ಕನ್ನಡ ಬಿಗ್ ಬಾಸ್ ಸೀಸನ್ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ದೊಡ್ಮನೆಯಲ್ಲಿ ಫೈಯರ್ ಬ್ಯಾಂಡ್ ಆಗಿದ್ದ ಲಾಯರ್ ಜಗದೀಶ್ ಕೊನೆಗೂ ಮನೆಯಿಂದ ಹೊರಗಡೆ ಬಂದಿದ್ದಾರೆ. ಸಹ ಸ್ಪರ್ಧಿಗಳಿಗೆ ಮಾತಿನಲ್ಲೇ ಕೌಂಟರ್ ಕೊಡುತ್ತಿದ್ದ ಜಗದೀಶ್, ತಮ್ಮ ಮಾತು ತಮಗೆ ತಿರುಗುಬಾಣವಾಗಿದ್ದರಿಂದ ದೊಡ್ಮನೆಯಿಂದ ಸಂಪೂರ್ಣವಾಗಿ ಹೊರಗೆ ಬರಬೇಕಾಯಿತು. ಕೋಪದಲ್ಲಿ ಜಗದೀಶ್ ಮೇಲೆ ಬಿದ್ದ ಕಾರಣ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಗೆಟ್ ಪಾಸ್ ಸಿಕ್ಕಿದೆ. ಇದರ ಬೆನ್ನಲ್ಲೇ ದೊಡ್ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.
ಹೊಸ ಅತಿಥಿಯ ಆಗಮನಕ್ಕೂ ಮುನ್ನ ಈ 'ವಾರದ ಕಥೆ'ಯಲ್ಲಿ ಕಿಚ್ಚ ಸುದೀಪ್ ಅವರು ಮನೆಯಲ್ಲಿರುವ ಎಲ್ಲ ಕಂಟೆಂಸ್ಟ್ಗಳಿಗೆ ತಮ್ಮ ಮಾತಿನಲ್ಲೇ ಬಿಸಿ ಮುಟ್ಟಿಸಿದ್ದು ನೋಡುಗರ ಗಮನ ಸೆಳೆಯಿತು. ಮಾನಸ, ಹಂಸ, ಚೈತ್ರಾ, ಉಗ್ರಂ ಮಂಜುಗೆ ಮಾತಿನಲ್ಲೇ ತಿವಿದರೆ, ಚಪಾತಿ ವಿಚಾರಕ್ಕೆ ಧರ್ಮಕೀರ್ತಿರಾಜ್ ಹಾಗೂ ಅನುಷಾಗೆ ಸಖತ್ ಟಾಂಗ್ ಕೊಟ್ಟರು.
ಕೇಕ್ ತಿನ್ನಿಸಿ ತಪ್ಪು ಮಾಡಿದವರಿಗೆ ಚುಚ್ಚಿದ ಕಿಚ್ಚ: ವಾರದ ಕಥೆಗಾಗಿ ಕಾದು ಕುಳಿದಿದ್ದ ಸ್ಪರ್ಧಿಗಳಿಗೆ ಸುದೀಪ್ ಮೊದಲು ಕೇಕ್ ತಿನ್ನಿಸಿ ಬಳಿಕ ತಪ್ಪು ಮಾಡಿದವರಿಗೆ ಸಾಕ್ಷಿ ಸಮೇತ ಮಾತಿನಲ್ಲೇ ಚುಚ್ಚಿದರು. ಬಿಗ್ ಬಾಸ್ ಮನೆಗೆ ಬಂದಾಗ ನೀವುಗಳು ಏನೇನೆಲ್ಲಾ ತಪ್ಪುಗಳನ್ನು ಮಾಡಿದ್ರಿ ಅಂತಾ ಹೇಳಬೇಕೇ ಎನ್ನುವ ಮೂಲಕ ಮಾನಸ ಮಾಡಿದ ತಪ್ಪಿಗೆ ಸುದೀಪ್ ಅವರು ಸಖತ್ತಾಗಿ ಕ್ಲಾಸ್ ತಗೆದುಕೊಂಡರು.
ನಂತರ ಚೈತ್ರಾ ಕುಂದಾಪುರ ಅವರು ಲಾಯರ್ ಜಗದೀಶ್ ಅವರ ಬಗ್ಗೆ ಮಾತನಾಡಿದ ಮಾತಿಗೆ ಸಾಕಷ್ಟು ಉದಾಹರಣೆ ಸಮೇತ ಚೈತ್ರಾಗೆ ಬೆವರು ಇಳಿಸಿದರು. ಜಗದೀಶ್ ವಿರುದ್ಧವಾಗಿ ಎಲ್ಲ ಸಹ ಸ್ಪರ್ಧಿಗಳು ತಿರುಗಿ ಬಿದ್ದಿದ್ದು, ತಪ್ಪು ಅಂತಾ ನಾನು ಹೇಳ್ತಾ ಇಲ್ಲ, ನೀವು ಮಾತನಾಡಿರೋ ಮಾತುಗಳು ತಪ್ಪು ಅಂತಾ ಬುದ್ದಿ ಹೇಳಿದರು.
