'ಪೌಡರ್' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಹಾಸ್ಯ ಪ್ರಧಾನ ಚಿತ್ರ. ಸಿನಿಮಾ ಬಿಡುಗಡೆಗೆ ಇನ್ನು ಐದು ದಿನಗಳಷ್ಟೇ ಬಾಕಿ ಇದ್ದು, ಚಿತ್ರತಂಡ ಪ್ರಚಾರ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ.
ಈಗಾಗಲೇ ತನ್ನ ಭರ್ಜರಿ ಪ್ರಚಾರದ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶ ಕಂಡಿರುವ "ಪೌಡರ್" ಚಿತ್ರ ತನ್ನ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಇತ್ತೀಚೆಗೆ ಫೀನಿಕ್ಸ್ ಮಾಲ್ ಆಫ್ ಏಷಿಯಾದಲ್ಲಿ ನಡೆದ "ಪೌಡರ್ ಹಬ್ಬ"ಕ್ಕೆ ಕನ್ನಡ ಚಿತ್ರರಂಗದ ಹಲವರು ಸಾಕ್ಷಿಯಾಗಿದ್ದರು.
ಹೌದು, ಪೌಡರ್ ಹಬ್ಬದಲ್ಲಿ ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಐಂದ್ರಿತಾ ರೈ, ಹೆಸರಾಂತ ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಹಲವರು ಆಗಮಿಸಿದ್ದರು. ಪೌಡರ್ ತಾರಾಬಳಗದಲ್ಲಿರುವ ದಿಗಂತ್ ಮಂಚಾಲೆ, ಧನ್ಯಾ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವೀಕ್ಷಕರ ಗಮನ ಸೆಳೆದರು. ವಾಸುಕಿ ವೈಭವ್ ಮತ್ತು ಎಂ.ಸಿ ಬಿಜ್ಜು ಅವರ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಆಕರ್ಷಿಸಿತು.
ಪೌಡರ್ ಒಂದು ಕಾಮಿಡಿ ಸಿನಿಮಾ. ಜನಾರ್ಧನ್ ಚಿಕ್ಕಣ್ಣ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯಾ ರಾಮ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರೆ, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಸೇರಿದಂತೆ ಹಲವರು ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಶೀರ್ಷಿಕೆ ಸಿನಿಪ್ರಿಯರಿಗೆ ಸಿಗುವ ಮೊದಲ ಆಮಂತ್ರಣ. ಸಿನಿಮಾ ಅನೌನ್ಸ್ ಆಗುತ್ತಿದ್ದಂತೆ ಸಿನಿಪ್ರಿಯರು ಟೈಟಲ್ ಬಗ್ಗೆ ತಮ್ಮ ಕುತೂಹಲ ವ್ಯಕ್ತಪಡಿಸಿದ್ದರು. ಈಗಾಗಲೇ ಅನಾವರಣಗೊಂಡಿರುವ ಟ್ರೇಲರ್ ಸೇರಿದಂತೆ ಸಿನಿಮಾದ ಕಂಟೆಂಟ್ಗಳು ಸ್ಟೋರಿಯ ಸುಳಿವು ಬಿಟ್ಟುಕೊಟ್ಟಿದೆ. ಪೌಡರ್ ಒಂದರ ಪ್ರಭಾವಕ್ಕೊಳಗಾಗಿ ಯುವಕರು ಸಿರಿವಂತರಾಗಲು ಮಾಡುವ ಪ್ರಯತ್ನಗಳ ಸುತ್ತ ಕಥೆ ಸಾಗುತ್ತದೆ. ಕಂಪ್ಲೀಟ್ ಎಂಟರ್ಟೈನ್ಮೆಂಟ್ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯಲ್ಲೂ ಪಾಸಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ವಿಶೇಷ ಪೋಸ್ಟ್ ಶೇರ್ ಮಾಡುವ ಮೂಲಕ, ತಮ್ಮ ಸಿನಿಮಾ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ ಎಂದು ಚಿತ್ರತಂಡ ತಿಳಿಸಿತ್ತು. ಸ್ವಾತಂತ್ರ್ಯ ದಿನದಂದು ಹಂಚಿಕೊಂಡ ಪೋಸ್ಟರ್ನಲ್ಲಿ ಯು/ಎ ಎಂಬುದು ಕೇಸರಿ ಬಿಳಿ ಹಸಿರು ಬಣ್ಣದಲ್ಲಿದ್ದು, ಬಹಳ ಆಕರ್ಷಕವಾಗಿ ಕಾಣಿಸಿತ್ತು.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಸೇರಿ ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ ಇದೇ ಆಗಸ್ಟ್ 23ರಂದು ತೆರೆ ಕಾಣಲಿದೆ.
ಇದನ್ನೂ ಓದಿ: 'ಕಾಂತಾರ' ಸೇರಿ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು ಯಾವ ಒಟಿಟಿಯಲ್ಲಿ ಲಭ್ಯ? - National Award Winning Films On OTT