ಹೈದರಾಬಾದ್: 'ಮಾಣಿಕ್ಯ' ಚಿತ್ರದಲ್ಲಿ ನಟ ಸುದೀಪ್ ಜೊತೆ ನಟಿಸಿದ್ದ ಬಹುಭಾಷಾ ನಟಿ ವರಲಕ್ಷ್ಮಿ ಶರತ್ಕುಮಾರ್ ಇತ್ತೀಚಿಗಷ್ಟೇ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದರು. ಮುಂಬೈ ಮೂಲದ ನಿಕೋಲಾಯ್ ಸಚ್ದೇವ್ ಅವರ ಜೊತೆಗೆ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದ ಅವರ ನಿಶ್ಚಿತಾರ್ಥ ಇದೀಗ ಚರ್ಚೆಗೆ ಕಾರಣವಾಗಿದೆ. ಕಾರಣ ನಿಕೋಲಾಯ್ ಅವರ ಲುಕ್ ಮತ್ತು ಅವರ ಹಿಂದಿನ ಮದುವೆ.
ದಕ್ಷಿಣ ಭಾರತದಲ್ಲಿ ತಮ್ಮ ರಗಡ್ ನಟನೆಯಿಂದ ಸದ್ದು ಮಾಡಿರುವ ನಟಿ ವರಲಕ್ಷ್ಮಿ, ಇದೀಗ ಅಷ್ಟೇ ಖಡಕ್ ಆಗಿ ತಮ್ಮ ಬಗ್ಗೆ ಟ್ರೋಲ್ ಮಾಡಿದವರಿಗೆ ಉತ್ತರಿಸಿದ್ದಾರೆ. 'ನನ್ನ ತಂದೆ ಕೂಡ ಎರಡು ಬಾರಿ ಮದುವೆಯಾಗಿದ್ದರು. ಇದರಲ್ಲಿ ತಪ್ಪೇನಿದೆ. ಅವರು ಖಷಿಯಾಗಿದ್ದಾರೆ. ನನ್ನ ಹಾಗೂ ನಿಕ್ ಸಂಬಂಧ ಬಗ್ಗೆ ಕೂಡ ಹಲವು ಮಂದಿ ಮಾತನಾಡುವುದನ್ನು ಕೇಳಿದೆ. ಅವರು ನೋಡುಗರಿಗೆ ಅಂದವಾಗಿ ಕಾಣದೆ ಹೋಗಬಹುದು. ಆದರೆ, ನನ್ನ ಕಣ್ಣಿಗೆ ಹ್ಯಾಂಡ್ಸಮ್ ಆಗಿ ಕಾಣುತ್ತಾರೆ. ನಮ್ಮ ಸಂಬಂಧದ ಬಗ್ಗೆ ನಕಾರಾತ್ಮಕ ಟೀಕೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾರದೋ ಟೀಕೆಗೆ ನಾನು ಏಕೆ ಉತ್ತರಿಸಬೇಕು. ಈ ರೀತಿ ನಕಾರಾತ್ಮಕ ಟೀಕೆಗೆ ಮುಂಚಿನಿಂದಲೂ ನಾನು ಉತ್ತರಿಸುವ ಅಭ್ಯಾಸ ಇಲ್ಲ' ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವರಲಕ್ಷ್ಮಿ ಮಾರ್ಚ್ 1ರಂದು ಅವರು ಆರ್ಟ್ ಗ್ಯಾಲರಿಸ್ಟ್ ಆಗಿರುವ ನಿಕೋಲಾಯ್ ಸಚ್ದೇವ್ ಜೊತೆ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥವಾಗಿದ್ದರು. ಈ ವಿಡಿಯೋವನ್ನು ಇಂಡಸ್ಟ್ರಿ ಟ್ರಾಕರ್ ಆಗಿರುವ ರಮೇಶ್ ಬಾಲಾ ತಮ್ಮ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ ಜೊತೆಗೆ ವರಲಕ್ಷ್ಮಿ ಮತ್ತು ನಿಕ್ ಪ್ರೇಮ ಕಥೆಯನ್ನು ತಿಳಿಸಿದ್ದರು. ನಿಕೋಲಾಯ್ ಮತ್ತು ವರಲಕ್ಷ್ಮಿ 14 ವರ್ಷದ ಗೆಳೆತನ ಹೊಂದಿದ್ದಾರೆ. ಈ ಸ್ನೇಹಕ್ಕೆ ಮದುವೆಯ ಮುದ್ರೆ ಒತ್ತಲು ಈ ಜೋಡಿ ನಿರ್ಧರಿಸಿದ್ದಾರೆ ಎಂದು ಬರೆದಿದ್ದರು.
ಇನ್ನು ವೃತ್ತಿ ಜೀವನದಲ್ಲಿ ನೋಡುವುದಾದರೆ ನಟಿ ವರಲಕ್ಷ್ಮಿ ಇತ್ತೀಚಿಗೆ ತೆಲುಗಿನ 'ಹನುಮಾನ್' ಚಿತ್ರದಲ್ಲಿ ಪ್ರಶಾಂತ್ ವರ್ಮಾ ಮತ್ತು ತೇಜ ಸಜ್ಜಾ ಕೊತೆಗೆ ಕಾಣಿಸಿಕೊಂಡಿದ್ದರು. ತಮಿಳಿನಲ್ಲಿ ನಟ ಧನುಷ್ ಅಭಿನಯದ 'ರಾಯನ್' ಚಿತ್ರದಲ್ಲಿ ಕೂಡ ವರಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತೆಲುಗಿನ 'ಶಬರಿ' ಮತ್ತು ಮಲಯಾಳಂನ 'ಕಲರ್ಸ್' ಸಿನಿಮಾದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: 'ಮದುವೆ' ವಿಷಯ ಗುಟ್ಟಾಗಿ ಇಡಲ್ಲಾ,'ಟೈಮ್' ಬಂದ್ರೆ ನಾನೇ ಹೇಳ್ತೇನೆ ಅಂದ್ರು ನಟಿ ವರಲಕ್ಷ್ಮಿ