ಹೈದರಾಬಾದ್: ದಿವಂಗತ ನಟ ವಿಜಯ್ ಕಾಂತ್ ಅವರನ್ನು ನಿರ್ದೇಶಕ ವೆಂಕಟ್ ಪ್ರಭು ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡಿ ತೆರೆ ಮೇಲೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಟ ದಳಪತಿ ವಿಜಯ್ ಅಭಿನಯದ 'ಗೋಟ್' (GOAT) ಚಿತ್ರದಲ್ಲಿ ಅವರನ್ನು ಜೀವಂತವಾಗಿಸುವ ಉದ್ದೇಶದಿಂದ ಅವರ ಕುಟುಂಬವನ್ನು ಸಂಪರ್ಕಿಸಿ ಅನುಮತಿ ಕೋರಿದ್ದಾರೆ. ಈ ಕುರಿತು ವಿಜಯ್ಕಾಂತ್ ಅವರ ಪತ್ನಿ ಕೂಡ ದೃಢಪಡಿಸಿದ್ದಾರೆ. ಕಳೆದ ವಾರ ಚಿತ್ರ ನಿರ್ದೇಶಕರು ನಮ್ಮ ಮನೆಗೆ ಆಗಮಿಸಿ ಈ ಕುರಿತು ಚರ್ಚಿಸಿದ್ದಾರೆ ಎಂದು ಪ್ರೇಮಲತಾ ತಿಳಿಸಿದ್ದಾರೆ. ಮಗ ಲೋಕಸಭಾ ಚುನಾವಣೆಗೆ ಸ್ಪರ್ಧೆಯಲ್ಲಿದ್ದು, ಆತನ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ದೇಸಿಯಾ ಮುರ್ಪೊಕ್ಕು ದ್ರಾವಿಡ ಕಾಳಗಂ (ಡಿಎಂಡಿಕೆ) ಅಧ್ಯಕ್ಷರಾಗಿರುವ ಪ್ರೇಮಲತಾ ಸದ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ವಿಜಯ್ಕಾಂತ್ ಅವರನ್ನು ಮರಳಿ ಬೆಳ್ಳಿತೆರೆ ಮೇಲೆ ತರುವ ಕುರಿತ ಮಾತನಾಡಿರುವ ಅವರು, ವೆಂಕಟ್ ಪ್ರಭು ಐದು ಬಾರಿ ನಮ್ಮ ಮನೆಗೆ ಆಗಮಿಸಿ, ಈ ಕುರಿತು ಚರ್ಚೆ ನಡೆಸಿದ್ದಾರೆ. ಮಗ ಷಣ್ಮುಗಪಂಡಿಯನ್ ಕೂಡ ಈ ಬಗ್ಗೆ ಹಲವು ಬಾರಿ ಮಾತುಕತೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಗೋಟ್ ತಂಡವು ವಿಜಯಕಾಂತ್ ಅವರ ಪಾತ್ರ ಪೋಷಣೆ ಸಂಬಂಧ ನನ್ನ ಅನುಮತಿ ಕೇಳಿದ್ದಾರೆ. ಕ್ಯಾಪ್ಟನ್ (ವಿಜಯಕಾಂತ್) ಕೂಡ ವಿಜಯ್ ಮತ್ತು ಅವರ ತಂದೆ ಎಸ್ಎ ಚಂದ್ರಶೇಖರ್ ಬಗ್ಗೆ ಒಲವು ಹೊಂದಿದ್ದರು. ಎಸ್ಎ ಚಂದ್ರಶೇಖರ್ ಜೊತೆಗೆ 17 ಸಿನಿಮಾಗಳನ್ನು ಮಾಡಿದ್ದಾರೆ. ಅವರ ಜೊತೆಗಿನ ಕೆಲಸವನ್ನು ಕ್ಯಾಪ್ಟನ್ ಮೆಚ್ಚುತ್ತಿದ್ದರು. ಈಗ ಕೂಡ ಅವರು ಒಪ್ಪುವ ಭರವಸೆ ಇಟ್ಟುಕೊಂಡಿದೆ. ಒಂದು ವೇಳೆ ಕ್ಯಾಪ್ಟನ್ ಬದುಕಿದ್ದರೆ, ಅವರು ಕೂಡ ವಿಜಯ್ ಜೊತೆ ನಟಿಸಲು ನಿರಾಕರಿಸುತ್ತಿರಲಿಲ್ಲ. ಚುನಾವಣೆ ಬಳಿಕ ವಿಜಯ್ ಭೇಟಿಯಾಗಲಿ. ಇದಾದ ಬಳಿಕ ಸಿಹಿ ಸುದ್ದಿ ನೀಡುತ್ತೇವೆ ಎಂದರು.
ದಳಪತಿ ವಿಜಯ್ ಅವರ 68ನೇ ಸಿನಿಮಾ ಮತ್ತು ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿರುವ ಹಿನ್ನೆಲೆ ನಟ ವಿಜಯ್ ಅವರ ಕೊನೆ ಸಿನಿಮಾ ಇದಾಗಲಿದೆ ಎನ್ನಲಾಗಿದೆ. ಈ ಚಿತ್ರ ಸೆಪ್ಟೆಂಬರ್ 5ರಂದು ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಮೀನಾಕ್ಷಿ ಚೌಧರಿ, ಪ್ರಶಾಂತ್, ಪ್ರಭುದೇವ, ಮೋಹನ್, ಜಯರಾಂ, ಸ್ನೇಹ, ಲೈಲಾ ಮತ್ತು ಅಜ್ಮಲ್ ಅಮೀರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: "ಹತ್ಯೆ ಉದ್ದೇಶವಲ್ಲ, ಬೆದರಿಸುವ ತಂತ್ರ": ಸತ್ಯ ಬಾಯ್ಬಿಟ್ಟ ಸಲ್ಮಾನ್ ಖಾನ್ ಮನೆ ಮೇಲಿನ ದಾಳಿಕೋರರು