ಬೆಳಗಾವಿ: ''ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನು ಒಂದಾಗಿಸಲು ನಾನ್ಯಾರು?. ನಾನು ಅವರ ಮನೆಯ ಅಳಿಯ ಅಷ್ಟೇ, ಮಗನಲ್ಲ'' ಎಂದು ಕನ್ನಡದ ಜನಪ್ರಿಯ ನಟ ಡಾ. ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಕರಟಕ ದಮನಕ ಸಿನಿಮಾ ಪ್ರಚಾರಾರ್ಥವಾಗಿ ಬೆಳಗಾವಿಗೆ ಆಗಮಿಸಿದ ವೇಳೆ 'ಬಂಗಾರಪ್ಪ ಅವರ ಕುಟುಂಬವನ್ನು ಒಂದಾಗಿಸಲು ಶಿವಣ್ಣ ಏಕೆ ಮುಂದಾಗುತ್ತಿಲ್ಲ' ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟ, ''ಅವರನ್ನು ಒಂದು ಮಾಡಲು ನಾನ್ಯಾರು?. ಅವರಾಗಿಯೇ ಒಂದಾಗಬೇಕು ಅಷ್ಟೇ. ನಾನೇನು ಮಾಡಲು ಸಾಧ್ಯವಿಲ್ಲ. ನಾನು ಅವರ ಅಳಿಯ ಹೊರತು ಅವರ ಮನೆ ಮಗನಲ್ಲ'' ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಕ್ಷೇತ್ರದಿಂದ ಪತ್ನಿ ಗೀತಾ ಕಾಂಗ್ರೆಸ್ನಿಂದ ಲೋಕಸಮರಕ್ಕೆ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಸಿದ್ಧತೆ ನಡೆಯುತ್ತಿದೆ. ಎಂದಿನಿಂದ ಚುನಾವಣಾ ಪ್ರಚಾರಕ್ಕೆ ಹೋಗಬೇಕು ಅನ್ನೋದರ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಾರಿ ಸಂಪೂರ್ಣವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಎಂ.ಪಿ ಆಗಬೇಕೆಂದೇ ಚುನಾವಣೆಗೆ ಬಂದಿರೋದು'' ಎಂದು ತಿಳಿಸಿದರು.
ಯಾವ ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ''ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ. ಈ ಬಾರಿ ಬಿಸಿಲು ಜಾಸ್ತಿ ಇದೆ. ಅವರು ಪಾಪ ಒತ್ತಡದಿಂದ ಚುನಾವಣಾ ಪ್ರಚಾರಕ್ಕೆ ಬರಬಾರದು. ನಾನು ಕರೆದರೆ ಬರುತ್ತಾರೆ. ಹಾಗಂತ ಅವರನ್ನು ಕರೆಯಲು ಹೋಗಬಾರದು. ನಮ್ಮ ನಟರಿಗೆ ಯಾವಾಗಲೂ ಸ್ಪೇಸ್ ಕೊಡಬೇಕು. ಇರೋ ಪ್ರೀತಿ-ವಿಶ್ವಾಸ ಹಾಗೇ ಉಳಿಸಿಕೊಳ್ಳಬೇಕು'' ಎಂದು ತಿಳಿಸಿದರು. ಇದೇ ವೇಳೆ, ಕುಮಾರ್ ಬಂಗಾರಪ್ಪ ಅವರನ್ನು ಸಂಪರ್ಕಿಸಿದ್ದೀರಾ? ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿದರು.
