ನಿನ್ನೆ ಎರಡು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರ ಪ್ರವೇಶಿಸಿದೆ. ಹಿರಿಯ ನಟ ರಜನಿಕಾಂತ್ ಮತ್ತು ವಿಷ್ಣು ವಿಶಾಲ್, ವಿಕ್ರಾಂತ್ ಅಭಿನಯದ ಲಾಲ್ ಸಲಾಂ ಹಾಗೂ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಸಿನಿಮಾಗಳು ತೆರೆಗಪ್ಪಳಿಸಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿದೆ.
ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರೋ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ'ದ ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿದೆ. ಫೆಬ್ರವರಿ 9 ರಂದು, ಪ್ರೇಮಿಗಳ ವಾರದ ಚಾಕೋಲೆಟ್ ದಿನದಂದು ಬಿಡುಗಡೆಯಾದ ಈ ಚಿತ್ರದ ಕಲೆಕ್ಷನ್ ಬಹಿರಂಗಗೊಂಡಿದೆ. ಫಿಲ್ಮ್ ಮೇಕರ್ ಮ್ಯಾಡೋಕ್ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಚಿತ್ರದ ಮೊದಲ ದಿನದ ಜಾಗತಿಕ ಗಳಿಕೆಯ ಅಂಕಿ - ಅಂಶಗಳನ್ನು ಬಿಡುಗಡೆ ಮಾಡಿದೆ.
75 ಕೋಟಿ ರೂ.ನ ಬಜೆಟ್ನಲ್ಲಿ ನಿರ್ಮಾಣವಾದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ 14.04 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ. ಚಿತ್ರ ನಿರ್ಮಾಪಕರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್: 2.45 ಗಂಟೆ ಅವಧಿಯ ಸಿನಿಮಾ ದೇಶಾದ್ಯಂತ 2,500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆಯಾಯಿತು. ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ಬರೆದು ನಿರ್ದೇಶಿಸಿರೋ ಚೊಚ್ಚಲ ಚಿತ್ರವಿದು. ವಿಭಿನ್ನ ಪ್ರೇಮಕಥೆಯುಳ್ಳ ಈ ಸಿನಿಮಾ ದೇಶೀಯ ಬಾಕ್ಸ್ ಆಫೀಸ್ನಲ್ಲಿ ಸರಿಸುಮಾರು 6.50 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ಇದನ್ನೂ ಓದಿ: 4 ಕೋಟಿ ರೂ. ಗಳಿಸಿದ ರಜನಿ ಸಿನಿಮಾ 'ಲಾಲ್ ಸಲಾಂ'
ಚಿತ್ರದಲ್ಲಿನ ಕೆಲ ಚುಂಬನದ ದೃಶ್ಯಗಳನ್ನು ಡಿಲೀಟ್ ಮಾಡಿದ ನಂತರ, ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ. ಸಿನಿಮಾದಲ್ಲಿ ಹಿರಿಯ ನಟ ಧರ್ಮೇಂದ್ರ ಮತ್ತು ನಟಿ ಡಿಂಪಲ್ ಕಪಾಡಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ನಿನ್ನೆಯೇ ಚಿತ್ರಮಂದಿರ ಪ್ರವೇಶಿಸಿರೋ ರಜನಿಕಾಂತ್, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅಭಿನಯದ ಲಾಲ್ ಸಲಾಂ ಸಿನಿಮಾ ತನ್ನ ಮೊದಲ ದಿನ 4.30 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಜೂ.ಎನ್ಟಿಆರ್ ನಟನೆಯ 'ದೇವರ' ಸಿನಿಮಾಗೆ ಮತ್ತೋರ್ವ ನಟಿ ಎಂಟ್ರಿ