ಮುಂಬೈ : ಹಿರಿಯ ಪತ್ರಿಕಾ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪ್ರದೀಪ್ ಅವರ ನಿಧನದ ಸುದ್ದಿಯನ್ನು ಎಎನ್ಐಗೆ ಖಚಿತಪಡಿಸಿದ ಅವರ ಪುತ್ರ ಪ್ರಥಮೇಶ್, ಭಾನುವಾರ ಮುಂಜಾನೆ ತಮ್ಮ ತಂದೆ ನಿಧನರಾದರು ಎಂದು ಮಾಹಿತಿ ನೀಡಿದರು.
ಕಳೆದ ರಾತ್ರಿ ಕುಟುಂಬದೊಂದಿಗೆ ಭೋಜನ ಮಾಡಿ ಮಲಗಿದ ನಂತರ ಹಿರಿಯ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಸ್ವಸ್ಥರಾಗಿದ್ದಾರೆ. ಅವರ ಮಗ ಪ್ರಥಮೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ ಅದಕ್ಕೂ ಮೊದಲೇ ಅವರು ನಿಧನರಾದರು ಎಂದು ವರದಿಗಳು ತಿಳಿಸಿವೆ.
Pradeep Bandekar ji’s passing is a personal loss…His decades-long bond with our family goes beyond the lens….He will be dearly missed and fondly remembered. Om Shanti🙏🏼 pic.twitter.com/faer1ewcpg
— Ajay Devgn (@ajaydevgn) August 11, 2024
ತಮ್ಮ ದಶಕಗಳ ವೃತ್ತಿಜೀವನದಲ್ಲಿ, ಪ್ರದೀಪ್ ಚಲನಚಿತ್ರ ತಾರೆಯರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಅವರು ಅನೇಕ ಬಾಲಿವುಡ್ ಸ್ಟಾರ್ಗಳೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು. ಅಜಯ್ ದೇವಗನ್ ರಿಂದ ಹಿಡಿದು ಮನೋಜ್ ಬಾಜಪೇಯಿಯವರೆಗೆ ಅವರು ಚಲನಚಿತ್ರೋದ್ಯಮದ ಸೆಲೆಬ್ರಿಟಿಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿದ್ದರು.
ಪ್ರದೀಪ್ ಬಾಂದೇಕರ್ ಅವರ ನಿಧನದ ಸುದ್ದಿ ತಿಳಿದ ನಂತರ, ಅಜಯ್ ದೇವಗನ್ ಮತ್ತು ಬಿಪಾಶಾ ಬಸು ಸೇರಿದಂತೆ ಭಾರತೀಯ ಚಲನಚಿತ್ರೋದ್ಯಮದ ಹಲವಾರು ಸದಸ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.
"ಪ್ರದೀಪ್ ಬಾಂದೇಕರ್ ಜಿ ಅವರ ನಿಧನವು ನನಗೆ ವೈಯಕ್ತಿಕ ನಷ್ಟವಾಗಿದೆ... ನಮ್ಮ ಕುಟುಂಬದೊಂದಿಗಿನ ಅವರ ದಶಕಗಳ ಸುದೀರ್ಘ ಬಂಧವು ಕಲ್ಪನೆಗೂ ಮೀರಿದ್ದಾಗಿದೆ.... ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಮತ್ತು ಅವರನ್ನು ಪ್ರೀತಿಯಿಂದ ಸದಾ ನೆನಪಿಸಿಕೊಳ್ಳುತ್ತೇವೆ. ಓಂ ಶಾಂತಿ" ಎಂದು ಅಜಯ್ ಎಕ್ಸ್ ನಲ್ಲಿ ಬರೆದಿದ್ದಾರೆ.
ಪ್ರದೀಪ್ ಬಾಂದೇಕರ್ ಅವರ ನಿಧನದ ಬಗ್ಗೆ ಬಿಪಾಶಾ ತಮ್ಮ ಇನ್ ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ, "ಪ್ರದೀಪ್ ಜೀಯವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ಶಕ್ತಿ ತುಂಬಲಿ." ಎಂದು ಬಿಪಾಶಾ ಪೋಸ್ಟ್ ಮಾಡಿದ್ದಾರೆ.
ನಟ ನೀಲ್ ನಿತಿನ್ ಮುಖೇಶ್ ಕೂಡ ಪ್ರದೀಪ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ನೀಲ್, "ಪ್ರದೀಪ್ ಜೀ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಜೀವನದ ಕೆಲವು ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಕ್ಕಾಗಿ ಮತ್ತು ಎಂದೂ ಮರೆಯಲಾಗದ ನಿಮ್ಮ ನಗು ಮತ್ತು ಸಕಾರಾತ್ಮಕತೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು." ಎಂದು ಬರೆದಿದ್ದಾರೆ.
ಇದನ್ನೂ ಓದಿ : ಲೊಕಾರ್ನೊ ಫಿಲ್ಮ್ ಫೆಸ್ಟಿವಲ್: ಶಾರುಖ್ ಖಾನ್ಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಪ್ರಶಸ್ತಿ ಗರಿ - Pardo Alla Carriera Award