ಹುಬ್ಬಳ್ಳಿ: "ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದೀಗ ಮೂರನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ ತಿಂಗಳ 28, 29 ಹಾಗೂ ಮಾರ್ಚ್ ತಿಂಗಳ 1, 2, 3ರಂದು ಹುಬ್ಬಳ್ಳಿಯ ಕೆಎಸ್‌ಸಿಎ ರಾಜ್ ನಗರ ಕ್ರೀಡಾಂಗಣದಲ್ಲಿ ಐದು ದಿನಗಳ ಕಾಲ ಹೊನಲು ಬೆಳಕಿನ ಪಂದ್ಯಾಟಗಳು ನಡೆಯಲಿವೆ" ಎಂದು ಪಂದ್ಯಾವಳಿಯ ರಾಯಭಾರಿ ನಟಿ ರಾಗಿಣಿ ದ್ವಿವೇದಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, "ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿ.ಆರ್.ಸುನಿಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಾ ಬರುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್‌ಗಳು ಮುಗಿದಿವೆ. ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಸೀಸನ್ 3ರ ಬಿಡ್ಡಿಂಗ್ ನಡೆಸಲಾಗಿದೆ" ಎಂದರು.
"ಒಟ್ಡು 10 ತಂಡಗಳು ಭಾಗಿಯಾಗಲಿವೆ. ಎವಿಆರ್ ಗ್ರೂಪ್ಸ್ನ ಹೆಚ್.ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಅಶ್ವಸೂರ್ಯ ರಿಯಲಿಟಿಸ್ನ ಮಾಲೀಕ ರಂಜಿತ್ ಕುಮಾರ್ ಎಸ್., ವಿನ್ ಟೈಮ್ ಟೆಕ್ನಾಲಜಿ ಮಾಲೀಕ ಅನಿಲ್ ಕುಮಾರ್ ಬಿ.ಆರ್., ಎಂಕೆಜೆ ಗ್ರೂಪ್ಸ್ನ ಮಾಲೀಕ ಮಹೇಶ್ ಕೆ.ಗೌಡ TPL ಸೀಸನ್ 3ರ ಸ್ಪಾನ್ಸರ್ಗಳಾಗಿದ್ದಾರೆ" ಎಂದು ತಿಳಿಸಿದರು.
"ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್, ಎವಿಆರ್ ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಮಾಡ್, ಇನ್‌ನೇನ್ ಕ್ರಿಕೆಟ್ ಟೀಂ, ಜಿಎಲ್‌ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸಲಿವೆ. ಕಿರುತೆರೆಯ 170ಕ್ಕೂ ಹೆಚ್ಚು ನಟ-ನಟಿಯರು ಈ ಸಾಲಿನ ಸೀಸನ್‌ನಲ್ಲಿ ಪಾಲ್ಗೊಳ್ಳುತಿದ್ದಾರೆ. ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಆಡಲಿದ್ದಾರೆ. ಸುಮಾರು 6000 ದಿಂದ 8000 ಜನ ವೀಕ್ಷಿಸಲು ಆಗಮಿಸಲಿದ್ದಾರೆ. N1 ಕ್ರಿಕೆಟ್ ಅಕಾಡೆಮಿ ಯುಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ಇರಲಿದೆ" ಎಂದರು.
"ಹುಬ್ಬಳ್ಳಿ ಜೊತೆ ನನಗೆ ಉತ್ತಮ ಸಂಬಂಧವಿದೆ. ಬೆಂಗಳೂರಿನಲ್ಲಿ ಮನೆ ಇದ್ದರೂ ನನ್ನ ಮನಸ್ಸು ಮಾತ್ರ ಹುಬ್ಬಳ್ಳಿಯಲ್ಲಿದೆ. ಉತ್ತರ ಕರ್ನಾಟಕದ ಜನರು ಚಲನಚಿತ್ರರಂಗದ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಬಾರಿಯ ಟಿಪಿಎಲ್ಗಾಗಿ ನಾವು ಹುಬ್ಬಳ್ಳಿಯನ್ನು ಆಯ್ಕೆ ಮಾಡಿದ್ದೇವೆ" ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ರವಿಶಂಕರ ಹಾಗೂ ಲೂಸ ಮಾದ ಯೋಗಿ, "ಹುಬ್ಬಳ್ಳಿಯಲ್ಲಿ ಮತ್ತೆ ಕ್ರಿಕೆಟ್ ಆಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಆರು ದಿನಗಳ ಕಾಲ ಪಂದ್ಯಾಟಗಳು ನಡೆಯಲಿವೆ. ಕ್ರಿಕೆಟ್ ಜೊತೆಗೆ ಮನರಂಜನೆ ನೀಡಲು ನಾವು ಸಿದ್ಧರಾಗಿದ್ದೇವೆ" ಎಂದರು.
ಇದನ್ನೂ ಓದಿ: 'ರವಿಕೆ ಪ್ರಸಂಗ' ಬಿಡುಗಡೆಗೆ ದಿನಗಣನೆ: ಗೀತಾ ಭಾರತಿ ಭಟ್ ಹೇಳಿದ್ದಿಷ್ಟು