ಹೈದರಾಬಾದ್: ಈ ಹಿಂದಿನ ಪೀಳಿಗೆಗೆ ಹೋಲಿಸಿದಾಗ ಜೆನ್ ಜೆಡ್ ಮತ್ತು ಮಿಲೇನಿಯಂ ಅದರಲ್ಲೂ 1990ರ ಬಳಿಕ ಜನಿಸಿದವರಲ್ಲಿ ಮಾರಣಾಂತಿಕ ಕ್ಯಾನ್ಸರ್ ಅಭಿವೃದ್ಧಿ ಅಪಾಯ ಹೆಚ್ಚು. ಇವರಿಗೆ 17 ಬಗೆಯ ಕ್ಯಾನ್ಸರ್ ಅಪಾಯವಿದೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಕ್ಯಾನ್ಸರ್ ಅಭಿವೃದ್ಧಿಗೆ ಸ್ಥೂಲಕಾಯ, ಆಹಾರ ಅಭ್ಯಾಸ ಮತ್ತು ಪರಿಸರದಲ್ಲಿನ ವಿಷಕಾರಿ ಅಂಶಗಳು ಪ್ರಮುಖ ಕೊಡುಗೆೆ ನೀಡುತ್ತಿವೆ.
ಈ ಸಂಬಂಧ 2019ರಲ್ಲಿ ನಡೆಸಿದ ಸಂಶೋಧನೆಯಲ್ಲಿ ಹೊಸ ಪೀಳಿಗೆ ಜನರಲ್ಲಿ 8 ಬಗೆಯ ಸಾಮಾನ್ಯ ಕ್ಯಾನ್ಸರ್ ಅಪಾಯ ಹೆಚ್ಚಿದೆ ಎಂದು ತಿಳಿದು ಬಂದಿತ್ತು. ಆದಾಗ್ಯೂ, ಯಾವುದೇ ಅಧ್ಯಯನಗಳು ಹೊಸ ಪ್ರಕರಣಗಳು ಮತ್ತು ಕ್ಯಾನ್ಸರ್ ಸಾವಿನ ಕುರಿತು ಅಧ್ಯಯನ ನಡೆಸಿರಲಿಲ್ಲ. ಈ ಅಂತರವನ್ನು ಇದೀಗ ಹೊಸ ಸಂಶೋಧನೆ ಹೋಗಲಾಡಿಸಿದೆ. ಅಲ್ಲದೇ ಹೊಸ ಪೀಳಿಗೆಯ ಜನತೆ ಕ್ಯಾನ್ಸರ್ನ ಹೆಚ್ಚಿನ ಅಪಾಯಕ್ಕೆ ಗುರಿಯಾಗಲು ಕಾರಣ, ಬಾಲ್ಯದಲ್ಲಿ ಕಾರ್ಸಿನೊಜೆನಿಕ್ ಅಂಶಕ್ಕೆ ತೆರೆದುಕೊಳ್ಳುವಿಕೆ ಎಂಬುದನ್ನು ಪತ್ತೆ ಹಚ್ಚಿದೆ. ಇದು 50 ವರ್ಷ ಮೇಲ್ಪಟ್ಟವರು ಮತ್ತು ಯುವ ಜನತೆಯಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಲು ಕಾರಣ ಎಂದು ತಿಳಿಸಿದೆ.
