ಮೈಸೂರು: ಆರು ತಿಂಗಳ ಮಗುವಿಗೆ ಕ್ಲಿಷ್ಟಕರ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ. ನೇತ್ರ ಶಸ್ತ್ರ ಚಿಕಿತ್ಸಕರಾಗಿರುವ ದಂಪತಿ ಡಾ. ರವಿಶಂಕರ್ ಮತ್ತು ಡಾ. ಉಮಾ ರವಿಶಂಕರ್ ನೇತೃತ್ವದಲ್ಲಿ ನಗರ ಉಷಾಕಿರಣ ಕಣ್ಣಿನ ಆಸ್ಪತ್ರೆಯಲ್ಲಿ ಇತ್ತೀಚಿಗೆ ಬೀದರ್ ಜಿಲ್ಲೆಯ ಆರು ತಿಂಗಳ ಹೆಣ್ಣು ಮಗುವಿಗೆ ಅಪರೂಪದ ಮತ್ತು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಆ ಮಗುವಿಗೆ ದೃಷ್ಠಿ ದೋಷವನ್ನು ದೂರ ಮಾಡಲಾಗಿದೆ.
ಹುಟ್ಟಿನಿಂದಲೇ ಮಗುವಿಗೆ ಬಂದಿತ್ತು ಕಣ್ಣಿನ ಪೊರೆ: ಈ ಮಗು ಹುಟ್ಟಿನಿಂದಲೇ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿತ್ತು. ಮಗುವಿನ ಹೆತ್ತವರು ತೀರಾ ಬಡವರಾಗಿದ್ದರಿಂದ ಆಸ್ಪತ್ರೆಯ ವತಿಯಿಂದಲೇ, ಅವರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಇದೀಗ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿರುವ ಈ ಮಗುವಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಮೂಲಕ ದೃಷ್ಠಿದೋಷ ಸರಿಪಡಿಸಲಾಗಿದೆ.
''ಹುಟ್ಟಿನಿಂದಲೇ ಮಗುವಿಗೆ ಎರಡೂ ಕಣ್ಣುಗಳಲ್ಲಿ ಪೊರೆ ಬಂದಿತ್ತು. ಇದರಿಂದಾಗಿ ಆಕೆಯ ಕಣ್ಣುಗಳು ಬಹಳ ಚಿಕ್ಕದಾಗಿದ್ದು, ವಿರೂಪ ರಚನೆ ಹೊಂದಿದ್ದವು. ಇದರ ಜೊತೆಗೆ ಆಕೆಯ ಕಣ್ಣಿನ ಮುಂಭಾಗದ ಸಣ್ಣ ಭಾಗ (ಮೈಕ್ರೋ ಕಾರ್ನಿಯಾ) ಹಾಗೂ ಕಣ್ಣಿನ ಎಲ್ಲಾ ರಚನೆಗಳು ತುಂಬಾ ಚಿಕ್ಕದಾಗಿದ್ದವು. ಆಕೆ ಎದುರಿಸುತ್ತಿದ್ದ ಇನ್ನೊಂದು ಸಮಸ್ಯೆ ಎಂದರೆ ಆಕೆಯ ಕಣ್ಣುಗಳು ಅಲುಗಾಡುತ್ತಿದ್ದು, ಸರಿಯಾಗಿ ಕಣ್ಣಿನ ಬೆಳವಣಿಗೆ ಆಗಿರಲಿಲ್ಲ. ಇವು ತಾಂತ್ರಿಕವಾಗಿ ತುಂಬಾ ಸವಾಲಿನ ಪರಿಸ್ಥಿತಿಯನ್ನು ಶಸ್ತ್ರ ಚಿಕಿತ್ಸಕರಿಗೆ ತಂದೊಡ್ಡಿದ್ದವು. ನಮ್ಮ 35 ವರ್ಷಗಳ ಅನುಭವ ಹಾಗೂ ಇದೇ ರೀತಿಯ ಕ್ಲಿನಿಕಲ್ ಪರಿಸ್ಥಿತಿಗಳಲ್ಲಿ ಸಾವಿರಾರು ಸಂಕೀರ್ಣ ಶಸ್ತ್ರ ಚಿಕಿತ್ಸೆಗಳ ಹೊರತಾಗಿಯೂ, ಈ ಮಗುವಿನ ಶಷ್ತ್ರ ಚಿಕಿತ್ಸೆ ನಮಗೆ ಸವಾಲಿನದ್ದಾಗಿತ್ತು'' ಎಂದು ಡಾ. ರವಿಶಂಕರ್ ತಿಳಿಸಿದ್ದಾರೆ.
ಕಠಿಣ ಸವಾಲನ್ನು ಕೈಗೆತ್ತಿಕೊಂಡ ಡಾ. ರವಿಶಂಕರ್ ಹಾಗು ಡಾ. ಉಮಾ ರವಿಶಂಕರ್ ದಂಪತಿ, ಅರವಳಿಕೆ ತಜ್ಞ ಡಾ.ಮಂಜುನಾಥ್ ನೇತೃತ್ವದ ಅರವಳಿಕೆ ವೈದ್ಯರ ತಂಡ ಹಾಗೂ ಆಸ್ಪತ್ರೆಯ ಇತರ ನೇತ್ರ ಶಸ್ತ್ರ ಚಿಕಿತ್ಸಕರ ತಂಡದೊಂದಿಗೆ ಸಾಮಾನ್ಯ ಅರಿವಳಿಕೆ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿಗೆ ದೃಷ್ಠಿ ಸರಿಯಾಗುವಂತೆ ಮಾಡಿದ್ದಾರೆ.
''ಪ್ರಸ್ತುತ ಕಣ್ಣಿನ ಗಾತ್ರವು ಸಾಮಾನ್ಯಕ್ಕಿಂತ ಕಡಿಮೆ ಇರುವುದರಿಂದ ಕ್ಯಾಟರಾಕ್ಟ್ ಆಸ್ಪಿರೇಶನ್ ಮೊದಲ ಹಂತದ ಶಸಚಿಕಿತ್ಸೆಯಾಗಿದೆ. ಪ್ರಾಥಮಿಕ ಕ್ಯಾಪ್ಸುಲೋಟಮಿ ಮತ್ತು ಮುಂಭಾಗದ ವಿಟ್ರೆಕ್ಟಮಿಯನ್ನು ಬಲಗಣ್ಣಿಗೆ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇತರ ಚಿಕಿತ್ಸೆಗಳು ಮುಂದುವರಿಯಲಿವೆ'' ಎಂದು ಡಾ.ರವಿಶಂಕರ್ ಮಾಹಿತಿ ನೀಡಿದ್ದಾರೆ.
''ಮಗುವಿನ ಕುಟುಂಬ ತೀರಾ ಬಡವರಾಗಿರುವುದರಿಂದ ನಾವೇ ಅವರಿಗೆ ಶಸ್ತ್ರಚಿಕಿತ್ಸೆಯ ನಂತರ ಈಗ ಅವರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಸೇತುರಾಮ್ ಮತ್ತು ಶ್ರೀ ವಿವೇಕಾನಂದ ಸೇವಾಶ್ರಮದ ತಂಡ ನಮ್ಮ ಜೊತೆ ಕೈ ಜೋಡಿಸಿದೆ'' ಎಂದರು. ''ಮಗುವಿನ ತಾಯಿ ಕೂಡಾ ಇದೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಶಸ್ತ್ರ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು ಎಂದು ಡಾ.ರವಿಶಂಕರ್ ಅಭಯ ನೀಡಿದ್ದಾರೆ.