ಬೆಂಗಳೂರು: 'ದೇಶದ ಮೇಲೆ, ನಾಡಿನ ಮೇಲೆ, ರಾಜ್ಯದ ಮೇಲೆ ಪ್ರೀತಿ ಇರುವವರು ವೋಟ್ ಮಾಡ್ತಾರೆ. ಎಷ್ಟೇ ಅರಿವು ಮೂಡಿಸಿದ್ರೂ ಕೂಡ ವೋಟ್ ಹಾಕೋದಕ್ಕೆ ಬರಲ್ಲ ಎಂದರೆ ಏನೂ ಮಾಡಲು ಆಗಲ್ಲ' ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಕನ್ನಡ ಚಿತ್ರರಂಗದವರು ಆಗಮಿಸಿ ತಮ್ಮ ಮತ ಹಾಕುತ್ತಿದ್ದಾರೆ. ಪುಟ್ಟೇನಹಳ್ಳಿಯ ಆಕ್ಸ್‌ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ಕಿಚ್ಚ ಮತದಾನ ಮಾಡಿದ್ದಾರೆ.
ವೋಟ್ ಹಾಕಿದವ್ರಿಗೆ ಒಳ್ಳೆಯದಾಗುತ್ತಿದೆ. ಜವಾಬ್ದಾರಿ ಇರುವವರು ಬಂದು ಮತ ಹಾಕುತ್ತಾರೆ. ಯಾರು ಮತ ಚಲಾಯಿಸುವುದಿಲ್ಲವೋ ಅವರ ಬಗ್ಗೆ ತಲೆ ಕೆಡಿಸಿಕೊಳ್ಳೋದನ್ನು ಬಿಟ್ಟು, ವೋಟ್ ಹಾಕೋರ ಬಗ್ಗೆ ಯೋಚನೆ ಮಾಡೋಣ ಎಂದು ತಿಳಿಸಿದರು. ಮತ ಚಲಾಯಿಸಲು ಬಂದ ಸುದೀಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ದರ್ಶನ್, ಶರಣ್, ವಿಜಯ್ ರಾಘವೇಂದ್ರ, ಮತದಾನ: ಆರ್.ಆರ್ ನಗರದ ಮೌಂಟ್ ಕಾರ್ಮಲ್ನ ಮತಗಟ್ಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತದಾನ ಮಾಡಿದರು. ನಾಗರಬಾವಿ ಕೆಎಲ್ಇ ಕಾಲೇಜಿನ ಮತಗಟ್ಟೆಯಲ್ಲಿ ನಟ ಶರಣ್ ವೋಟಿಂಗ್ ಮಾಡಿದ್ದಾರೆ. ಜಕ್ಕೂರಿನ ಮತಕೇಂದ್ರದಲ್ಲಿ ನಟ ವಿಜಯ್ ರಾಘವೇಂದ್ರ ತಮ್ಮ ಹಕ್ಕು ಚಲಾಯಿಸಿದರು.
ಇದನ್ನೂ ಓದಿ: ರವಿಚಂದ್ರನ್, ಉಪ್ಪಿ, ಡಾಲಿ, ರಕ್ಷಿತಾ ಸೇರಿ ಸೆಲೆಬ್ರಿಟಿಗಳಿಂದ ಮತದಾನ: ವಿಡಿಯೋ ನೋಡಿ - kannada Stars Voting
ಯಶ್ ವೋಟಿಂಗ್: ಮತ ಚಲಾಯಿಸಿದ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ''ಮತ ಹಾಕೋದು ನಮ್ಮೆಲ್ಲರ ಕರ್ತವ್ಯ. ಅದು ನಮ್ಮ ಹಕ್ಕು. ದೇಶಕ್ಕಾಗಿ ಮತ ಚಲಾಯಿಸಬೇಕು. ನಿಮ್ಮ ನಿರ್ಧಾರಗಳಿಂದ ಕಲಿಯೋದಕ್ಕೆ ಬಹಳ ಅವಕಾಶ ಸಿಗಲಿದೆ. ವೋಟಿಂಗ್ ಒಳ್ಳೆಯದು. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯ ಮುಖ್ಯ. ಸಮಯ ಕಳೆದಂತೆ ಮತದಾನ ಹೆಚ್ಚಾಗಬಹುದು. ಸರ್ಕಾರ ಮಾಡುವ ಕೆಲಸ ಸರ್ಕಾರ, ಜನರ ಕೆಲಸ ಜನರಿಗೆ ಮಾಡೋಕೆ ಬಿಡಬೇಕು. ಅಭಿವೃದ್ಧಿ ಅನ್ನೋದು ಮುಖ್ಯ. ಅನೇಕ ಇಲಾಖೆಗಳಲ್ಲಿ ವಿಚಾರಗಳು ಇಷ್ಟ ಅಗಿವೆ. ಕೆಲವು ಇಷ್ಟ ಆಗದೇ ಇರಬಹುದು. ದೇಶಕ್ಕೆ ಈಗ ಒಳ್ಳೆಯ ಅವಕಾಶ ಇದೆ. ಒಳ್ಳೆಯ ಸಮಯ. ಜಗತ್ತಿನಲ್ಲಿ ದೇಶ ಉತ್ತಮ ಸ್ಥಾನದಲ್ಲಿದೆ. ಇದನ್ನು ಉಪಯೋಗಿಸಿಕೊಂಡು ಮುಂದೆ ಹೋಗಬೇಕು'' ಎಂದು ತಿಳಿಸಿದರು.