ಫಸ್ಟ್ ಲುಕ್ ಮೂಲಕವೇ ಗಮನ ಸೆಳೆದಿರುವ 'ಒನ್ ಅಂಡ್ ಅ ಹಾಫ್' ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. 'ಹೇ ನಿಧಿ' ಎಂಬ ಮೆಲೋಡಿ ಗೀತೆಯನ್ನು ಇತ್ತೀಚೆಗೆ ರಿಲೀಸ್ ಮಾಡಲಾಗಿದೆ. ಹೇ ನಿಧಿ ಅಂತಾ ನಾಯಕ ಶ್ರೇಯಶ್ ಸೂರಿ ಹಾಗೂ ಮಾನ್ವಿತಾ ಹರೀಶ್ ಹೆಜ್ಜೆ ಹಾಕಿದ್ದಾರೆ. ಶ್ರೇಯಶ್ ಸೂರಿ ಪದ ಪೋಣಿಸಿರುವ ಹಾಡಿಗೆ ಶ್ರೀರಾಜ್ ಧ್ವನಿಯಾಗಿದ್ದಾರೆ.
ಶ್ರೇಯಸ್ ಚಿಂಗಾ ಬದಲಾಗಿ ಶ್ರೇಯಶ್ ಸೂರಿ: ನವ ಯುವ ಪ್ರತಿಭೆಗಳ ಜೊತೆ ಪ್ರತಿಭಾನ್ವಿತರು ಸೇರಿ ಮಾಡಿರುವ 'ಒನ್ ಅಂಡ್ ಅ ಹಾಫ್' ಸಿನಿಮಾಗೆ ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆಗೆ ತಾವೇ ನಾಯಕ ನಟನಾಗಿಯೂ ಅಭಿನಯಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಅವರೀಗ ಶ್ರೇಯಸ್ ಚಿಂಗಾ ಬದಲಾಗಿ ಶ್ರೇಯಶ್ ಸೂರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಒನ್ ಅಂಡ್ ಅ ಹಾಫ್ ತಾರಾಬಳಗ: ಶ್ರೇಯಶ್ ಸೂರಿ, ಮಾನ್ವಿತಾ ಹರೀಶ್ ಕಾಮತ್ ಜೊತೆಗೆ ಸಾಧು ಕೋಕಿಲಾ, ಅವಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಅಮಾನ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರಾಖಿ ಭೂತಪ್ಪ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ: ನಟನೆ ಜೊತೆಗೆ ನಿರ್ದೇಶನಕ್ಕಿಳಿದ ಚಂದನ್ ಕುಮಾರ್: 'ಫ್ಲರ್ಟ್' ಸ್ಟೋರಿ ಹೇಳಲಿದ್ದಾರೆ ಪ್ರೇಮಬರಹ ಹೀರೋ - Chandan Kumar
ಹೇ ನಿಧಿ ಮೆಲೋಡಿ ಹಾಡಿನ ಮೂಲಕ ಆಮಂತ್ರಣ ಕೊಟ್ಟಿರುವ ಚಿತ್ರತಂಡ ಇದೇ ಸೆಪ್ಟೆಂಬರ್ 24ಕ್ಕೆ ನಾಯಕ ಶ್ರೇಯಶ್ ಸೂರಿ ಜನ್ಮದಿನದಂದು ಹೀರೋ ಇಂಟ್ರೂಡಕ್ಷನ್ ಹಾಡನ್ನು ಅನಾವರಣ ಮಾಡಲಿದೆ. ಎಂ.ಸಿ. ಬಿಜ್ಜು ಸಾಹಿತ್ಯ ರಚಿಸಿ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ: ಬೃಂದಾವನ ನಟ ವರುಣ್ ವಿರುದ್ಧದ ಪ್ರಕರಣ: ತಪ್ಪು ತಿಳುವಳಿಕೆಯಿಂದ ದೂರು ನೀಡಿದೆ ಎಂದ ಯುವತಿ - Actor Varun Aradya Case
ಸಿನಿಮಾಗೆ ದೇವೇಂದ್ರ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮುಕೇಶ್ ಜೆ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಹಾಡುಗಳಿಗೆ ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಒನ್ ಅಂಡ್ ಆ ಹಾಫ್ ಸಿನಿಮಾವನ್ನು ಸುಲಕ್ಷ್ಮೀ ಫಿಲಂಸ್ ಅಡಿ ಆರ್.ಚರಣ್, ಬಿ.ಇಂಪನಾ ಪ್ರಸಾದ್, ಅರ್ಪಿತ್ ನಾರಾಯಣ್, ಸಂತೋಷ್ ನಾಗೇನಹಳ್ಳಿ, ಕದ್ರಿ ಮಣಿಕಂಠ್ ನಿರ್ಮಾಣ ಮಾಡುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಒನ್ ಅಂಡ್ ಆ ಹಾಫ್ ಸಿನಿಮಾವನ್ನು ಆದಷ್ಟು ಬೇಗ ತೆರೆಗೆ ತರುವ ತಯಾರಿಯಲ್ಲಿದೆ.