ಇದನ್ನೂ ಓದಿ: ಭೈರತಿ ರಣಗಲ್ ಚಿತ್ರವು ಮಫ್ತಿಯ ಸಿಕ್ವೇಲ್ ಅಲ್ಲ, ಪ್ರೀಕ್ವೆಲ್: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್
ಲೋಕಸಭೆ ಚುನಾವಣೆಗಾಗಿ ಬೇರೆ ಕಡೆಯೂ ಪ್ರಚಾರ ಮಾಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಸಮಯ ನೋಡಿಕೊಂಡು ತೀರ್ಮಾನ ಮಾಡುತ್ತೇನೆ. ನಾನು ಶೂಟಿಂಗ್ಗೂ ಹೋಗಬೇಕು. ಗೀತಾ ಅವರ ಪ್ಲ್ಯಾನ್ ಹೇಗಿದೆ? ಅನ್ನೋದನ್ನೂ ನೋಡಬೇಕು. ಗೀತಾ ನನ್ನ ಪತ್ನಿ ಆಗಿರೋದ್ರಿಂದ್ರ ನಾನು ಅವರನ್ನು ಹೆಚ್ಚು ಬೆಂಬಲಿಸಬೇಕಾಗುತ್ತದೆ' ಎಂದು ತಿಳಿಸಿದರು.
ಇದನ್ನೂ ಓದಿ: 'ಗೂಗ್ಲಿ' ನಟಿ ಕೃತಿ ಖರಬಂದ ಮದುವೆ: ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ವರನ ಮನೆ-ವಿಡಿಯೋ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಲೋಕಸಭೆಯಲ್ಲಿ ವರ್ಕೌಟ್ ಆಗುತ್ತಾ ಎಂಬ ವಿಚಾರಕ್ಕೆ, 'ಅದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ಪ್ರಚಾರಕ್ಕೆ ಹೋಗುತ್ತೇನೆ. ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಬಹುಶಃ ವರ್ಕೌಟ್ ಆಗಬಹುದು' ಎಂದು ತಿಳಿಸಿದರು. ಇನ್ನೂ ಮಹಾದಾಯಿ ಹೋರಾಟದಲ್ಲಿ ನೂರಕ್ಕೆ ನೂರರಷ್ಟು ನಟರು ಬರುತ್ತಾರೆ. ಈ ಬಾರಿ ಎಲ್ಲರೂ ಬರುತ್ತಾರೆ. ನಾನೇ ಕರೆದುಕೊಂಡು ಬರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಶಿವಣ್ಣಗೆ ಭರ್ಜರಿ ಸ್ವಾಗತ: ಬೆಳಗಾವಿ ಪ್ರಕಾಶ ಟಾಕೀಸ್ಗೆ ಆಗಮಿಸಿದ ಹ್ಯಾಟ್ರಿಕ್ ಹೀರೋನನ್ನು ಅಭಿಮಾನಿಗಳು ಪುಷ್ಟವೃಷ್ಟಿಗೈಯ್ಯುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಬೆಳಗಾವಿ ಕುಂದಾ ಸಿಹಿ ನಮ್ಮನ್ನು ಯಾವಾಗಲೂ ಇತ್ತ ಎಳೆಯುತ್ತದೆ. ಅಪ್ಪಾಜಿ ಮತ್ತು ನಮಗೂ ಕುಂದಾ ಬಹಳ ಇಷ್ಟ ಎಂದು ತಿಳಿಸಿದರು. ಇನ್ನೂ, ಕರಟಕ ದಮನಕ ಚಿತ್ರದಲ್ಲಿಕಾಮಿಡಿ ಇದೆ. ಒಂದು ಸುಂದರ ಸಂದೇಶವಿದೆ. ನೀರು, ಊರು, ಊರಿನ ತೇರು ಎಷ್ಟು ಮುಖ್ಯ ಎಂಬುದನ್ನು ತಿಳಿಸಲಾಗಿದೆ. ಯಾರು ಸಿನಿಮಾ ನೋಡಿಲ್ಲವೋ ಅವರೆಲ್ಲರೂ ಕರಟಕ ದಮನಕ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ನಟ ಶಿವರಾಜ್ಕುಮಾರ್ ಅವರಿಗೆ ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮತ್ತಿತರರು ಸಾಥ್ ಕೊಟ್ಟರು.