2024ರ ಲೋಕಸಭಾ ಚುನಾವಣೆಯೊಂದಿಗೆ ರಾಜಕೀಯ ಪ್ರವೇಶಿಸಿದ ಬಾಲಿವುಡ್ ಅಭಿನೇತ್ರಿ ಕಂಗನಾ ರಣಾವತ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಸಿದ್ದ ಅವರು 5,37,022 ಮತಗಳೊಂದಿಗೆ ಜಯ ಸಾಧಿಸಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಗಾಧ ಪ್ರೀತಿ ಮತ್ತು ಬೆಂಬಲಕ್ಕಾಗಿ ಮಂಡಿ ಕ್ಷೇತ್ರದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಮಂಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಂತರ ಕಂಗನಾ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿಯಲ್ಲಿ ಬರೆದಿರುವ ಅವರು, "ಈ ಪ್ರೀತಿ ಮತ್ತು ವಿಶ್ವಾಸಕ್ಕಾಗಿ ಮಂಡಿ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ಗೆಲುವು ಎಲ್ಲರಿಗೂ ಸೇರಿದ್ದು. ಇದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ನಂಬಿಕೆಯ ವಿಜಯವಾಗಿದೆ. ಇದು ಸನಾತನದ ಗೆಲುವು. ಇದು ಮಂಡಿಯ ಗೌರವದ ಗೆಲುವು'' ಎಂದು ಬಣ್ಣಿಸಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕಂಗನಾ, "ನಾವು ನರೇಂದ್ರ ಮೋದಿ ಅವರ ಹೆಸರಿನಲ್ಲಿ ಈ ಚುನಾವಣೆ ಎದುರಿಸಿದ್ದೇವೆ. ಇದು ಅವರ ವಿಶ್ವಾಸಾರ್ಹತೆ, ಅವರ ಭರವಸೆ ಮತ್ತು ಅವರ ಮೇಲಿನ ನಂಬಿಕೆಯ ಫಲಿತಾಂಶ. ಹಾಗಾಗಿ ನಾವು ಮೂರನೇ ಬಾರಿ ಸರ್ಕಾರ ರಚಿಸಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ ತಮಗೆ ಬಂದ ಟೀಕೆಗಳಿಗೆ ತಿರುಗೇಟು ನೀಡಿದರು. ವಿರೋಧ ಪಕ್ಷವನ್ನು ಗುರಿಯಾಗಿಸಿ ಹೇಳಿಕೆಗಳನ್ನು ನೀಡಿದರು. "ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಂದಿನ ಗೆಲುವು ಅದಕ್ಕೆ ಸ್ಪಷ್ಟ ಉದಾಹರಣೆ. ತಮ್ಮ ಹೆಣ್ಣುಮಕ್ಕಳ ಬಗೆಗಿನ ಅವಹೇಳನಾಕಾರಿ ಹೇಳಿಕೆಗಳನ್ನು ಮಂಡಿ ಜನರು ಸ್ವೀಕರಿಸುವುದಿಲ್ಲ'' ಎಂದು ಹೇಳಿದರು.
ಮುಂಬೈಗೆ ಸ್ಥಳಾಂತರಗೊಳ್ಳುವ ಬಗ್ಗೆ ಮಾತನಾಡಿ, ಇದು (ಹಿಮಾಚಲ ಪ್ರದೇಶ) ನನ್ನ ಜನ್ಮಸ್ಥಳ. ನಾನು ಇಲ್ಲಿ ಜನರ ಸೇವೆಯನ್ನು ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ದೃಷ್ಟಿಯಲ್ಲಿ ಸೈನಿಕರಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. ಹಾಗಾಗಿ ನಾನೆಲ್ಲಿಗೂ ಹೋಗುತ್ತಿಲ್ಲ. ಬೇರೆಯವರು ತಮ್ಮ ಬ್ಯಾಗ್ ಪ್ಯಾಕ್ ಮಾಡಬೇಕಾಗಬಹುದು. ನಾನು ಇಲ್ಲಿಯೇ ಇರುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಕಂಗನಾ ರಣಾವತ್ 72,088 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿಕ್ರಮಾದಿತ್ಯ ಅವರು 4,62,267 ಮತಗಳನ್ನು ಪಡೆದಿದ್ದರೆ, ಕಂಗನಾ 5,37,022 ಮತಗಳೊಂದಿಗೆ ಗೆಲುವಿನ ನಗೆ ಬೀರಿದ್ದಾರೆ.