ದೇಶದೆಲ್ಲೆಡೆ ಲೋಕಸಭೆ ಚುನಾವಣೆಯ ಕಾವೇರಿದೆ. ನಿನ್ನೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, 2ನೇ ಹಂತಕ್ಕೆ ಭರ್ಜರಿ ಪ್ರಚಾರ ಮುಂದುವರಿದಿದೆ. ಮೇ 7ಕ್ಕೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.
ಚುನಾವಣೆ ಅಂದಾಕ್ಷಣ ಆಯಾ ಪಕ್ಷದ ಅಭ್ಯರ್ಥಿ ಜೊತೆ ಸಿನಿ ತಾರೆಯರ ಕಲರವ ಜೋರಾಗಿ ಇರುತ್ತಿತ್ತು. ಯಾಕೋ ಏನೋ? ಈ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರತುಪಡಿಸಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಪ್ರಚಾರದಿಂದ ದೂರ ಉಳಿದಿದ್ದರು. ಆದ್ರೆ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಕಳೆ ಬರಲಿದೆ.

ಹೌದು, ಕನ್ನಡದ ಕೆಲ ಸ್ಟಾರ್ ನಟ ನಟಿಯರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಅಖಾಡಕ್ಕೆ ಇಳಿಯಲಿದ್ದಾರಂತೆ. ಈಗಾಗಲೇ ಶಿವಮೊಗ್ಗದಲ್ಲಿ ಶಿವರಾಜ್‌ಕುಮಾರ್ ಅವರು ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಪ್ರಚಾರ ಮಾಡುತ್ತಿದ್ದಾರೆ. ಇನ್ನು, ಕನ್ನಡದ ಕೆಲ ತಾರೆಯರು ಶಿವಮೊಗ್ಗ ಲೋಕ ಸಮರಕ್ಕೆ ಎಂಟ್ರಿಯಾಗಲಿದ್ದಾರೆ.
ಗೀತಾ ಅವರನ್ನು ಈ ಬಾರಿ ಗೆಲ್ಲಿಸಬೇಕೆಂದು ಶಿವಣ್ಣ ಎಲೆಕ್ಷನ್ ಟಿಕೆಟ್ ಅನೌನ್ಸ್ ಅದಾಗಿನಿಂದಲೂ ಪತ್ನಿ ಜೊತೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಭರ್ಜರಿ ಪ್ರಚಾರ ಮಾಡುವ ಮೂಲಕ ಶಿವಮೊಗ್ಗ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಹ್ಯಾಟ್ರಿಕ್ ಹೀರೋನ ಆಪ್ತರು ಹೇಳುವ ಹಾಗೆ ಏಪ್ರಿಲ್ 29 ರಿಂದ ಮೇ 3ರ ವರೆಗೆ ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್ ಪರ ಜನಪ್ರಿಯ ನಟ ಧ್ರುವ ಸರ್ಜಾ, ನಟರಾಕ್ಷಸ ಡಾಲಿ ಧನಂಜಯ್, ಸಲಗ ವಿಜಯ್, ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ, ನೆನಪಿರಲಿ ಪ್ರೇಮ್, ವಿಜಯ್ ರಾಘವೇಂದ್ರ, ನಿಶ್ವಿಕಾ ನಾಯ್ಡು, ನಿಧಿ ಸುಬ್ಬಯ್ಯ, ಅಮೃತಾ ಅಯ್ಯಂಗಾರ್, ಅನುಶ್ರೀ ಅವರು ಶಿವಮೊಗ್ಗದಲ್ಲಿ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಸ್ವತಃ ಹ್ಯಾಟ್ರಿಕ್ ಹೀರೋನೇ ಸ್ಟಾರ್ಸ್ ಜೊತೆ ಖುದ್ದು ಮಾತನಾಡಿದ್ದು, ಈ ಎಲ್ಲಾ ತಾರೆಯರು ಗೀತಾ ಅವರ ಪರವಾಗಿ ಸುಡು ಬಿಸಿಲಿನಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ ಎಂದು ಶಿವಣ್ಣನ ಆಪ್ತರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ನೀವು ಪ್ರಶ್ನಿಸಲು ಇಂದು ತಪ್ಪದೇ ಮತದಾನ ಮಾಡಿ: ನಟ ಶಿವರಾಜ್ ಕುಮಾರ್ - Actor Shivaraj Kumar
2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಸ್ಪರ್ಧೆ ಮಾಡಿದ್ದರು. ಆಗ ಕೂಡ ಉಪೇಂದ್ರ, ವಿಜಯ್, ರಾಗಿಣಿ ದ್ವಿವೇದಿ ಸೇರಿದಂತೆ ಸಾಕಷ್ಟು ಸಿನಿ ತಾರೆಯರಿಂದ ಅಬ್ಬರದ ಪ್ರಚಾರ ನಡೆದಿತ್ತು. ಆದ್ರೆ ಅಂದು ಗೀತಾ ಸೋಲಿನ ರುಚಿ ಕಂಡಿದ್ದರು. ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿರುವ ಅವರ ಪರವಾಗಿ ಕನ್ನಡದ ಖ್ಯಾತ ನಟ ಹಾಗು ನಟಿಯರು ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ: ರಾಯಚೂರಿನ ಹನುಮಾನ್ ದೇವಸ್ಥಾನದಲ್ಲಿ ಸುದೀಪ್ ದಂಪತಿಯಿಂದ ವಿಶೇಷ ಪೂಜೆ - Sudeep