲಿನ್ಯ ಕಡಿಮೆ ಮಾಡಬಹುದಾಗಿದೆ.
ಅಧ್ಯಯನದಲ್ಲಿ ಲೇಖಕರು ತಿಳಿಸಿರುವಂತೆ 2050ರ ಹೊತ್ತಿಗೆ 3,061 ನದಿ ತೀರದ ಪ್ರದೇಶಗಳು ನೀರಿನ ಗುಣಮಟ್ಟ ಮತ್ತು ಪ್ರಮಾಣದ ಅಪಾಯವನ್ನು ಹೊಂದಿದೆ. ನೀರಿನ ಸಂಪನ್ಮೂಲಗಳು 3 ಬಿಲಿಯನ್ ಜನರನ್ನು ಅಪಾಯಕ್ಕೆ ಗುರಿಯಾಗಿಸಲಿದೆ. ಈ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೇ ಹೋಗಬಹುದು ಅಥವಾ ಮಾಲಿನ್ಯದ ನೀರು ಇರಬಹುದು ಎಂದು ವಿವರಿಸಿದ್ದಾರೆ.
ಈ ಅಧ್ಯಯನದ ಫಲಿತಾಂಶವು ಭವಿಷ್ಯದ ಜಲ ಸಂಪನ್ಮೂಲಗಳ ಮೌಲ್ಯಮಾಪನದಲ್ಲಿ ನೀರಿನ ಗುಣಮಟ್ಟವನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಜೊತೆಗೆ ಆಡಳಿತಗಾರರು ಒಳಚರಂಡಿ ಸಂಸ್ಕರಣೆಗೆ ಒಳಪಡಿಸುವಂತೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಖಾಲಿಯಾಗುತ್ತಿವೆ ಸರೋವರಗಳು; 200 ಕೋಟಿ ಜನರಿಗೆ ನೀರಿನ ಕೊರತೆ ಸಂಭವ