ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ, ಯಥರ್ವ್ ಜೊತೆ ಭಟ್ಕಳದಲ್ಲಿರುವ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಯಶ್ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಕ್ಯಾಂಡಿ-ಚಾಕೋಲೇಟ್ ಖರೀದಿ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಿವೆ.
ಕೆಜಿಎಫ್ ಸ್ಟಾರ್ ಯಶ್ ಅವರು ಸ್ಥಳೀಯ ಕಿರಾಣಿ ಅಂಗಡಿಯ ಹೊರಗೆ ನಿಂತು ಪತ್ನಿ ರಾಧಿಕಾಗಾಗಿ ಐಸ್ ಕ್ಯಾಂಡಿ ಖರೀದಿಸುತ್ತಿರುವ ಫೋಟೋ ಮತ್ತು ಅಭಿಮಾನಿಗಳ ಜೊತೆ ಇರುವ ಫೋಟೋ ವೈರಲ್ ಆಗಿವೆ. ಸೋಷಿಯಲ್ ಮೀಡಿಯಾ ಬಳಕೆದಾರರು ನಟನ ಡೌನ್ ಟು ಅರ್ತ್ ವರ್ತನೆಯಿಂದ ಪ್ರಭಾವಿತರಾಗಿದ್ದಾರೆ. ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಸೂಪರ್ ಸ್ಟಾರ್ ಎಂದು ಹೆಸರುವಾಸಿಯಾಗಿದ್ದರೂ ಕೂಡ ನಟನ ವಿನಮ್ರ ಸ್ವಭಾವಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಅವರ ಮುಂದಿನ ಸಿನಿಮಾ ಯಶ್ 19 ಎಂದು ಟ್ರೆಂಡ್ ಆಗಿರೋದು ನಿಮಗೆ ತಿಳಿದೇ ಇದೆ. 2023ರ ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಬಿಜಿಎಸ್ ಉತ್ಸವ್ ಕಾರ್ಯಕ್ರಮದಲ್ಲಿ, ಯಶ್ ಅವರು ತಮ್ಮ ಮುಂಬರುವ ಚಿತ್ರಕ್ಕೆ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಗುಣಮಟ್ಟದ ಚಿತ್ರವನ್ನು ನೀಡುವ ಬಗ್ಗೆ ಅವರು ಒತ್ತಿಹೇಳಿದ್ದರು. ಪ್ರತಿಯೊಬ್ಬರ ನಿರೀಕ್ಷೆಗಳನ್ನು ಖಂಡಿತವಾಗಿ ಪೂರೈಸುತ್ತೇವೆ. ತೃಪ್ತಿದಾಯಕ ಸಿನಿಮೀಯ ಅನುಭವಕ್ಕಾಗಿ ತಾಳ್ಮೆಯಿಂದಿರುವಂತೆ ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಕೇಳಿಕೊಂಡಿದ್ದರು.
ಇದನ್ನೂ ಓದಿ: 'ಟಾಕ್ಸಿಕ್' ಸಿನಿಮಾದಲ್ಲಿ ಶಾರುಖ್ ಖಾನ್? 'ಅಧಿಕೃತ ಮಾಹಿತಿ ನಂಬಿ' ಎಂದು ಯಶ್ ಸಲಹೆ
ರಾಕಿಂಗ್ ಸ್ಟಾರ್ ಜನಪ್ರಿಯತೆಯ ಯಶ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್'. ಗೀತು ಮೋಹನ್‌ದಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಚಿತ್ರ ಮಾಸ್ ಆ್ಯಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಆಗಿದ್ದು, ಗೋವಾ ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ಕಥೆ ನಿರ್ಮಾಣವಾಗಿದೆ. ಕರೀನಾ ಕಪೂರ್ ಖಾನ್ ಮತ್ತು ಶಾರುಖ್ ಖಾನ್ ಅವರನ್ನು ಚಿತ್ರದಲ್ಲಿ ಮಹತ್ವದ ಪಾತ್ರಗಳಿಗಾಗಿ ಸಂಪರ್ಕಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಅದಾಗ್ಯೂ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದ ಯಶ್, ಅಧಿಕೃತ ಮಾಹಿತಿಯನ್ನು ಮಾತ್ರ ಅವಲಂಬಿಸಿ ಎಂದು ಅಭಿಮಾನಿಗಳಲ್ಲಿ ತಿಳಿಸಿದ್ದರು. ಜೊತೆಗೆ ಚಿತ್ರದ ಬಗ್ಗೆ ಶೀಘ್ರವೇ ಅಪ್ಡೇಟ್ಸ್ ಕೊಡುವುದಾಗಿಯೂ ಭರವಸೆ ನೀಡಿದ್ದರು.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳ ಸಂಭ್ರಮ; ಪ್ರಯಾಣ ಪ್ರತಿನಿಧಿಸುವ 'ಎಐ' ಫೋಟೋ ಶೇರ್