'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ನಾಯಕ ನಟ ಮತ್ತು ಶೀರ್ಷಿಕೆಯಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿರುವ ಚಿತ್ರ. ಮಲಯಾಳಂನ ಫೇಮಸ್ ಲೇಡಿ ಡೈರೆಕ್ಟರ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಹಾಗೂ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಿಸುತ್ತಿರುವ ಈ ಟಾಕ್ಸಿಕ್ ಸಿನಿಮಾ ಶೂಟಿಂಗ್ ಸ್ಪಾಟ್ ಸಲುವಾಗಿ ಸಂಕಷ್ಟ ಎದುರಿಸುತ್ತಿದೆ.
ಆಗಸ್ಟ್ 8ರಂದು ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ ಸೆಟ್ಟೇರಿತು. ಮುಹೂರ್ತಕ್ಕೂ ಮುನ್ನವೇ, ಬೆಂಗಳೂರಿನ ಹೊರವಲಯದಲ್ಲಿರುವ ಹೆಚ್ಎಂಟಿ ಫ್ಯಾಕ್ಟರಿ ಅರಣ್ಯ ಭೂಮಿಯ 20 ಎಕರೆ ಜಾಗದಲ್ಲಿ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದು ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನಿರ್ಮಾಪಕರಿಗೆ ನೋಟಿಸ್ ನೀಡಲಾಗಿತ್ತು. ಆಗ ಒಂದು ವಾರ ಕಾಲ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿತ್ತು.
ಇದೀಗ ಹೆಚ್ಎಂಟಿ ಫ್ಯಾಕ್ಟರಿಯ ಅರಣ್ಯ ಭೂಮಿಯ ಜಾಗದಲ್ಲಿ ಸಿನಿಮಾ ಸೆಟ್ ನಿರ್ಮಾಣಕ್ಕಾಗಿ ನೂರಾರು ಮರ ಕಡಿದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಆದ್ರೆ ಇದು ಟಾಕ್ಸಿಕ್ ತಂಡದಿಂದಲೇ ನಡೆದಿದೆಯಾ ಎಂಬುದರ ಬಗ್ಗೆ ತನಿಖೆ ಆಗಬೇಕಿದೆ. ಟಾಕ್ಸಿಕ್ ಚಿತ್ರತಂಡದ ಮೇಲೆ ಪ್ರಕೃತಿ ನಾಶದ ಆರೋಪ ಕೇಳಿಬಂದಿದೆ. ನೈಸರ್ಗಿಕ ವಿಷಯಕ್ಕೆ ಸಂಬಂಧಿಸಿದ ಹಿನ್ನೆಲೆ, ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಸ್ವತಃ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರವೊಂದರ ಶೂಟಿಂಗ್ಗಾಗಿ ಅರಣ್ಯ ಭೂಮಿಯಲ್ಲಿ ಅಲ್ಲಿನ ಪರಿಸರಕ್ಕೆ ಹಾನಿ ಆಗಿರೋದು ಗಮನಕ್ಕೆ ಬಂದಿದೆ ಎಂದು ಸಚಿವ ಈಶ್ವರ್ ಖಂಡ್ರೆ ಪರಿಶೀಲನೆ ನಡೆಸಿದ್ದಾರೆ.
ಟಾಕ್ಸಿಕ್ ಚಿತ್ರದ ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವರು, ''ಚಿತ್ರೀಕರಣಕ್ಕಾಗಿ ಆ ಜಾಗವನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಆ ಮೂಲಕ ಹಣ ಮಾಡುತ್ತಿದ್ದಾರೆ. ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲ. ಟಾಕ್ಸಿಕ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ನಾನು ಖುದ್ದು ಹೋಗಿ ನೋಡಿದ್ದೇನೆ. ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ. ಏರಿಯಲ್ ಸರ್ವೇಯಲ್ಲಿ ಕಾಣಿಸಿದೆ. ಇದು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ. ಹಾಗಾಗಿ, ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಕಾಯ್ದೆ 24ರಡಿ ಕೇಸ್ ದಾಖಲಿಸಲು ಅವಕಾಶ ಇದೆ'' ಎಂದು ತಿಳಿಸಿದರು.
