ನವದೆಹಲಿ: ಕಾಶ್ಮೀರ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಆಕ್ಸ್ ಫರ್ಡ್ ಯೂನಿಯನ್ ನೀಡಿದ್ದ ಆಹ್ವಾನವನ್ನು ತಾವು ತಿರಸ್ಕರಿಸಿರುವುದಾಗಿ ಚಲನಚಿತ್ರ ನಿರ್ಮಾಪಕ ಹಾಗೂ ಲೇಖಕ ವಿವೇಕ್ ಅಗ್ನಿಹೋತ್ರಿ ಗುರುವಾರ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಆಹ್ವಾನ ಪತ್ರಿಕೆ ಮತ್ತು ಆಹ್ವಾನ ತಿರಸ್ಕರಿಸಿರುವ ಬಗ್ಗೆ ತಿಳಿಸಿದ್ದಾರೆ. ಪತ್ರಗಳನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ.
"ಕಾಶ್ಮೀರದ ಬಗ್ಗೆ ಚರ್ಚಿಸಲು ಪ್ರತಿಷ್ಠಿತ ಆಕ್ಸ್ಫರ್ಡ್ ಯೂನಿಯನ್ ನನ್ನನ್ನು ಆಹ್ವಾನಿಸಿತ್ತು. ಆದರೆ, ಚರ್ಚೆಯ ವಿಷಯವು ಭಾರತ ವಿರೋಧಿಯಾಗಿರುವುದು ನನಗೆ ತಿಳಿದು ಬಂದಿದ್ದರಿಂದ ತಾತ್ವಿಕವಾಗಿ ನಾನು ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದೇನೆ." ಎಂದು ಅವರು ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಆಹ್ವಾನ ತಿರಸ್ಕರಿಸಿರುವ ಬಗ್ಗೆ ಅವರ ವಿವರಣೆ ಹೀಗಿದೆ: "ಪ್ರತಿಷ್ಠಿತ ಯೂನಿಯನ್ನಲ್ಲಿ ನಡೆಯಲಿರುವ ಚರ್ಚೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಆಕ್ಸ್ ಫರ್ಡ್ ಡಿಬೇಟಿಂಗ್ ಸೊಸೈಟಿಯಲ್ಲಿ ಮಾತನಾಡುವುದು ಪ್ರತಿಯೊಬ್ಬ ಪ್ರಜ್ಞಾವಂತನ ಕನಸಾಗಿದ್ದರೂ, ನಿಮ್ಮ ಆಹ್ವಾನದ ವ್ಯಂಗ್ಯವು ನನಗೆ ಅರ್ಥವಾಗಿದೆ ಮತ್ತು ಸೂಕ್ತ ಪರಿಗಣನೆಯ ನಂತರ, ನಾನು ನಿಮ್ಮ ಆಹ್ವಾನವನ್ನು ಗೌರವಯುತವಾಗಿ ನಿರಾಕರಿಸಲು ನಿರ್ಧರಿಸಿದ್ದೇನೆ. 'ಈ ಸಂಸ್ಥೆಯು ಕಾಶ್ಮೀರವು ಸ್ವತಂತ್ರ ರಾಷ್ಟ್ರವೆಂದು ಪರಿಗಣಿಸುತ್ತದೆ' ಎಂಬ ಚರ್ಚಾ ವಿಷಯವು ಭಾರತದ ಸಾರ್ವಭೌಮತ್ವಕ್ಕೆ ನೇರ ಸವಾಲಾಗಿದೆ ಮತ್ತು ಅದು ನನಗೆ ಸ್ವೀಕಾರಾರ್ಹವಲ್ಲ. ಇದು ಕೇವಲ 1.4 ಶತಕೋಟಿ ಭಾರತೀಯರಿಗೆ ಮಾತ್ರವಲ್ಲ, 1990 ರ ಕಾಶ್ಮೀರ ಹತ್ಯಾಕಾಂಡದ ಬಲಿಪಶುಗಳಾದ ಲಕ್ಷಾಂತರ ಸ್ಥಳಾಂತರಗೊಂಡ ಸ್ಥಳೀಯ ಹಿಂದೂಗಳಿಗೆ ಅವಮಾನವಾಗಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು ಚರ್ಚೆಯಾಗಿ ರೂಪಿಸುವುದು ದುರಂತವನ್ನು ಆಟವಾಗಿ ಪರಿವರ್ತಿಸಿದಂತೆ ಭಾಸವಾಗುತ್ತದೆ."
ಕಾಶ್ಮೀರದ ಕಥೆ ಚರ್ಚೆಯ ವಿಷಯವಲ್ಲ; ಇದು ದುಃಖ, ಸಹನೆ ಮತ್ತು ಶಾಂತಿಯ ಅನ್ವೇಷಣೆಯ ನಿರೂಪಣೆಯಾಗಿದೆ. ಅದರ ಸ್ವಾತಂತ್ರ್ಯದ ಬಗ್ಗೆ ಅದನ್ನು 'ಹೌದು' ಅಥವಾ 'ಇಲ್ಲ' ಎಂದು ಎರಡು ಶಬ್ದಗಳಲ್ಲಿ ಹೇಳುವುದು ಎಂದರೆ ಮಾನವ ಭಾವನೆಗಳು ಮತ್ತು ಇತಿಹಾಸದ ಸಂಕೀರ್ಣ ವಿಚಾರಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. ಕಾಶ್ಮೀರಿ ಹಿಂದೂಗಳ ನರಮೇಧವು ರಕ್ತಸಿಕ್ತ ಅಧ್ಯಾಯವಾಗಿದೆ. ಇದು ಪ್ರೇಕ್ಷಕರ ಹಾಸ್ಯಭರಿತ ಪ್ರತ್ಯುತ್ತರ ಅಥವಾ ಚಪ್ಪಾಳೆಯ ವಿಷಯವಲ್ಲ" ಎಂದು ಅಗ್ನಿಹೋತ್ರಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಸೆಪ್ಟೆಂಬರ್ 2 ರಂದು ಆಕ್ಸ್ಫರ್ಡ್ ಯೂನಿಯನ್ಗೆ ಈ ಪತ್ರವನ್ನು ಬರೆದಿದ್ದು, ಅದನ್ನು ಅವರು ಗುರುವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿವೇಕ್ ಅಗ್ನಿಹೋತ್ರಿ 2022 ರ ತಮ್ಮ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕಾಗಿ ಖ್ಯಾತಿ ಪಡೆದಿದ್ದಾರೆ. ಅನೇಕರು ಚಿತ್ರವನ್ನು ಮೆಚ್ಚಿದರೆ, ಇದಕ್ಕೆ ಅಷ್ಟೇ ದೊಡ್ಡ ಪ್ರಮಾಣದ ಟೀಕೆಗಳೂ ಎದುರಾದವು. ಈ ಚಿತ್ರದಲ್ಲಿ 1990 ರ ದಶಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು, ವಿಶೇಷವಾಗಿ ಕಾಶ್ಮೀರ ಪಂಡಿತರು ಎದುರಿಸಿದ ಹಿಂಸಾಚಾರವನ್ನು ಚಿತ್ರಿಸಲಾಗಿದೆ. ಪಾಕಿಸ್ತಾನ ಬೆಂಬಲಿತ ವಿವಿಧ ಭಯೋತ್ಪಾದಕ ಸಂಘಟನೆಗಳು ನಡೆಸಿದ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಏಳು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರದಿಂದ ಪಲಾಯನ ಮಾಡಿದ್ದಾರೆ.