ನವದೆಹಲಿ: 100 ವರ್ಷದ ಇತಿಹಾಸ ಹೊಂದಿರುವ ಬ್ಯಾಸಿಲಸ್ ಕ್ಯಾಲ್ಮೆಟ್ ಗೆರಿನ್ (ಬಿಸಿಜಿ) ಲಸಿಕೆಯು ಮಕ್ಕಳು ಮತ್ತು ಹದಿ ವಯಸ್ಸಿನವರಲ್ಲಿ ಕ್ಷಯರೋಗ (ಟಿಬಿ) ತಡೆಯುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ಹೊಂದಿದೆ.
ಕ್ಷಯರೋಗ ಎಂಬುದು ಹಳೆಯ ರೋಗವಾಗಿದ್ದು ಮೈಕ್ರೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೊಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ರೋಗಿಯ ಸಂಪರ್ಕದಿಂದ ಮಕ್ಕಳು ಕೂಡ ಈ ಮಾರಣಾಂತಿಕ ಸೋಂಕಿಗೆ ಒಳಗಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿರುವಂತೆ ವಿಶ್ವದಾದ್ಯಂತ ಪ್ರತಿವರ್ಷ 15 ವರ್ಷದ 1 ಮಿಲಿಯನ್(10 ಲಕ್ಷ) ಮಕ್ಕಳು ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಪತ್ತೆಯಾಗುವುದೇ ಇಲ್ಲ ಎಂದು ತಿಳಿಸಿದೆ.
ಮಕ್ಕಳಲ್ಲಿ ದೀರ್ಘಕಾಲದ ಸೋಂಕಿಗೆ ಕೂಡ ಇದು ಕಾರಣವಾಗುತ್ತದೆ. ಮಕ್ಕಳಿಗೆ ಕ್ಷಯರೋಗದ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಇದು ತೀವ್ರಗೊಳ್ಳಬಹುದು. ಕೆಲವು ಮಕ್ಕಳು ನಿರಂತರ ಜ್ವರವನ್ನು ಹೊಂದಬಹುದು. ಕೆಲವು ಮಕ್ಕಳಲ್ಲಿ ರಾತ್ರಿ ಮಾತ್ರ ಜ್ವರ ಕಾಣಿಸಿಕೊಳ್ಳಬಹುದು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಥವಾ ಹದಿ ಹರೆಯದವರು ಅಂದರೆ ಪ್ರೌಢಾವಸ್ಥೆಯ ಆರಂಭದ ಮಕ್ಕಳಲ್ಲಿ ರೋಗ ನಿರೋಧಕತೆ ದುರ್ಬಲವಾಗಿರುತ್ತದೆ. ಅವರು ಟಿಬಿ ಸೋಂಕಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಫರಿದಾಬಾದ್ನ ಮರೆಂಗೊ ಏಷ್ಯಾ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಲೋಕೇಶ್ ಮಹಾಜನ್ ತಿಳಿಸಿದ್ದಾರೆ.
ಮಗು ಹುಟ್ಟಿದ ಬಳಿಕ ನೀಡುವ ಬಿಸಿಜಿ ಲಸಿಕೆಯು ಈ ಟಿಬಿ ಸೋಂಕನ್ನು ತಡೆಯುತ್ತದೆ ಎನ್ನುತ್ತಾರೆ ವೈದ್ಯರು.
ಈ ಲಸಿಕೆಯು ಎರಡು ವರ್ಷದೊಳಗಿನ ಮಕ್ಕಳಲ್ಲಿ ಗಂಭೀರ ಸಿಎನ್ಎಸ್ ಕ್ಷಯರೋಗ ಮತ್ತು ಇತರೆ ರೀತಿ ಶ್ವಾಸಕೋಶದ ಸೋಂಕು ತಡೆಯುವಲ್ಲಿ ಸಹಾಯ ಮಾಡುತ್ತದೆ. ಮಗುವಿಗೆ ಜನನ ಸಂದರ್ಭದಲ್ಲಿ ಈ ಲಸಿಕೆ ನೀಡದೇ ಹೋದಲ್ಲಿ ಮಗುವಿಗೆ ಐದು ವರ್ಷದೊಳಗೆ ಈ ಲಸಿಕೆಯನ್ನು ಕೊಡಿಸಬೇಕು ಎನ್ನುತ್ತಾರೆ ವೈದ್ಯರು.
ನಿಯೊನಾಟಲ್ ಬಿಸಿಜಿ ಲಸಿಕೆಯು ಗಂಭೀರ ಸ್ವರೂಪದ ಕ್ಷಯರೋಗದಿಂದ ಪಾರಾಗಲು ಇರುವ ಪ್ರಮುಖ ಲಸಿಕೆಯಾಗಿದೆ. ಗಂಭೀರ ಸ್ವರೂಪದ ಕ್ಷಯರೋಗವೂ ಶಿಶು ಮತ್ತು ಸಣ್ಣ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನು ಹೊಂದಿದೆ. ಈ ಲಸಿಕೆಯು ದುರ್ಬಲ ಜನರಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸಿ ಮತ್ತು ಟಿಬಿ ಹರಡುವಿಕೆ ಮತ್ತು ರೋಗದ ಅಭಿವೃದ್ಧಿ ಆಗುವುದನ್ನು ತಡೆಯುತ್ತದೆ ಎಂದು ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮತ್ತು ಪಲ್ಮನೊಲಾಜಿ ಮುಖ್ಯಸ್ಥ ಕುಲ್ದೀಪ್ ಕುಮಾರ್ ಗ್ರೋವರ್ ತಿಳಿಸಿದ್ದಾರೆ.
ಮಕ್ಕಳು ಟಿಬಿ ಸೋಂಕಿಗೆ ಒಳಗಾಗುವುದನ್ನು ತಡೆಯುವಲ್ಲಿ ಈ ಲಸಿಕೆ ಅಗತ್ಯವಾಗಿದೆ ಎಂದು ತಜ್ಞರು ಒತ್ತಿ ಹೇಳಿದ್ದಾರೆ. ಆದಾಗ್ಯೂ ಕೆಲವು ಪ್ರಕರಣಗಳಲ್ಲಿ ಮಕ್ಕಳು ಕ್ಷಯರೋಗದ ಪತ್ತೆ ಪರೀಕ್ಷೆಗೆ ಒಳಗಾಗುವುದು ಅಗತ್ಯ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಎಚ್ಚರ! ಕೆಮ್ಮಿನಂತಹ ಸಾಮಾನ್ಯ ಲಕ್ಷಣ ಇಲ್ಲದೆಯೂ ಕಾಣಿಸಿಕೊಳ್ಳುತ್ತಿದೆ ಕ್ಷಯರೋಗ