ಬಿಗ್ ಬಜೆಟ್, ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಈ ಸಾಲಿನಲ್ಲೀಗ ''ಕೆರೆಬೇಟೆ'' ಚಿತ್ರವಿದೆ. ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಟೈಟಲ್, ಕಾನ್ಸೆಪ್ಟ್, ಟ್ರೇಲರ್ನಿಂದಲೇ ಬೇಜಾನ್ ಸೌಂಡ್ ಮಾಡಿರೋ 'ಕೆರೆಬೇಟೆ' ಚಿತ್ರತಂಡದ ಬಳಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ಷಮೆ ಕೋರಿದ್ದಾರೆ.
ಈ ಬಹುನಿರೀಕ್ಷಿತ ಕನ್ನಡ ಚಿತ್ರದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಬೇಕಿತ್ತು. ಆದ್ರೆ ಅನಾರೋಗ್ಯದ ಕಾರಣ ಟ್ರೇಲರ್ ರಿಲೀಸ್ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಸುದೀಪ್ ಚಿತ್ರತಂಡದ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ ಸಿನಿಮಾದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶಕ ರಾಜ್ ಗುರು ಮತ್ತು ನಾಯಕ ಗೌರಿಶಂಕರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
'ಕೆರೆಬೇಟೆ' ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. ಗೌರಿ ಶಂಕರ್ ನಾಯಕನಾಗಿ ನಟಿಸಿದ್ದಾರೆ. ರಾಜ್‌ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಗೌರಿ ಶಂಕರ್ ಇದೀಗ ಕೆರೆಬೇಟೆ ಮೂಲಕ ಮತ್ತೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಇನ್ನು, ನಿರ್ದೇಶಕ ರಾಜ್‌ಗುರು ಅವರಿಗಿದು ಚೊಚ್ಚಲ ಚಿತ್ರ. ಹಾಗಂತ ಅವರಿಗೆ ಸಿನಿರಂಗವೇನು ಹೊಸದಲ್ಲ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಇದೀಗ ಕೆರೆಬೇಟೆ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಗೌರಿ ಶಂಕರ್ಗೆ ಬಿಂದು ಜೋಡಿಯಾಗಿದ್ದಾರೆ. ಇವರ ಜೊತೆ ಸಂಪತ್, ಗೋಪಾಲ್ ದೇಶಪಾಂಡೆ, ಹರಿಣಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
ಕೆರೆಬೇಟೆ ಎಂದರೇನು? ಕೆರೆಬೇಟೆ ಎಂದರೆ ಮಲೆನಾಡು ಭಾಗದದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನಲ್ಲಿ ವರ್ಷಕ್ಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ.
ಇದನ್ನೂ ಓದಿ: ಗೌರಿ ಶಂಕರ್ ಅಭಿನಯದ ಕೆರೆಬೇಟೆ ಚಿತ್ರದ ಟ್ರೈಲರ್ ರಿಲೀಸ್: ಸಿನಿ ಪ್ರೇಮಿಗಳು ಫಿದಾ
ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆರೆಬೇಟೆ ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು ಹಳ್ಳಿ ಸೊಗಡಿನ ಕಥೆಯನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ಇಬ್ಬರೂ ತಮ್ಮ ಜನಮನ ಸಿನಿಮಾ ಬ್ಯಾನರ್‌ನಲ್ಲಿ ಈ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರೋ ಈ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ಬರೋ ಶುಕ್ರವಾರ, ಮಾರ್ಚ್ 15ರಂದು ಕೆರೆಬೇಟೆ ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ: 'ಹಾಡೇ ಹಿಂಗೈತೆ, ಸಿನಿಮಾ ಹೆಂಗಿರಬಹುದು?': ಉಪ್ಪಿಯ 'UI' ಟ್ರೋಲ್ ಸಾಂಗ್ಗೆ ಹುಬ್ಬೇರಿಸಿದ ಫ್ಯಾನ್ಸ್