ಧರ್ಮಕೀರ್ತಿರಾಜ್ ಚಪಾತಿ ಪ್ರಸಂಗ: ಬಳಿಕ ಧರ್ಮಕೀರ್ತಿರಾಜ್ ಅವರ ಚಪಾತಿ ಪ್ರಸಂಗವನ್ನು ಕೈಗೆತ್ತಿಕೊಳ್ಳುವ ಮೂಲಕ ಶೋ ನೋಡುಗರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. ಕಿತ್ತಾಟ, ಕೂಗಾಟ, ಅಲ್ಲೋಲ್ಲ ಕಲ್ಲೋಲದ ನಡುವೆ ಧರ್ಮಕೀರ್ತಿರಾಜ್ ಅವರು ತಮ್ಮ ಸಹ ಸ್ಪರ್ಧಿ ಅನುಷಾ ಜೊತೆ ಚಪಾತಿ ತಿನ್ನುತ್ತಿದ್ದ ಘಟನೆ ಕೈಗೆತ್ತಿಕೊಂಡು ಅವರಿಗೆ ಮಿಸ್ಟರ್ ಚಪಾತಿ ಅಂತ ಹೊಸ ನಾಮಕರಣ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಹನುಂತ ಲಮಾಣಿ ಎಂಟ್ರಿ: ಜಗದೀಶ್ ಹಾಗೂ ರಂಜಿತ್ ಅವರ ಡಬಲ್ ಎಲಿಮಿನೇಷನ್ ಬೆನ್ನಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಸರಿಗಮಪ' ಖ್ಯಾತಿಯ ಹನುಮಂತ ಲಮಾಣಿ ಬಿಗ್‌ಬಾಸ್ ಮನೆಗೆ ಹೊಸ ಅತಿಥಿಯಾಗಿ ಪ್ರವೇಶ ಮಾಡಿದರು. ಇವರ ಆಗಮನದ ಪ್ರೋಮೋ ಅನಾವರಣಗೊಂಡಿದ್ದು, ಅದರಲ್ಲಿ ಹನುಮಂತ ಮನೆಯ ಎಲ್ಲ ಸ್ಪರ್ಧಿಗಳಿಗೆ ತಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಪರಿಚಯ ಮಾಡಿಕೊಳ್ಳುವುದನ್ನು ಗಮನಿಸಬಹುದು. ಈ ವಿಡಿಯೋ ಜೊತೆಗೆ ಇವತ್ತಿನ ಎಪಿಸೋಡ್ ಪ್ರೋಮೋವನ್ನು ಸಹ ಹಂಚಿಕೊಳ್ಳಲಾಗಿದೆ.
ಬಿಗ್‌ಬಾಸ್ ಮನೆ ಪ್ರವೇಶಿಸುತ್ತಲೇ ಹನುಮಂತ ಅವರನ್ನು ಈ ವಾರದ ಕ್ಯಾಪ್ಟನ್ ಆಗಿ ಬಿಗ್‌ಬಾಸ್ ಹೆಸರಿಸಿದೆ. ಇದು ಶಿಶಿರ, ಚೈತ್ರಾ ಕುಂದಾಪುರ, ಭವ್ಯ ಗೌಡ, ಧರ್ಮಕೀರ್ತಿರಾಜ್ ಅವರ ಕೋಪಕ್ಕೆ ಕಾರಣವಾಗಿದೆ. ಎಲ್ಲಾ ಸ್ಪರ್ಧಿಗಳು ಹನುಮಂತನ ಮೇಲೆ ಮುಗಿ ಬೀಳುತ್ತಿರುವುದ್ದನ್ನು ಪ್ರೋಮೋದಲ್ಲಿ ವೀಕ್ಷಕರು ಗಮನಿಸಬಹುದು.
ಇದನ್ನೂ ಓದಿ: ಮನೆಯಲ್ಲಿ ಪ್ರಾಮಾಣಿಕತೆ ಎಂಬ ಪದವೇ ಸೂಟ್ ಆಗೋಲ್ಲ: ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ ಕಿಚ್ಚ