ತಮಿಳು ಚಿತ್ರರಂಗದ ನಾಯಕ ನಟ ವಿಜಯ್ ದಳಪತಿ ಇಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಳಪತಿ ಹುಟ್ಟುಹಬ್ಬದ ಹಿನ್ನೆಲೆ ಅವರ 68ನೇ ಸಿನಿಮಾ 'ದ ಗೋಟ್' (The Greatest of All Time) ಚಿತ್ರತಂಡ ಸಿನಿಮಾದ ವಿಶೇಷ ವಿಡಿಯೋ ಗ್ಲಿಂಪ್ಸ್ ಅನ್ನು ರಿಲೀಸ್ ಮಾಡಿದೆ. ಈ ಮೂಲಕ ತಮ್ಮ ನೆಚ್ಚಿನ ಹೀರೋನ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.
ದ್ವಿಪಾತ್ರದಲ್ಲಿ ದಳಪತಿ ವಿಜಯ್: ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿರುವ ಆ್ಯಕ್ಸನ್ ಗ್ಲಿಂಪ್ಸ್ ಅಲ್ಲಿ ವಿಜಯ್ ಅವರು ಡ್ಯುಯೆಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ನಲ್ಲಿ ಕಾಣಿಸಿಕೊಂಡಿರುವ ವಿಜಯ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಒಂದೇ ಬೈಕ್ನಲ್ಲಿ ಫೈಟ್ ಮಾಡುವ ಸಾಹಸ ದೃಶ್ಯಗಳಿವೆ. ಡಿ ಏಜಿಂಗ್ ತಂತ್ರಜ್ಞಾನದ ಮೂಲಕ ವಿಜಯ್ ಅವರನ್ನು ಯಂಗ್ ಆ್ಯಂಡ್ ಆ್ಯಕ್ಷನ್ ಲುಕ್ನಲ್ಲಿ ತೋರಿಸಲಾಗಿದೆ. ನಿರ್ದೇಶಕ ವೆಂಕಟ್ ಪ್ರಭು ಅವರು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಜಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಅಭಿಮಾನಿಗಳಿಗೆ ಹಲವು ಸರ್ಪ್ರೈಸ್: ವಿಜಯ್ ಹುಟ್ಟುಹಬ್ಬದ ಹಿನ್ನೆಲೆ ನಿನ್ನೆ 'ಚಿನ್ನ ಚಿನ್ನ ಕಂಗಲ್ ಸಿರಿಕಿರಿದೋ' ಎನ್ನುವ ಎರಡನೇ ಹಾಡಿನ ಪ್ರೋಮೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡನ್ನು AI ತಂತ್ರಜ್ಞಾನ ಬಳಸಿಕೊಂಡು ನಟ ವಿಜಯ್, ದಿವಂಗತ ಗಾಯಕಿ ರಾಜಾ ಭವತಾರಿಣಿ ಅವರ ಧ್ವನಿಯಲ್ಲಿ ರಚಿಸಲಾಗಿದೆ. ಗೀತರಚನೆಕಾರ ಕಪಿಲನ್ ವೈರಮುತ್ತು ಸಾಹಿತ್ಯ ಬರೆದಿದ್ದಾರೆ. ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪಾತಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಜಯ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಹಲವು ಸರ್ಪ್ರೈಸ್ಗಳಿವೆ ಎಂದು ಪೋಸ್ಟ್ ಮಾಡಿದ್ದು, ಈ ಹಾಡನ್ನು ಇಂದು ಸಂಜೆ 6 ಗಂಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಚಿತ್ರದ ಮೊದಲ ಹಾಡು ವಿಸ್ಲ್ ಪೋಡ್ ಹಾಡು, ಏಪ್ರಿಲ್ 14ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು.
ಹಾಲಿವುಡ್ ತಂತ್ರಜ್ಞರಿಂದ ವಿಶುವಲ್ ಎಫೆಕ್ಟ್ಸ್: ಈ ಚಿತ್ರದಲ್ಲಿ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ನಿರ್ದೇಶಕ ವೆಂಕಟ್ ಪ್ರಭು ಈ ಹಿಂದೆ ಹಲವು ಬಾರಿ ಹೇಳಿದ್ದಾರೆ. ಸಿನಿಮಾದ ವಿಶುವಲ್ ಎಫೆಕ್ಟ್ ಕೆಲಸಕ್ಕಾಗಿ ಅವತಾರ್, ಅವೆಂಜರ್ಸ್ನಂತಹ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿದಂತಹ ತಂತ್ರಜ್ಞರು ಇದರಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ಸ್ಟುಡಿಯೋ ತಜ್ಞರು ಇದರ ವಿಶುವಲ್ ಎಫೆಕ್ಟ್ಗಳನ್ನು ಮಾಡಿದ್ದಾರೆ. ಮೀನಾಕ್ಷಿ ಚೌಧರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ನಟ ಪ್ರಶಾಂತ್, ಪ್ರಭುದೇವ, ಸ್ನೇಹಾ, ಲೈಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಸ್ಟೈಲಿಶ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ದ ಗೋಟ್ ಸಿನಿಮಾಗೆ ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.
ಇದರ ಮಧ್ಯೆ ವಿಜಯ್ ಅವರ 50ನೇ ಹುಟ್ಟುಹಬ್ಬದ ಹಿನ್ನೆಲೆ ತಮಿಳುನಾಡಿನ ಅನೇಕ ಚಿತ್ರಮಂದಿರಗಳಲ್ಲಿ ತುಪಾಕಿ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಿದೆ. ಅಲ್ಲದೇ ವಿಜಯ್ ಅಭಿನಯದ ಹಲವು ಸಿನಿಮಾಗಳು ಇಂದು ವಿಶೇಷ ಪ್ರದರ್ಶನವಾಗಿ ತೆರೆಕಾಣುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ ಇತ್ತೀಚೆಗೆ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಆರಂಭಿಸಿ, ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿಯಾಗಿರುವ ದಳಪತಿ, ಕಲ್ಲಕುರಿಚ್ಚಿಯ ನಕಲಿ ಮದ್ಯ ಸೇವಿ ಸಾವನ್ನಪ್ಪಿರುವ ಘಟನೆ ಹಿನ್ನೆಲೆ, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಂತೆ, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸೂಚಿಸಿ ವಿಜಯ್ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: 'ಕವಲುದಾರಿ' ಬಳಿಕ ವಿಶೇಷ ತನಿಖಾಧಿಕಾರಿಯಾಗಿ ರಿಷಿ: 'ರುದ್ರ ಗರುಡ ಪುರಾಣ' ಪೋಸ್ಟರ್ ರಿಲೀಸ್ - Rishi Poster