ಕನ್ನಡದ ವರನಟ ಡಾ.ರಾಜ್‌ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಯುವ' ಇಂದು ಬಿಡುಗಡೆಯಾಗಿದೆ. ಈ ಮೂಲಕ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ರಾಜ್ಯದ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಯುವ' ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸಿನಿಮಾದ ಮೊದಲಾರ್ಧ ಯುವ ರಾಜ್‌ಕುಮಾರ್ ಕಾಲೇಜು ಹುಡುಗನಾಗಿ ನಟಿಸಿದ್ದಾರೆ. ಎರಡನೇ ಭಾಗದಲ್ಲಿ ಡೆಲಿವರಿ ಬಾಯ್ ಪಾತ್ರ ಮಾಡಿದ್ದಾರೆ. 'ಯುವ' ಬಿಡುಗಡೆಗೆ ಕಾದು ಕುಳಿತಿದ್ದ ಅಭಿಮಾನಿಗಳು ಥಿಯೇಟರ್ಗಳೆದುರು ಕುಣಿದು ಸಂಭ್ರಮಿಸಿದರು.
ಚಿತ್ರಮಂದಿರಗಳ ಹೊರಗಡೆ ಬೃಹತ್ ಕಟೌಟ್ ಜತೆಗೆ ಪುನೀತ್ ರಾಜ್ ಕುಮಾರ್ ಕಟೌಟ್ ಅನ್ನೂ ನಿಲ್ಲಿಸಿ ಹೂವಿನ ಹಾರ ಹಾಕಲಾಗಿದೆ. ಅಭಿಮಾನಿಗಳು ನಟ ಯುವನಿಗೆ ಅಪ್ಪು ಅವರಿಗೆ ಕೊಟ್ಟಷ್ಟೇ ಪ್ರೀತಿ, ಬೆಂಬಲ ನೀಡುತ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದರು.
'ಕಾಂತಾರ' ನಟಿ ಸಪ್ತಮಿ ಗೌಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಇದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. 153 ನಿಮಿಷ ಕಾಲಾವಧಿಯ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ ಅದ್ಧೂರಿಯಾಗಿ ನಿರ್ಮಿಸಿದೆ.
ಇದನ್ನೂ ಓದಿ: ರಗಡ್ ಯಂಗ್ ಹೀರೋಗಳ ಖಾಲಿತನ 'ಯುವ' ನೀಗಿಸ್ತಾರೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ - Yuva Film