Monkeypox Symptoms: ಕೋವಿಡ್-19ನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗವು ಜಗತ್ತನ್ನು ಬೆಚ್ಚಿಬೀಳಿಸಿದೆ. ಆ ಮಹಾಮಾರಿಯೇ ಮಂಕಿಪಾಕ್ಸ್. ಆಫ್ರಿಕಾದ ಮಧ್ಯಭಾಗದಲ್ಲಿ ಹರಡಿರುವ ಮಂಗನ ಕಾಯಿಲೆ ಈಗ ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೂ ಬಂದಿದೆ. ಯುರೋಪಿಯನ್ ಖಂಡದ ಸ್ವೀಡನ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಈಗಾಗಲೇ ಮಂಗನ ಕಾಯಿಲೆಗೆ ಅಂತರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಮಂಗನ ಕಾಯಿಲೆಯು ಮೊದಲು ಎಲ್ಲಿ ಪತ್ತೆಯಾಯಿತು? ಇದರಲ್ಲಿ ಎಷ್ಟು ವಿಧ? ಈ ರೋಗ ಲಕ್ಷಣಗಳೇನು? ಇದು ಹೇಗೆ ಹರಡುತ್ತದೆ? ಎನ್ನುವ ವಿವರಗಳನ್ನು ತಿಳಿಯೋಣಬನ್ನಿ.
ಮಂಕಿಪಾಕ್ಸ್ ಎಂದರೇನು?: ಇದು ವೈರಲ್ ರೋಗ. ಇದು ಸಿಡುಬು ಕುಟುಂಬಕ್ಕೆ ಸೇರಿದೆ. ಈ ವೈರಸ್ ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹರಡುತ್ತಿದೆ. ಈ ವೈರಸ್ ಅನ್ನು ಮೊದಲು 1958 ರಲ್ಲಿ ಮಂಗಗಳಲ್ಲಿ ಪತ್ತೆ ಮಾಡಲಾಯಿತು. ಅದಕ್ಕಾಗಿಯೇ ಇದಕ್ಕೆ ಮಂಗನ ಕಾಯಿಲೆ ಎಂದು ಹೆಸರು ಬಂದಿದೆ.
ಮನುಷ್ಯನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಯಾವಾಗ?: 1970ರಲ್ಲಿ ಮೊದಲ ಬಾರಿಗೆ ಮನುಷ್ಯನದಲ್ಲಿ ಈ ರೋಗ ತಗುಲಿತ್ತು. ಇದು ಹೆಚ್ಚಾಗಿ ಉಷ್ಣವಲಯದ ಆಫ್ರಿಕನ್ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಇದರ ಪರಿಣಾಮವಾಗಿ, ಪ್ರಪಂಚದಾದ್ಯಂತದ ವಿಜ್ಞಾನಿಗಳು ಮತ್ತು ಆರೋಗ್ಯ ಇಲಾಖೆಗಳು ಇದನ್ನು ನಿರ್ಲಕ್ಷಿಸಿವೆ. ಇದರಿಂದಾಗಿ 2022ರಲ್ಲಿ ಮೊಟ್ಟಮೊದಲ ಬಾರಿಗೆ ಪ್ರಪಂಚದಾದ್ಯಂತ ಮಂಗನ ಕಾಯಿಲೆಯ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಕಂಡುಬಂದಿದ್ದವು. 2022ರಲ್ಲಿ ಭಾರತದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಈ ರೋಗವು ಪ್ರಸ್ತುತ ಆಫ್ರಿಕನ್ ದೇಶಗಳಲ್ಲಿ ಹರಡುತ್ತಿರುವುದರಿಂದ WHO ಅಂತರರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಮಂಕಿಪಾಕ್ಸ್‌ನಲ್ಲಿ ಎಷ್ಟು ವಿಧಗಳಿವೆ?: ಮಂಕಿಪಾಕ್ಸ್ ಅನ್ನು ಕ್ಲಾಡ್-1 (ಕಾಂಗೊ ಬೇಸಿನ್ ಕ್ಲೇಡ್) ಮತ್ತು ಕ್ಲಾಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿನ ಕ್ಲಾಡ್-1 ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನ್ಯುಮೋನಿಯಾ, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಉಸಿರಾಟದ ತೊಂದರೆಗಳು ಸಹ ಸಂಭವಿಸುತ್ತವೆ. ಮರಣ ಪ್ರಮಾಣವು ಶೇ 1ರಿಂದ 10ರಷ್ಟು ಆಗಿದೆ. ಕ್ಲಾಡ್-2 ಸ್ವಲ್ಪ ಕಡಿಮೆ ಅಪಾಯಕಾರಿ. ದೇಹದಲ್ಲಿ ಗುಳ್ಳೆಗಳು ಮತ್ತು ಜ್ವರದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮರಣ ಪ್ರಮಾಣವು ಶೇಕಡಾ 1ಕ್ಕಿಂತ ಕಡಿಮೆಯಿದೆ.
