ಸ್ಕ್ರೀನ್ ಐಕಾನ್ ರಜನಿಕಾಂತ್ ತಮ್ಮ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು, ಕೋಟ್ಯಂತರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಟಿ.ಜೆ ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ಸಿನಿಮಾ 'ಕೂಲಿ'ಯನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳಲಿದ್ದು, ರಜನಿ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರಿಕ್ಷೆಗಳಿವೆ. ತಮ್ಮ ಹೊಸ ಚಿತ್ರವನ್ನು ಆರಂಭಿಸೋ ಮುನ್ನ ಹೆಸರಾಂತ ನಟ ಹಿಮಾಲಯಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ಆಧ್ಯಾತ್ಮಿಕ ಪ್ರವಾಸ ಕೈಗೊಂಡ ಸೂಪರ್ ಸ್ಟಾರ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಕೇದಾರನಾಥದಂತಹ ಪವಿತ್ರ ಕ್ಷೇತ್ರಗಳಿಗೂ ಭೇಟಿ ಕೊಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರಜನಿ, "ಪ್ರತೀ ವರ್ಷ ನಾನು ಹಿಮಾಲಯಕ್ಕೆ ಹೋಗುತ್ತೇನೆ. ಕೇದಾರನಾಥ ಮತ್ತು ಬದ್ರಿನಾಥ್ದಂತಹ ಆಧ್ಯಾತ್ಮಿಕ ಸ್ಥಳಗಳಿಗೂ ಭೇಟಿ ನೀಡಲಿದ್ದೇನೆ" ಎಂದು ತಿಳಿಸಿದರು. ಇನ್ನು ವೆಟ್ಟೈಯಾನ್ ಚಿತ್ರದ ಬಗ್ಗೆಯೂ ತಮ್ಮ ತೃಪ್ತಿ ವ್ಯಕ್ತಪಡಿಸಿದ್ದಾರೆ. "ವೆಟ್ಟೈಯಾನ್ ಚಿತ್ರ ಚೆನ್ನಾಗಿ ಮೂಡಿ ಬಂದಿದೆ" ಎಂದು ಇದೇ ವೇಳೆ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವ ಸಾಧ್ಯತೆಗಳ ಕುರಿತು ನಟನ ಆಲೋಚನೆಗಳ ಬಗ್ಗೆ ಪ್ರಶ್ನಿಸಲಾಯಿತು. ರಜನಿಕಾಂತ್, "ಕ್ಷಮಿಸಿ, ರಾಜಕೀಯ ಪ್ರಶ್ನೆಗಳು ಬೇಡ" ಎಂದು ನಯವಾಗಿ ಪ್ರಶ್ನೆಯನ್ನು ನಿರಾಕರಿಸಿದರು. ಇದೇ ವೇಳೆ, ಸಂಗೀತ ಮತ್ತು ಸಾಹಿತ್ಯದ ಪ್ರಾಮುಖ್ಯತೆಯ ಕುರಿತು ತಮಿಳು ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರಶ್ನಿಸಿದಾಗ, "ನೋ ಕಾಮೆಂಟ್ಸ್" ಎಂದು ತಿಳಿಸಿದರು.
ಇದನ್ನೂ ಓದಿ: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು: ವಿಡಿಯೋ ನೋಡಿ - Pooja to Ambareesh Tomb
ಕೂಲಿ ಟೈಟಲ್ ಟೀಸರ್‌ಗೆ ಇಳಯರಾಜ ಅವರ ಕಾಪಿರೈಟ್ ನೋಟಿಸ್ ಸೇರಿದಂತೆ ಸಿನಿವಲಯ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ರಜನಿಕಾಂತ್ ಜಾಣ್ಮೆಯಿಂದ, ನಾಜೂಕಾಗಿ ಬದಿಗೊತ್ತಿದ್ದಾರೆ. ಮೇ. 28ರಂದು ಅಬುಧಾಬಿಯಿಂದ ಹಿಂದಿರುಗಿದ ಒಂದು ದಿನದ ನಂತರ, ನಟ ಹಿಮಾಲಯ ತೀರ್ಥಯಾತ್ರೆಯನ್ನು ಕೈಗೊಂಡಿದ್ದಾರೆ.
ರಜನಿಕಾಂತ್, ಮಹಾವತಾರ್ ಬಾಬಾಜಿ ಗುಹೆಗೂ ಭೇಟಿ ನೀಡಲಿದ್ದಾರೆ. ಈ ಹಿಂದೆ ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ನಟನ ಕೊನೆಯ ಚಿತ್ರ ಜೈಲರ್ ಬಿಡುಗಡೆ ಸಂದರ್ಭ ಅವರು ಕೊನೆಯ ಬಾರಿಗೆ ಈ ಗುಹೆಗೆ ಭೇಟಿ ಕೊಟ್ಟಿದ್ದರು. ಸದ್ಯದ ಹಿಮಾಲಯ ಪ್ರವಾಸ ಒಂದು ವಾರದವರೆಗೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ನಂತರ ಚೆನ್ನೈಗೆ ಹಿಂತಿರುಗಿ ಕೂಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.