ಕಂಗನಾ ರಣಾವತ್ ಬಾಲಿವುಡ್ನಲ್ಲಿ ಹೆಸರು ಮಾಡಿರುವ ಅಭಿನೇತ್ರಿ. ತಮ್ಮ ನಟನಾ ಸಾಮರ್ಥ್ಯದಿಂದ ಜನಮನ ಮೆಚ್ಚಿಸುವ ಜೊತೆಗೆ, ಪ್ರತಿಷ್ಟಿತ ರಾಷ್ಟ್ರ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಹಲವು ಯಶಸ್ವಿ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಇದರ ಜೊತೆಗೆ ಬೋಲ್ಡ್ ಹೇಳಿಕೆಗಳಿಗೂ ಇವರು ಹೆಸರುವಾಸಿ. ಕಂಗನಾ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ, ಬಿಜೆಪಿ ಸೇರುತ್ತಾರೆ ಎಂಬೆಲ್ಲ ಮಾತುಗಳು ಬಹಳ ಸಮಯಗಳಿಂದಲೂ ಕೇಳಿ ಬರುತ್ತಿವೆ. ಹೀಗಿದ್ದರೂ ನಟಿಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಷ್ಟ್ರಸೇವೆಗೆ ರಾಜಕೀಯೇತರ ಸ್ಥಾನಮಾನ ಅಡ್ಡಿಯಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ನಟಿ ಬಿಜೆಪಿಯೊಂದಿಗೆ ಕೈ ಜೋಡಿಸಲಿದ್ದಾರೆ ಎಂಬ ಊಹಾಪೋಹಗಳ ಹೊರತಾಗಿಯೂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, "ನೀವು ರಾಜಕೀಯಕ್ಕೆ ಬರುವಿರಾ" ಎಂಬ ಪ್ರಶ್ನೆ ನಟಿಗೆ ಎದುರಾಯಿತು. ಇದಕ್ಕೆ ನಗುನಗುತ್ತಲೇ ಉತ್ತರಿಸುತ್ತಾ, "ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಯೇ ಅಥವಾ ಇಲ್ಲವೇ ಎಂಬುದನ್ನು ಘೋಷಿಸಲು ಇದು ಸೂಕ್ತ ಸ್ಥಳವಲ್ಲ. ನನಗಿರುವ ಸ್ಥಾನಮಾನದಿಂದ ದೇಶಕ್ಕೆ ಬಹಳಷ್ಟು ಸೇವೆ ಸಲ್ಲಿಸಿದ್ದೇನೆ" ಎಂದು ತಿಳಿಸಿದರು.
"ನಾನು ನಿಷ್ಠಾವಂತ ರಾಷ್ಟ್ರೀಯತಾವಾದಿಯಾಗಿ ಗುರುತಿಸಿಕೊಂಡಿದ್ದೇನೆ. ನನ್ನ ದೇಶಭಕ್ತಿಯ ಧ್ವನಿ ನನಗೆ ಒಂದು ಗುರುತು ಕೊಟ್ಟಿದೆ. ನಟನಾ ವೃತ್ತಿಜೀವನಕ್ಕಿಂತ ಹೆಚ್ಚು ಸಾರ್ವಜನಿಕ ವ್ಯಕ್ತಿತ್ವ ಸದ್ದು ಮಾಡಿದೆ" ಎಂದರು.
ಇದೇ ಸಂದರ್ಭದಲ್ಲಿ ದೇಶಾದ್ಯಂತ ತನ್ನನ್ನು ಬೆಂಬಲಿಸಿದ ಜನರ ಪ್ರೀತಿಗಾಗಿ ಕೃತಜ್ಞತೆ ತಿಳಿಸಿದರು. ತಮ್ಮ ಯಶಸ್ಸಿಗೆ ದೇಶ ತೋರಿಸಿದ ಪ್ರೀತಿ, ಬೆಂಬಲವೇ ಕಾರಣ ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರಿ ಗೌರವದೊಂದಿಗೆ ಗಜಲ್ ಮಾಂತ್ರಿಕ ಪಂಕಜ್ ಉಧಾಸ್ ಅಂತ್ಯಸಂಸ್ಕಾರ
ಕಂಗನಾ ರಣಾವತ್ ಕೊನೆಯದಾಗಿ 'ತೇಜಸ್' ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಕೊನೆಯ ಕೆಲವು ಚಿತ್ರಗಳು ಕೊಂಚ ಹಿನ್ನಡೆ ಕಂಡಿವೆ. ಇದೀಗ ತಾವೇ ನಿರ್ದೇಶಿಸಿ, ನಿರ್ಮಿಸಿ ನಟಿಸಿರುವ 'ಎಮರ್ಜೆನ್ಸಿ' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯಾಧಾರಿತ ಚಿತ್ರ ಇದಾಗಿದ್ದು, ಜೂನ್ 14ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಇದರ ಜೊತೆಗೆ, ಆರ್.ಮಾಧವನ್ ಜೊತೆಗಿನ ಚಿತ್ರವೊಂದರ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ. 'ಕ್ವೀನ್'ಸೀಕ್ವೆಲ್ ಕೂಡ ಬರಲಿದೆ. ನಟಿಯ ಯಶಸ್ವಿ ಚಿತ್ರ 'ಕ್ವೀನ್'ನ ಪಾರ್ಟ್ 2 ಬರಲಿದೆ ಎಂಬುದನ್ನು ನಿರ್ದೇಶಕ ವಿಕಾಸ್ ಬಹ್ಲ್ ಈಗಾಗಲೇ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಪ್ರೇಕ್ಷಕರನ್ನು ತಲುಪೋ ಪ್ರಯತ್ನದಲ್ಲಿ 'ರವಿಕೆ ಪ್ರಸಂಗ' ಚಿತ್ರತಂಡ