ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ 3 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ತಮ್ಮ ಮತ ಚಲಾಯಿಸುತ್ತಿದ್ದಾರೆ. ಪ್ರಕಾಶ್ ರಾಜ್, ಸಪ್ತಮಿ ಗೌಡ, ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಅಮೂಲ್ಯ, ಗಣೇಶ್ ಸೇರಿದಂತೆ ಸೆಲೆಬ್ರಿಟಿಗಳಿಂದ ಮತದಾನ ನಡೆದಿದೆ.
ಅಮೂಲ್ಯ, ಸಪ್ತಮಿ, ಜಗ್ಗೇಶ್: ಬಿಇಟಿ ಕಾನ್ವೆಂಟ್ ಬೂತ್ಗೆ ನಟಿ ಅಮೂಲ್ಯ ಜಗದೀಶ್ ದಂಪತಿ ಆಗಮಿಸಿ ಮತದಾನ ಮಾಡಿದರು. ಜೆ.ಪಿ ನಗರದಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ ಮತ ಚಲಾಯಿಸಿದ್ದಾರೆ. ಮಲ್ಲೇಶ್ವರಂನ ಎಮ್.ಇ.ಎಸ್ ಕಾಲೇಜಿನಲ್ಲಿ ನವರಸನಾಯಕ ಜಗ್ಗೇಶ್ ಮತದಾನ ಮಾಡಿದ್ದಾರೆ.
ರಾಜ್ ಕುಟುಂಬದಿಂದ ಮತದಾನ: ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಂಗಳಮ್ಮ ಜೊತೆಯಾಗಿ ಸದಾಶಿವನಗರದ ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್ನಲ್ಲಿ ಮತದಾನ ಮಾಡಿದರು.
ಕೆಂಡಸಂಪಿಗೆ ಹೀರೋ ಮತದಾನ: ಚಾಮರಾಜನಗರ ತಾಲೂಕಿನ ಮೂಡಲಪುರ ಗ್ರಾಮದಲ್ಲಿ ನಟ ವಿಕ್ಕಿ ವರುಣ್ ಮತದಾನ ಮಾಡಿದ್ದಾರೆ. ಮಧ್ಯರಾತ್ರಿ ಬೆಂಗಳೂರಿನಿಂದ ಬಂದು ಬೆಳಗ್ಗೆಯೇ ಕೆಂಡಸಂಪಿಗೆ ಹೀರೋ ಮತದಾನ ಮಾಡಿ ವೋಟಿಂಗ್ನ ಮಹತ್ವ ಸಾರಿದ್ದಾರೆ. ಸ್ವ ಗ್ರಾಮದಲ್ಲಿ ಮತದಾನದ ಬಳಿಕ ಮಾತನಾಡಿದ ವಿಕ್ಕಿ, 'ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ದೇಶಕ್ಕಾಗಿ, ನಾಡಿಗಾಗಿ ನಮ್ಮ ಊರಿಗಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ನಾನು ಬೆಂಗಳೂರಿಗೆ ಶಿಫ್ಟ್ ಆಗಿದ್ದರೂ ಮತದಾನದ ಹಕ್ಕನ್ನು ಊರಲ್ಲೇ ಉಳಿಸಿಕೊಂಡಿದ್ದೇನೆ' ಎಂದು ತಿಳಿಸಿದರು.
ಗಣೇಶ್, ಪ್ರಕಾಶ್ ರಾಜ್: ಆರ್.ಆರ್ ನಗರದ ಮೌಂಟ್ ಕಾರ್ಮಲ್ ಮತಗಟ್ಟೆಗೆ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಆಗಮಿಸಿ ಮತ ಚಲಾಯಿಸಿದರು. ಕಲಾ ದಂಪತಿಗಳದ ವಿಕ್ರಮ್ ಸೂರಿ ಹಾಗೂ ನಮಿತ ರಾವ್ ಬೆಂಗಳೂರು ಉತ್ತರ, ಯಶವಂತಪುರ ಕ್ಷೇತ್ರದಲ್ಲಿ ಮತದಾನ ಮಾಡಿದರು. ಬೆಂಗಳೂರಿಗೆ ಬಂದು ಮತದಾನ ಮಾಡಿದ ಪ್ರಕಾಶ್ ರಾಜ್, ಮತದಾನ ಮಾಡುವುದು ನನ್ನ ಹಕ್ಕು. ಬದಲಾವಣೆಗಾಗಿ ಮತ ಚಲಾಯಿಸಿದ್ದೇನೆ. ನನಗೆ ಮತದಾನದಲ್ಲಿ ನಂಬಿಕೆ ಇದೆ ಎಂದು ತಿಳಿಸಿದರು.
ಶ್ರೀಮುರಳಿ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾನದ ಕೇಂದ್ರಕ್ಕೆ ಆಗಮಿಸಿ ನಟ ಶ್ರೀ ಮುರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರದ ವಸಂತನಗರದ ಮೌಂಟ್ ಕಾರ್ಮೆಲ್ನಲ್ಲಿರುವ ಮತದಾನ ಕೇಂದ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.
ಹೇಮಾ ಮಾಲಿನಿ ಮತದಾನ: ಉತ್ತರ ಪ್ರದೇಶದ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಮತದಾನ ಮಾಡಿದ್ದು, ''ಉತ್ತಮವಾಗಿ ಸಾಗುತ್ತಿದೆ. ಇದು ಮೊದಲ ಹಂತಕ್ಕಿಂತ ಶೇ.100ರಷ್ಟು ಉತ್ತಮವಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ನಾನು ಸಹ ವೈಯಕ್ತಿಕವಾಗಿ ಜನರಿಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದ್ದೇನೆ. ಮತ ಚಲಾಯಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲವೂ ಚೆನ್ನಾಗಿ ಸಾಗಲಿದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ" ಎಂದು ತಿಳಿಸಿದರು.
ಭಾರತಿ ವಿಷ್ಣವರ್ಧನ್, ಪ್ರೇಮ, ಜನ್ಯ ವೋಟಿಂಗ್: ಬೆಂಗಳೂರು ಮಂಗಮ್ಮನಪಾಳ್ಯದ ಜಾನ್ಸನ್ ಶಾಲೆಯ ಮತಗಟ್ಟೆಗೆ ಆಗಮಿಸಿ ನಟಿ ಪ್ರೇಮ ಮತ ಚಲಾಯಿಸಿದರು. ಮತದಾನಕ್ಕೆ ಬಂದ ನಟಿ ಜೊತೆಗೆ ಚುನಾವಣೆ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ಅವರು ಹೆಬ್ಬಾಳದ ಮತಗಟ್ಟೆಯಲ್ಲಿ ಮತಚಲಾಯಿಸಿದ್ದಾರೆ. ಮತ್ತೊಂದೆಡೆ, ಜಯನಗರದ ಸುದರ್ಶನ್ ವಿಧ್ಯಾಮಂದಿರದ ಮತಗಟ್ಟೆಯಲ್ಲಿ ಹಿರಿಯ ನಟಿ ಭಾರತಿ ವಿಷ್ಣವರ್ಧನ್ ಮತ ಚಲಾಯಿಸಿದ್ದಾರೆ.