ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಫೈನಲಿ ಇಂದು ಮುಂಜಾನೆ ವಿಶ್ವದಾದ್ಯಂತದ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೂ ಕೆಲ ಗಂಟೆಗಳ ಮೊದಲು ಹೈದರಾಬಾದ್‌ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಿತು. ಇಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಸೇರಿ ಪುಷ್ಪಾ 2 ತಂಡ ಭಾಗಿಯಾಗಿತ್ತು. ಅಲ್ಲು ಅರ್ಜುನ್ ಅವರ ಪತ್ನಿ ಕೂಡಾ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅಲ್ಲು ಅರ್ಜುನ್ಗೆ ಶುಭಾಶಯಗಳ ಸುರಿಮಳೆ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ, ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ ಹೊರಗೆ ತಮ್ಮ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಶರ್ಟ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಬೂದು ಬಣ್ಣದ ಜಾಕೆಟ್ ಧರಿಸಿ ಸಕತ್ ಹ್ಯಾಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಧರಿಸಿರುವ ಈ ಉಡುಪನ್ನು ವಿಜಯ್ ದೇವರಕೊಂಡ ಉಡುಗೊರೆಯಾಗಿ ನೀಡಿದ್ದರು. ವೇದಿಕೆ ಪ್ರವೇಶಿಸಿದ ಕೂಡಲೇ ಸೌತ್ ಸೂಪರ್ಗೆ ಫ್ಯಾನ್ಸ್ ಶುಭಾಶಯ ಕೋರಿದರು.
ಚಿತ್ರಮಂದಿರದ ಒಳಗಿನ ವಿಡಿಯೋಗಳು ವೈರಲ್: ಚಿತ್ರಮಂದಿರದ ಒಳಗಿನ ಕೆಲ ವಿಡಿಯೋಗಳು ಅಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ, ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಅಭಿಮಾನಿಯೊಂದಿಗೆ ಮಾತನಾಡುವುದನ್ನು ಕಾಣಬಹುದು. ಸಿನಿಮಾ ವೀಕ್ಷಿಸಿದ ನಂತರ, ಸೂಪರ್ ಸ್ಟಾರ್ ಥಿಯೇಟರ್‌ನಿಂದ ಹೊರಬರುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ಆಂಧ್ರಪ್ರದೇಶ, ತೆಲಂಗಾಣದ ಆಯ್ದ ಚಿತ್ರಮಂದಿರಗಳಲ್ಲಿ ಪುಷ್ಪ 2: ದಿ ರೂಲ್‌ನ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರ ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಹಲವು ಭಾಷೆಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲೇ 100 ಕೋಟಿ ದಾಟಿದ 'ಪುಷ್ಪ 2': ಮೊದಲ ದಿನವೇ 275 ಕೋಟಿ ಗಳಿಸುವ ಸಾಧ್ಯತೆ
ಪುಷ್ಪ ಸೀಕ್ವೆಲ್ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಚಿತ್ರಮಂದಿರದ ಹೊರಗೆ ಕಾಲ್ತುಳಿತ ಸಂಭವಿಸಿದೆ. ಪರಿಣಾಮ, ಮಹಿಳೆ ಮತ್ತು ಅವರ ಇಬ್ಬರು ಪುತ್ರರು ಈ ಕಾಲ್ತುಳಿತಕ್ಕೆ ಸಿಲುಕಿದರು. ಈ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿ ಸಾವನ್ನಪ್ಪಿದ್ದು, ಗಾಯಗೊಂಡ ಇಬ್ಬರು ಪುತ್ರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 10:30ಕ್ಕೆ ಸಂಧ್ಯಾ ಥಿಯೇಟರ್‌ಗೆ ಬಂದ ನಟ: ಬುಧವಾರ ರಾತ್ರಿ ಪುಷ್ಪ 2ರ ಪ್ರೀಮಿಯರ್ ಸ್ಕ್ರೀನಿಂಗ್ ನಡೆಯಿತು. ನಾಯಕ ನಟ ಅಲ್ಲು ಅರ್ಜುನ್ ರಾತ್ರಿ 10.30ರ ಸುಮಾರಿಗೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ಆಗಮಿಸಿದರು. ಮೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿತ್ತು. ಆರ್‌ಟಿಸಿಎಕ್ಸ್ ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನ ಹೊರಗೆ ಸೇರಿದ್ದ ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ ಕಾಲ್ತುಳಿತ ಸಂಭವಿಸಿತು. ಪರಿಣಾಮ ಹಲವರು ಗಾಯಗೊಂಡರು. ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 'ಪುಷ್ಪ 2'ನಲ್ಲಿ ಅರ್ಧ ತಲೆಬೋಳಿಸಿದ ಈ ವ್ಯಕ್ತಿ ಯಾರು? ಸಂಚಲನ ಸೃಷ್ಟಿಸಿದ ಕನ್ನಡ ನಟ ತಾರಕ್ ಪೊನ್ನಪ್ಪ ಹೇಳಿದ್ದಿಷ್ಟು