ನವದೆಹಲಿ: ದೇಶದ ಪ್ರಸಿದ್ಧ ಜಾನಪದ ಗಾಯಕಿ, 'ಬಿಹಾರದ ಕೋಗಿಲೆ' ಎಂದೇ ಜನಪ್ರಿಯರಾಗಿದ್ದ ಶಾರದಾ ಸಿನ್ಹಾ (72) ಮಂಗಳವಾರ ರಾತ್ರಿ 9.20ಕ್ಕೆ ಕೊನೆಯುಸಿರೆಳೆದರು. ಇವರು ಸೆಪ್ಪಿಸೇಮಿಯಾ ಸೇರಿದಂತೆ ಇತರೆ ಗಂಭೀರ ಸ್ವರೂಪದ ಖಾಯಿಲೆಗಳಿಂದ ಬಳಲುತ್ತಿದ್ದರು.
ಸೆಪ್ಪಿಸೇಮಿಯಾ ಎಂದರೆ ವೈದ್ಯಕೀಯ ಪರಿಭಾಷೆಯಲ್ಲಿ ರಕ್ತ ವಿಷಕಾರಿಯಾಗುವಿಕೆ ಎಂದರ್ಥ. ಶಾರದಾ ಸಿನ್ಹಾ ಅವರು ಇದಲ್ಲದೇ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಶಾರದಾ ಸಿನ್ಹಾ 1970ರಿಂದಲೂ ಸಂಗೀತ ಕ್ಷೇತ್ರದಲ್ಲಿ ಹೆಸರಾದ ಚೇತನ. ಭೋಜ್‌ಪುರಿ, ಮೈಥಿಲಿ ಮತ್ತು ಹಿಂದಿ ಜಾನಪದ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಬಿಹಾರದ ಜಾನಪದ ಲೋಕಕ್ಕೆ ಸಿನ್ಹಾ ಸಾಂಸ್ಕೃತಿಕ ರಾಯಭಾರಿಯಂತಿದ್ದರು. ಅದರಲ್ಲೂ ವಿಶೇಷವಾಗಿ ಚತ್ ಗೀತೆ ಎಂದರೆ ತಕ್ಷಣ ಇವರ ಹೆಸರೇ ಜನಜನಿತ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಶಾರದಾ ಸಿನ್ಹಾರ ಹೆಸರು ಚತ್ ಉತ್ಸವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಬಿಹಾರ ಹಾಗು ಉತ್ತರ ಭಾರತದ ವಿವಿಧೆಡೆ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
'ಹಮ್ ಆಪ್ ಕೇ ಕೌನ್' ಸಿನಿಮಾದ 'ಬಾಬುಲ್' ಹಾಡು ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
ಶಾರದಾ ಸಿನ್ಹಾ ಕಲಾಸೇವೆಯನ್ನು ಪರಿಗಣಿಸಿ 2018ರಲ್ಲಿ ಕೇಂದ್ರ ಸರ್ಕಾರ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳೂ ಇವರನ್ನು ಅರಸಿಕೊಂಡು ಬಂದಿವೆ.
सुप्रसिद्ध लोक गायिका शारदा सिन्हा जी के निधन से अत्यंत दुख हुआ है। उनके गाए मैथिली और भोजपुरी के लोकगीत पिछले कई दशकों से बेहद लोकप्रिय रहे हैं। आस्था के महापर्व छठ से जुड़े उनके सुमधुर गीतों की गूंज भी सदैव बनी रहेगी। उनका जाना संगीत जगत के लिए एक अपूरणीय क्षति है। शोक की इस… pic.twitter.com/sOaLvUOnrW
— Narendra Modi (@narendramodi) November 5, 2024
ಪ್ರಧಾನಿ ಮೋದಿ ಸಂತಾಪ: ಖ್ಯಾತ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರ ನಿಧನ ವಾರ್ತೆ ತೀವ್ರ ಬೇಸರ ಉಂಟುಮಾಡಿದೆ. ಅವರ ಮೈಥಿಲಿ ಮತ್ತು ಭೋಜ್ಪುರಿ ಜಾನಪದ ಹಾಡುಗಳು ಕಳೆದ ಹಲವು ದಶಕಗಳಿಂದ ಭಾರಿ ಜನಪ್ರಿಯತೆ ಗಳಿಸಿದ್ದವು. ಅವರ ಸುಮಧುರ ಹಾಡುಗಳು ಶ್ರೇಷ್ಠ ಹಬ್ಬವಾದ ಚತ್ ವೇಳೆ ಎಂದಿಗೂ ಅನುರಣಿಸಲಿವೆ. ಸಂಗೀತ ಕ್ಷೇತ್ರಕ್ಕೆ ಶಾರದಾ ಸಾವು ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಟ ಮಿಥುನ್ ಚಕ್ರವರ್ತಿ ಮಾಜಿ ಪತ್ನಿ ಹೆಲೆನಾ ಅಮೆರಿಕದಲ್ಲಿ ನಿಧನ