ಅದರಲ್ಲೂ ಕೆಲವು ಕ್ಯಾನ್ಸರ್ಗಳು ಸಾಮಾನ್ಯವಾಗಿದ್ದು, ಇವುಗಳ ಬಗ್ಗೆ ಚಿಂತಿಸಲೇಬೇಕಿದೆ. ವಿಶೇಷವಾಗಿ ಕರುಳಿನ ಕ್ಯಾನ್ಸರ್, ಕೊಲೊರೆಕ್ಟಮ್, ಗರ್ಭಾಶಯದ ಕಾರ್ಪಸ್, ಪಿತ್ತಕೋಶ, ಮೂತ್ರಪಿಂಡ, ಮೇದೋಜಿರಕ ಗ್ರಂಥಿ, ಮೈಲೋಮಾ, ನಾನ್‌ಕಾರ್ಡಿಯಾ ಗ್ಯಾಸ್ಟ್ರಿಕ್, ಹೊಟ್ಟೆಯ ಕ್ಯಾನ್ಸರ್, ಲ್ಯುಕೇಮಿಯಾ, ಟೆಸ್ಟಿಸ್, ಕಾರ್ಡಿಯಾ ಗ್ಯಾಸ್ಟ್ರಿಕ್, ಒಂದು ರೀತಿಯ ಹೊಟ್ಟೆ ಕ್ಯಾನ್ಸರ್, ಸಣ್ಣ ಕರುಳು, ಸ್ತನ, ಅಂಡಾಶಯ, ಯಕೃತ್ತು, ಕ್ಯಾನ್ಸರ್ ಅಪಾಯ ಜಾಸ್ತಿ. ಎಂಡೋಮೆಟ್ರಿಯಂ, ಗಾಲ್ ಬ್ಲಾಡರ್, ಟೆಸ್ಟಿಕಲ್ಸ್, ಕೊಲೊನ್, ಲಿವರ್ನಂತಹ ಕ್ಯಾನ್ಸರ್ಗಳು ಸಾವಿನ ಪ್ರಮಾಣ ಏರಿಸಿವೆ.
ಹೊಸ ಪೀಳಿಗೆಯ ಜನರಲ್ಲೇ ಹೆಚ್ಚು: ವಿವಿಧ ಪೀಳಿಗೆಯ ಜನರಲ್ಲಿ ಸಾವಿನ ದರ ಹೆಚ್ಚಿಸುತ್ತಿರುವ ಕ್ಯಾನ್ಸರ್ ಕುರಿತು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಟಿಸಿದೆ. ಎಲ್ಲಾ ಕ್ಯಾನ್ಸರ್ ವಿಧಗಳಲ್ಲಿ ಇದಕ್ಕೆ ತುತ್ತಾಗುವ ಅಪಾಯವನ್ನು 1990-1995 ನಂತರದ ಜನಿಸಿದವರು ಹೆಚ್ಚು ಹೊಂದಿದ್ದಾರೆ. ಇದರಲ್ಲಿ ಮಿಲೆನಿಯಂ ಮತ್ತು ಜೆನ್ ಜೆಡ್ (1980-2012) ಜನರಲ್ಲಿ 17 ಬಗೆಯ ಕ್ಯಾನ್ಸರ್ಗಳು ಸಾಮಾನ್ಯವಾಗಿದೆ ಎಂದು ತಿಳಿಸಲಾಗಿದೆ.
ಈ ಅಧ್ಯಯನ ಸಂಬಂಧ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಮತ್ತು ಕೆನಡಾದ ಯುನಿವರ್ಸಿಟಿ ಆಫ್ ಕಾಲ್ಗೆರಿ ಸಂಶೋಧಕರು 34 ಬಗೆಯ ಕ್ಯಾನ್ಸರ್ ಹೊಂದಿದ 23 ಮಿಲಿಯನ್ ರೋಗಿಗಳ ಪತ್ತೆ ಮಾಡಿ ಅಧ್ಯಯನ ನಡೆಸಿದ್ದಾರೆ. ಜೊತೆಗೆ, 25 ಬಗೆಯ ಕ್ಯಾನ್ಸರ್ನಿಂದ ಸಾವನ್ನಪ್ಪಿದ 7 ಮಿಲಿಯನ್ ಜನರ ದತ್ತಾಂಶವನ್ನು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಪ್ರತಿ 9ರಲ್ಲಿ ಒಬ್ಬರಿಗೆ ತಡೆಗಟ್ಟಬಹುದಾದ ಕ್ಯಾನ್ಸರ್ ಅಪಾಯ: ತಜ್ಞರು