ಈ ರೋಗ ಹರಡುವುದು ಹೇಗೆ?: ನೇರ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮಂಗನ ಕಾಯಿಲೆ ಹರಡುತ್ತದೆ. ಬಾಯಿ ಮತ್ತು ಇತರ ಅಂಗಗಳ ಸ್ರವಿಸುವಿಕೆಯಿಂದ ಸೋಂಕಿನ ಸಾಧ್ಯತೆಯೂ ಇದೆ. ರೋಗಿಗಳು ಬಳಸಿದ ಬಟ್ಟೆ, ಇತರೆ ವಸ್ತುಗಳು, ಟ್ಯಾಟೂಗಳ ಹಾಕಿಸಿಕೊಳ್ಳುವುದರಿಂದಲು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಸೋಂಕಿತ ಪ್ರಾಣಿಗಳನ್ನು ಸ್ಪರ್ಶಿಸುವುದು ಮತ್ತು ಆ ಪ್ರಾಣಿಗಳು ಕಚ್ಚುವುದರಿಂದ ವೈರಸ್ ಮನುಷ್ಯರಿಗೆ ಹರಡುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕ್ಲಾಡ್-1 IB ರೂಪಾಂತರವು ಪ್ರಸ್ತುತ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಲೈಂಗಿಕ ಸಂಪರ್ಕದಿಂದಲೂ ಈ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂದು ತಿಳಿಸುತ್ತಾರೆ ವೈದ್ಯರು.
ಎಂಪಾಕ್ಸ್‌ನ ಲಕ್ಷಣಗಳೇನು? WHO ಪ್ರಕಾರ, ಈ ವೈರಸ್ ಮಾನವನ ದೇಹವನ್ನು ಪ್ರವೇಶಿಸಿದ ನಂತರ, 1 ರಿಂದ 21 ದಿನಗಳವರೆಗೆ ಯಾವುದೇ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಗುಳ್ಳೆಗಳು, ಜ್ವರ, ಒಣ ಗಂಟಲು, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಆಲಸ್ಯ ಸಾಮಾನ್ಯವಾಗಿದೆ. ಇದು ಸುಮಾರು 2 ರಿಂದ 4 ವಾರಗಳವರೆಗೆ ಇರುತ್ತದೆ. ಇದು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ಕೆಲವರಿಗೆ ಬಾಯಿ, ಕಣ್ಣು, ಗಂಟಲು ಮತ್ತು ಖಾಸಗಿ ಭಾಗಗಳಲ್ಲಿ ಗುಳ್ಳೆಗಳು ಬರಬಹುದು.
ಎಂಪಾಕ್ಸ್ ತಡಗಟ್ಟುವುದು ಹೇಗೆ?:
- ಎಂಪಾಕ್ಸ್ ಅಥವಾ ಮಂಕಿಪಾಕ್ಸ್‌ನಂತೆ ಕಾಣುವ ದದ್ದು ಹೊಂದಿರುವ ಜನರನ್ನು ಸಮೀಪದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ, ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಿ.
- ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ಬಟ್ಟೆಗಳು, ಹೊದಿಕೆಗಳು ಅಥವಾ ಇತರ ವಸ್ತುಗಳನ್ನು ಮುಟ್ಟಬೇಡಿ.
- ಕೈಗಳನ್ನು ಸಾಬೂನು ನೀರಿನಿಂದ ನಿಯಮಿತವಾಗಿ ತೊಳೆಯಬೇಕು.
- ಕೈ ತೊಳೆಯುವುದು ಲಭ್ಯವಿಲ್ಲದಿದ್ದರೆ, ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.
- ಅಂತಿಮವಾಗಿ, ತಜ್ಞರು ಹೇಳುವ ಪ್ರಕಾರ, ಈ ರೋಗದ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮತ್ತು ಅದರಿಂದ ಪ್ರಭಾವಿತವಾಗದಂತೆ ಕಾಲಕಾಲಕ್ಕೆ ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ.
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.