ಸದ್ಯಕ್ಕೆ ಪ್ರಾಥಮಿಕ ಹಂತದಲ್ಲಿ ಮಾಹಿತಿ ಕೊಟ್ಟಿದ್ದೇವೆ. ಒಳಗೊಳಗೆ ಏನಿದೆ ಅನ್ನೋದು ತನಿಖೆ ಆಗಬೇಕು. ಕ್ರಮಕ್ಕೆ ಪತ್ರ ಬರೆದಿದ್ದೇನೆ, ತನಿಖೆ ಆಗಲಿ. ಜಾಗದಲ್ಲಿ ಸಣ್ಣ ಗ್ರಾಮದಂತಹ ಸೆಟ್ ಹಾಕಿದ್ದಾರೆ. ಅರಣ್ಯ ಸಂಕ್ಷರಣೆ ಮಾಡೋದು ನನ್ನ ಕರ್ತವ್ಯ. ಅದರಲ್ಲಿ ಯಾವುದೇ ರಾಜಿ ಇಲ್ಲ. ಇನ್ನೇನು ದೃಢೀಕರಣ ಬೇಕು? ಅಂಗೈ ಹುಣ್ಣಿಗೆ ಕನ್ನಡಿಯ ಅವಶ್ಯಕತೆಯಿಲ್ಲ. ಸರ್ವೋಚ್ಛ ನ್ಯಾಯಾಲಯ ಏನು ಹೇಳಿದೆ, ಹೆಚ್ಎಂಟಿ ಕೂಡಾ ಸುಪ್ರೀಂ ಮೆಟ್ಟಿಲೇರಿದೆ. ಅಲ್ಲಿ ವಿಚಾರಣೆಗೆ ಬರಬೇಕಿದೆ ಎಂದರು.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಮತ್ತೊಮ್ಮೆ ಕೊಲೆ ಬೆದರಿಕೆ: 2 ಕೋಟಿ ಕೊಡುವಂತೆ ಒತ್ತಾಯ!
ಸ್ಯಾಟಲೈಟ್ ಚಿತ್ರವನ್ನೂ ನೋಡಿದ್ದೇವೆ. ಅರಣ್ಯ ಪರವಾನಗಿ ತೆಗೆದುಕೊಂಡಿಲ್ಲ. ಪಾಲಿಕೆಗೂ ದೂರು ಕೊಟ್ಟಿದ್ದೇವೆ. ಕಮಿಟಿ ಮಾಡಿದ್ದಾರೆ, ನೋಟಿಸ್ ಕೊಟ್ಟಿದ್ದಾರೆ. ಚಿತ್ರತಂಡದ ಮೇಲೆ ನಾವು ಏನನ್ನೂ ಹೇಳ್ತಿಲ್ಲ. ಯಾರದ್ದು ತಪ್ಪು ಇದೆ ಎಂಬುದನ್ನು ನೋಡಬೇಕು. ಈಗಿನ ಪರಿಸ್ಥಿತಿ ಬಗ್ಗೆ ನೋಡಿದ್ದೇವೆ. ಜಾಗದ ಬಗ್ಗೆ ಹಿಂದಿನ ಮಾಹಿತಿ ಪಡೆದಿದ್ದೇವೆಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇದನ್ನೂ ಓದಿ: ಮೋಕ್ಷಿತಾ ಮದುವೆಯಾಗದ್ದು, ಮಂಜು ಹಾದಿ ತಪ್ಪಿದ್ದು, ಚೈತ್ರಾ ಮನೆಗೆಲಸ ಮಾಡಿದ್ದು; ಬಿಗ್ ಬಾಸ್ನಲ್ಲಿ ಕಣ್ಣೀರು
ಮೊದಲೇ ಹೇಳಿದಂತೆ ಟಾಕ್ಸಿಕ್ ಸಿನಿಮಾ ಡ್ರಗ್ ಮಾಫಿಯಾ ಕಥೆಯನ್ನು ಒಳಗೊಂಡಿದೆ. ಯಶ್ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಕಿಂಗ್ ಸ್ಟಾರ್ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಈ ಸಿನಿಮಾವನ್ನ ಮಲಯಾಳಂ ಲೇಡಿ ಡೈರೆಕ್ಟರ್ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿರೋದು ಮತ್ತೊಂದು ಹೈಲೆಟ್. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈಗ ಅರಣ್ಯ ಭೂಮಿ ನಾಶದ ಆರೋಪ ಹೊತ್ತಿರುವ ಟಾಕ್ಸಿಕ್ ಚಿತ್ರತಂಡ ಮುಂದಿನ ನಡೆ ಬಗ್ಗೆ ಕುತೂಹಲವಿದೆ.